ಪುತ್ತೂರು: ಹೇಳಬಾರದು ಆದರೂ ಹೇಳುತ್ತಿದ್ದೇನೆ ಕಳೆದ ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ ಸೆಲ್ಫಿ ತೆಗೆದದ್ದೇ ಜನರು ಹೇಳಿಕೊಳ್ಳುತ್ತಿರುವ ದೊಡ್ಡ ಸಾಧನೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಮಾಜಿ ಶಾಸಕರನ್ನು ಮಾತಿನ ಮೂಲಕ ಕುಟುಕಿದ್ದಾರೆ.
ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕನಾಗಿ ನಾಲ್ಕೇ ತಿಂಗಳಲ್ಲಿ ಕುಡಿಯುವ ನೀರಿಗಾಗಿ 1010 ಕೋಟಿ ಅನುದಾನ ತರಲಾಗಿದೆ. ಕೆಎಂಎಫ್‌ನ್ನು ಪುತ್ತೂರಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಪುತ್ತೂರು ನಗರದ ಚರಂಡಿ ಕಾಮಗಾರಿಗೆ 500 ಕೋಟಿ ಮಂಜೂರಾಗಲಿದೆ ಎಂದು ಹೇಳಿದರು. ಇಷ್ಟು ವರ್ಷ ಪುತ್ತೂರಿಗೆ ಇಷ್ಟು ದೊಡ್ಡ ಅನುದಾನ ಬಂದಿದೆಯಾ? ಬಿಜೆಪಿಯ ಘಟಾನುಘಟಿ ನಾಯಕರುಗಳು, ಜನಪ್ರತಿನಿಧಿಗಳಿದ್ದರೂ ಕೊಯಿಲದ ಪಶು ವೈದ್ಯಕೀಯ ಆಸ್ಪತ್ರೆ ನಾಲ್ಕು ಇಂಚು ದೂಳು ಹಿಡಿದಿತ್ತು. ಅದೇ ಕಾಲೇಜಿಗೆ ಅನುದಾನ ಕೊಡಿ ಎಂದು ಸಿಎಂ ಅವರಲ್ಲಿ ಕೇಳಿದ್ದೇನೆ ಕೊಡುವುದಾಗಿ ತಿಳಿಸಿದ್ದಾರೆ, ಖಂಡಿತವಾಗಿಯೂ ಕೊಯಿಲದ ಪಶು ವೈದ್ಯಕೀಯ ಆಸ್ಪತ್ರೆ ಅಭಿವೃದ್ದಿ ಆಗಿಯೇ ಆಗುತ್ತದೆ. ಅಲ್ಲಿ ಸುಮಾರು 175 ಮಂದಿಗೆ ಉದ್ಯೋಗವೂ ದೊರೆಯಲಿದೆ. ಪುತ್ತೂರಿಗೆ ಹಣದ ಹೊಳೆಯೇ ಹರಿದು ಬರಬೇಕು ಇಲ್ಲವಾದರೆ ಇಲ್ಲಿ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಹಿಂದಿನ ರೀತಿಯಲ್ಲೇ ಅಡಿಕೆ ಹಣವೇ ಇಲ್ಲಿ ರೊಟೇಶನ್ ಆಗುತ್ತದೆ ಎಂದು ಹೇಳಿದರು.