’ ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ಜನರ ಸಮಸ್ಯೆ ಬಗೆಹರಿಸಿ’ ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಮಾಜಿ ಸಿಎಂ ಡಿವಿಎಸ್‌ಗೆ ಮನವಿ

0

ನೆಲ್ಯಾಡಿ: ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಜನರಿಗೆ ಕಸ್ತೂರಿ ರಂಗನ್ ವರದಿ ಮತ್ತು ಪರಿಸರ ಸಂರಕ್ಷಣೆ ನೆಪದಲ್ಲಿ ಬರುವ ಯೋಜನೆಗಳಿಂದ ಹಾಗೂ ಆನೆ ದಾಳಿಯಿಂದ ಆಗುತ್ತಿರುವ ಸಾವು-ನೋವು, ಕೃಷಿ ನಾಶದಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಒತ್ತಡ ತರುವಂತೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿಯವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರೂ ಆದ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಲಾಗಿದೆ.
ಪಶ್ಚಿಮ ಘಟ್ಟ ಶ್ರೇಣಿ ಪ್ರದೇಶ ಮತ್ತು ಜನವಸತಿ ಇರುವ ಪ್ರದೇಶದ ಗ್ರಾಮಗಳಿಗೆ ಗಡಿ ಗುರುತು ಆಗದೇ ಇರುವುದರಿಂದ ಕೆಲವೊಂದು ಗ್ರಾಮಗಳಲ್ಲಿ ಕೃಷಿ ಭೂಮಿಯ ಆರ್‌ಟಿಸಿಯಲ್ಲಿ ಸರಕಾರಿ ಭೂಮಿ ಮತ್ತು ಅರಣ್ಯ ಎಂದು ನಮೂದಿಸಿರುವುದರಿಂದ ರೈತರಿಗೆ ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ವಾಸಿಸುತ್ತಿದ್ದರೂ ಹಕ್ಕುಪತ್ರ, ನಿವೇಶನ ಪತ್ರ ಸಿಕ್ಕಿರುವುದಿಲ್ಲ. ಈ ಸಮಸ್ಯೆಗಳನ್ನು ಜಂಟಿ ಸರ್ವೆ ಮಾಡಿ ಪರಿಹರಿಸಬೇಕಾಗಿದೆ. ಅಲ್ಲದೇ ಪರಿಸರ ಸಂರಕ್ಷಣೆ ಯೋಜನೆಗಳನ್ನು ಸರಕಾರ ಮಾಡುವಾಗ ಜನವಸತಿ ಪ್ರದೇಶ ಮತ್ತು ಗ್ರಾಮಗಳನ್ನು ಒಟ್ಟು ಮಾಡಬೇಕು. ಯಾವುದೇ ಯೋಜನೆ ಬರುವಾಗ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಗ್ರಾಮಗಳಲ್ಲಿ ಜನಾಭಿಪ್ರಾಯಗಳನ್ನು ಪಡೆದುಕೊಂಡು ಮಾಡಬೇಕು. ಆನೆಗಳನ್ನು ಮತ್ತು ನರಹಂತಕ ಪ್ರಾಣಿಗಳನ್ನು ಜನವಸತಿ ಪ್ರದೇಶದಿಂದ ಅರಣ್ಯ ಇಲಾಖೆಯು ಜನವಸತಿ ಇಲ್ಲದ ದೂರದ ಪ್ರದೇಶಗಳಿಗೆ ಬಿಡುವಂತಾಗಬೇಕು. ಮಾನವ ಪ್ರಾಣಿಗಳ ಸಂಘರ್ಷ ತಪ್ಪಿಸಲು ಯೋಜನೆಯನ್ನು ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here