ಬರ ನಿಭಾಯಿಸುವಲ್ಲಿ ಸರಕಾರ ವಿಫಲ -ಕೋಟ ಶ್ರೀನಿವಾಸ ಪೂಜಾರಿ

0

ಒಂದು ವಾರದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡದಿದ್ದರೆ ವಿಧಾನಸಭೆ ಮುತ್ತಿಗೆ ಚಳುವಳಿ -ಎಚ್ಚರಿಕೆ

ಪುತ್ತೂರು: ರಾಜ್ಯದ 216 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲಗೊಂಡಿದೆ. ರಾಜ್ಯದಲ್ಲಿ ಸುಮಾರು 33 ಸಾವಿರ ಕೋಟಿ ನಷ್ಟ ಅಂದಾಜಿಸಲಾಗಿದೆ ಆದರೆ ರಾಜ್ಯ ಸರಕಾರ ಕೇವಲ 360 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಒಂದು ವಾರದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡದಿದ್ದರೆ ರಾಜ್ಯ ಬಿಜೆಪಿಯಿಂದ ವಿಧಾನಸಭೆ ಮುತ್ತಿಗೆ ಚಳುವಳಿ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.


ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಿಹಾರ ಹಣ ಬಿಡುಗಡೆ ಮಾಡಬೇಕಾದ ರಾಜ್ಯ ಸರಕಾರ ಕೇಂದ್ರವನ್ನು ದೂರುತ್ತಾ ಕೂತಿದೆ. ರಾಜ್ಯಕ್ಕೆ ಪರಿಹಾರ ನೀಡುವಂತೆ ಕೋರಿ ಪ್ರಧಾನಿಯವರ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ. ಪ್ರತಿಪಕ್ಷವಾಗಿ ನಾವು ಕೂಡ ಬರುತ್ತೇವೆ. ತನ್ನ ಜವಾಬ್ದಾರಿ ನಿರ್ವಹಣೆ ಮಾಡದೆ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದರು.


ಕೇಂದ್ರದ ಮೇಲೆ ಗೂಬೆ ಕೂರಿಸುವ ಸರಕಾರ:
ಹಿಂದಿನ ಬಿಜೆಪಿ ಸರಕಾರ ಆರಂಭಿಸಿದ ಕಿಸಾನ್ ಸಮ್ಮಾನ್ ಯೋಜನೆಯನ್ನು ಸಿದ್ಧರಾಮಯ್ಯ ಸರಕಾರ ನಿಲ್ಲಿಸಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 9.50 ಲಕ್ಷ ಕುಟುಂಬಗಳಿಗೆ ಇನ್ನೂ ಹಣ ಸಿಕ್ಕಿಲ್ಲ. 22.50 ಲಕ್ಷ ಟನ್ ಅಕ್ಕಿ ಕೇಂದ್ರ ಸರಕಾರ ಉಚಿತವಾಗಿ ನೀಡುತ್ತಿದ್ದರೂ, ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ರಾಜ್ಯ ಸರಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಚುನಾವಣೆಗೆ ಮುನ್ನ ಹೇಳಿದ ಮಾತಿಗೂ ಈಗ ಸಿಎಂ, ಡಿಸಿಎಂ ಹೇಳುತ್ತಿರುವ ಮಾತುಗಳಿಗೂ ವ್ಯತ್ಯಾಸ ಕಾಣುತ್ತಿದೆ. ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳಿಗೆ ಬಸ್ ಸಿಗದಿರುವ ಸನ್ನಿವೇಶವಿದೆ. ಕನಿಷ್ಠ 3 ಸಾವಿರ ಹೊಸ ಬಸ್‌ಗಳನ್ನು ಸರಕಾರ ಬಿಡಬೇಕಿತ್ತು. ಮತ್ತೊಂದು ಕಡೆ ನಿರುದ್ಯೋಗಿ ಪದವೀಧರರಿಗೆ ನೀಡಬೇಕಾದ ಯುವನಿಧಿ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.


ಕಾರ್ಮಿಕರ ಮಕ್ಕಳಿಗೆ ಅನ್ಯಾಯ -ಚರ್ಚಿಸುವೆ:
ಪ್ರತೀ 10 ಲಕ್ಷಕ್ಕಿಂತ ಹೆಚ್ಚಿನ ನಿರ್ಮಾಣ ಕಾಮಗಾರಿ ನಡೆದಾಗ ಅದರಲ್ಲಿ 1 ಶೇಕಡಾ ಸೆಸ್‌ನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಡಲಾಗುತ್ತದೆ. ಈ ಮೂಲಕ ಸಂಗ್ರಹವಾದ ದೊಡ್ಡ ಮೊತ್ತ ಕಾರ್ಮಿಕ ಇಲಾಖೆಯಲ್ಲಿದೆ. ಅದನ್ನು ಕಾರ್ಮಿಕರ ಮಕ್ಕಳ ಕಲ್ಯಾಣವೂ ಸೇರಿದಂತೆ ಇನ್ನಿತರ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕು. ಕಾರ್ಮಿಕರ ಮಕ್ಕಳಿಗೆ ಅನ್ಯಾಯವಾದರೆ ಸಹಿಸೋದಿಲ್ಲ. ಡಿ.4ರಿಂದ ಆರಂಭಗೊಳ್ಳುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಷಯ ಚರ್ಚಿಸುತ್ತೇನೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಜಿಲ್ಲಾ ಒಬಿಸಿ ಮೋರ್ಛಾ ಅಧ್ಯಕ್ಷ ಆರ್.ಸಿ. ನಾರಾಯಣ್, ಪುತ್ತೂರು ಮಂಡಲ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಧುನಿಕ ಮಾದರಿಯಲ್ಲಿ ಬಾಲವನವಾದರೆ ತಪ್ಪಿಲ್ಲ
ಎರಡು ದಿನಗಳ ಹಿಂದೆ ಸುಳ್ಯ ತಾಲೂಕಿನ 4 ಗ್ರಾಪಂಗಳಿಗೆ ಭೇಟಿ ನೀಡಿ ಪಂಚಾಯಿತ್‌ ರಾಜ್ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇಂದು ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಒಳಮೊಗ್ರು ಗ್ರಾಪಂಗಳಿಗೆ ಭೇಟಿ ನೀಡಿ ಸದಸ್ಯರು ಮತ್ತು ಸಿಬ್ಬಂದಿಗಳೊಂದಿಗೆ ವಿಚಾರ ವಿನಿಮಯ ನಡೆಸಿದ್ದೇನೆ. ಬೆಳಿಗ್ಗೆ ಡಾ. ಶಿವರಾಮ ಕಾರಂತರ ಬಾಲವನಕ್ಕೆ ಭೇಟಿ ನೀಡಿದೆ. ಕಾರಂತರು ನನ್ನ ಊರಿನವರೇ ಆದ ಕಾರಣ ಅವರ ಮೇಲೆ ನನಗೆ ವಿಶೇಷ ಗೌರವ. ಹಾಗಾಗಿ ಪುತ್ತೂರಿಗೆ ಬಂದಾಗಲೆಲ್ಲ ಕಾರಂತರ ಬಾಲವನಕ್ಕೂ ಭೇಟಿ ನೀಡುತ್ತಿದ್ದೇನೆ. ಬಾಲವನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಗಮನಿಸಿದೆ. ಆಧುನಿಕ ಮಾದರಿಯಲ್ಲಿ ಬಾಲವನ ಅಭಿವೃದ್ಧಿಯಾದರೆ ತಪ್ಪಿಲ್ಲ ಎಂದರು.

LEAVE A REPLY

Please enter your comment!
Please enter your name here