ಪೊಲೀಸ್ ಇಲಾಖೆಯ ಭಯವಿದ್ದರೆ ಇಂಥ ಕೃತ್ಯಗಳು ಕಡಿಮೆಯಾಗುತ್ತವೆ-ಯು.ಟಿ.ಖಾದರ್
ಪುತ್ತೂರು:ನ.6ರಂದು ರಾತ್ರಿ ಕೊಲೆಯಾಗಿರುವ ಅಕ್ಷಯ್ ಕಲ್ಲೇಗ ಅವರ ಮನೆಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ನ.13ರಂದು ಭೇಟಿ ನೀಡಿ ಸಂತಾಪ ಸೂಚಿಸಿದರು.ಅಕ್ಷಯ್ ಕಲ್ಲೇಗ ಅವರ ತಂದೆ ಚಂದ್ರಶೇಖರ್ ಗೌಡ ಅವರು ಸ್ಪೀಕರ್ ಅವರಿಗೆ ಘಟನೆ ಮಾಹಿತಿ ನೀಡಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು ಸಾಮಾಜಿಕವಾಗಿ,ಧಾರ್ಮಿಕವಾಗಿ ಸಮಾಜಕ್ಕೆ ಸೇವೆ ಮಾಡಿ ಗುರುತಿಸಿಕೊಂಡಿದ್ದ ಸಹೋದರ ಅಕ್ಷಯ್ ಅವರ ಕೊಲೆಕೃತ್ಯವನ್ನು ಖಂಡಿಸುವುದಾಗಿ ಹೇಳಿದರು.ಈ ರೀತಿ ಭೀಕರವಾಗಿ ಹತ್ಯೆ ಮಾಡಿರುವ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು.ಪೊಲೀಸ್ ಇಲಾಖೆಯ ಭಯ ಇದ್ದರೆ ಇಂತಹ ಕೃತ್ಯಗಳು ಬಹಳಷ್ಟು ಕಡಿಮೆ ಆಗುತ್ತದೆ.ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದನ್ನು ಸವಾಲಾಗಿ ಸ್ವೀಕರಿಸಬೇಕೆಂದು ಹೇಳಿದರು.ಪತ್ತೂರಿನಲ್ಲಿ ಮುಂದೆ ಯಾವುದೇ ರೀತಿಯ ದುರ್ಘಟನೆ ಆಗದ ರೀತಿಯಲ್ಲಿ ನಾವು ಸಮಾಜಕ್ಕೆ ಎಚ್ಚರಿಕೆ ಕೊಡಬೇಕಾದರೆ ಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಠಿಣ ಶಿಕ್ಷೆ ವಿಽಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆಯದ್ದಾಗಿದ್ದು ಈ ಕುರಿತು ತಾನೂ ಪೊಲೀಸ್ ಇಲಾಖೆಯೊಂದಿಗೆ ಮಾತನಾಡುತ್ತೇನೆ.ಇದರ ಜೊತೆಗೆ ಸೌಹಾರ್ದ ರೀತಿಯ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಯುವಕರು ಮಾಡಬೇಕೆಂದರು.ಈ ಸಂದರ್ಭ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಹಿತ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.