ಸುದ್ದಿ ಪತ್ರಿಕೆ, ವೆಬ್‌ಸೈಟ್, ಚಾನೆಲ್‌ನ ಮಾಧ್ಯಮ-ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಸಾಧನವಾಗಿ ಕೆಲಸ ಮಾಡಲಿ-ದೀಪಾವಳಿಯ ಆಶಯ ಈಡೇರಿಸಲಿ

0

ನಾನು ಎಂ.ಬಿ.ಬಿ.ಎಸ್. ವೈದ್ಯಕೀಯ ವಿದ್ಯಾಭ್ಯಾಸ ವನ್ನು ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ಮಾಡಿ ಸುಳ್ಯ, ಪುತ್ತೂರಿನಲ್ಲಿ ಪ್ರಾಕ್ಟೀಸ್ ಮಾಡಿದ್ದೆ. ಸುಳ್ಯದಲ್ಲಿ ಆಸ್ಪತ್ರೆ ನಡೆಸಿದ್ದೆ. 1982ರಲ್ಲಿ ಸುಳ್ಯ ನಗರದ ಕುಡಿಯುವ ನೀರಿನ ನಳ್ಳಿಗಳಲ್ಲಿ ಮಣ್ಣು ಮಿಶ್ರಿತವಾದ ನೀರು ಬರುತ್ತಿರುವುದನ್ನು ಕಂಡು ವಿಚಾರಿಸಿದಾಗ ಪುರಸಭೆ ಪಯಸ್ವಿನಿ ಹೊಳೆಯ ನೀರನ್ನು ಯಾವುದೇ ಶುದ್ಧೀಕರಣ ನಡೆಸದೆ ನೇರವಾಗಿ ಜನರಿಗೆ ಕೊಡುತ್ತಿರುವುದನ್ನು ತಿಳಿದು ಆಶ್ಚರ್ಯ ಉಂಟಾಗಿತ್ತು. ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ಜನರ ಮುಂದಿಟ್ಟು ಅದರಿಂದ ಹರಡಬಹುದಾದ ಕಾಯಿಲೆಗಳ ಬಗ್ಗೆ ವೈದ್ಯನಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದೆ. ಆದರೆ ಅದರಿಂದ ಸಿಟ್ಟುಗೊಂಡ ಪುರಸಭೆಯವರು ನಾನು ವಿನಾಃಕಾರಣ ಜನರನ್ನು ಹೆದರಿಸುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ನನ್ನ ಮೇಲೆ ಕೇಸು ದಾಖಲಿಸಿದ್ದರು. ಅದರಿಂದ ನಾನು ಹೆದರಿಹೋಗಿದ್ದೆ. ಸಲಹೆಗಾಗಿ ಹೋಗಿದ್ದ ನನಗೆ ಉಡುಪಿಯ ಬಳಕೆದಾರರ ವೇದಿಕೆಯವರು ಬಳಕೆದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಶುದ್ಧ ಕುಡಿಯುವ ನೀರು ಕೇಳುವುದು ಗ್ರಾಹಕರ ಹಕ್ಕು. ಪೂರೈಸುವುದು ಪುರಸಭೆಯ ಕರ್ತವ್ಯ ಎಂಬ ಅರಿವು ಮೂಡಿಸಿದ್ದರು. ನೀವೇ ಗ್ರಾಹಕರಾಗಿ ಅವರ ಮೇಲೆ ಕೇಸ್ ಮಾಡಬಹುದೆಂದು ತಿಳಿಸಿದ್ದರು. ಆ ಪ್ರಕಾರ ನಾನೇ ಪುರಸಭೆಯ ಮೇಲೆ ಅಶುದ್ಧ ನೀರಿನ ಸರಬರಾಜಿನ ವಿರುದ್ಧ ಕೇಸು ದಾಖಲಿಸಿದೆ. ಪುರಸಭೆ ಶುದ್ಧೀಕರಣ ಘಟಕ ಸ್ಥಾಪಿಸುವ ಭರವಸೆ ನೀಡಿದ್ದರಿಂದ ಕೇಸು ರಾಜಿಯಲ್ಲಿ ಇತ್ಯರ್ಥವಾಯಿತು.

ವೈದ್ಯನಾಗಿದ್ದರೂ ಕುಡಿಯುವ ನೀರಿನ ಹಕ್ಕುಗಳ ಬಗ್ಗೆ ನನಗೆ ಮಾಹಿತಿ ಇಲ್ಲದಿರುವುದನ್ನು ಈ ಪ್ರಕರಣ ತೋರಿಸಿಕೊಟ್ಟದ್ದರಿಂದ ಈ ರೀತಿ ಬಳಕೆದಾರರ ಹಕ್ಕುಗಳ ಬಗ್ಗೆ ಮಾಹಿತಿಯ ಕೊರತೆಯೇ ಜನರ ಶೋಷಣೆಗೆ ಕಾರಣವೆಂದು ತಿಳಿದು ಬಳಕೆದಾರರ ಹಕ್ಕುಗಳ ಅರಿವಿಗಾಗಿ ಸುಳ್ಯದಲ್ಲಿ ಬಳಕೆದಾರರ ವೇದಿಕೆ ಪ್ರಾರಂಭಿಸಿದೆ. ಸರಕಾರದ ಪ್ರತಿಯೊಂದು ಇಲಾಖೆಯ, ಅವರ ಕರ್ತವ್ಯ, ಸೇವೆಗಳ ಮತ್ತು ಜನರ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆದು ಅದಕ್ಕೆ ಅಪೂರ್ವ ಬೆಂಬಲ ದೊರಕಿತ್ತು. ಈ ಪ್ರೋತ್ಸಾಹದಿಂದ ಲಂಚ-ಭ್ರಷ್ಟಾಚಾರದ ವಿರುದ್ಧ ಹೋರಾಟವಾಗಿ ತಾಲೂಕಿನ ಅತೀ ದೊಡ್ಡ ಭ್ರಷ್ಟಾಚಾರಿ ಯಾರೆಂಬ ಆಯ್ಕೆಯನ್ನು ಜನರೇ ಮಾಡುವಂತೆ 1985ರ ಜನವರಿ 10 ಸುಳ್ಯ ಜಾತ್ರೆಯಂದು ಸಾರ್ವಜನಿಕ ಕಾರ್ಯಕ್ರಮ ಹಾಕಿಕೊಂಡೆವು. ಕಾರ್ಯಕ್ರಮ ಯಶಸ್ವಿಯಾಯಿತು. ಜನರು ಅಂದಿನ ಸಬ್‌ಇನ್‌ಸ್ಪೆಕ್ಟರ್ ಕಾಂಬ್ಲೆ ಅತೀ ದೊಡ್ಡ ಭ್ರಷ್ಟಾಚಾರಿಯೆಂದು ಘೋಷಿಸಿದರು. ಇದರಿಂದ ಅಸಮಾಧಾನಗೊಂಡ ಪೊಲೀಸ್ ಇಲಾಖೆಯಿಂದ ನಾವು ಮಾಡಿದ ಕೆಲಸಕ್ಕೆ ಕ್ಷಮೆಯಾಚಿಸಬೇಕೆಂದು, ಇಲ್ಲದಿದ್ದರೆ ಸಿಕ್ಕಸಿಕ್ಕಲ್ಲಿ ಕೇಸು ದಾಖಲಿಸುತ್ತೇವೆ ಎಂಬ ಒತ್ತಡಗಳು, ಬೆದರಿಕೆಗಳು ಬರಲಾರಂಭಿಸಿದವು.

ಅದರಿಂದ ಹೊರಗೆ ಬರುವುದು ಹೇಗೆಂದು ತಿಳಿಯದೆ ಚಿಂತೆಯಲ್ಲಿರುವಾಗ 1985ರಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆ ಆಯಿತು. ಜನಪ್ರತಿನಿಧಿಯ ಆಯ್ಕೆ ಮತ್ತು ಅವರ ಹಕ್ಕುಗಳ ಬಗ್ಗೆ ತಿಳಿದಿದ್ದ ನಾನು ಈ ಅವಕಾಶ ಉಪಯೋಗಿಸಿಕೊಂಡು ಸಮಸ್ಯೆಯಿಂದ ಹೊರಬರಲು ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಪ್ರಚಾರಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಽಸಲು ನಿರ್ಧರಿಸಿದೆ. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಎದುರು ಬಸವನಗುಡಿಯಲ್ಲಿ, ಸಂಭಾವ್ಯ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ ಎದುರು ಕಾರ್ಕಳದಲ್ಲಿ, ಬಂಗಾರಪ್ಪರ ಎದುರು ಸೊರಬದಲ್ಲಿ ಸ್ಪರ್ಧಿಸಿದ್ದೆ. ಮುಖ್ಯಮಂತ್ರಿ ಅಭ್ಯರ್ಥಿಗಳ ಎದುರು ನನ್ನ ಸ್ಪರ್ಧೆಯಾದ್ದರಿಂದ ನನಗೆ ಅಪಾರ ರಕ್ಷಣೆ ದೊರಕಿ, ನನ್ನ ವಿಚಾರದ ಬಗ್ಗೆ ಪ್ರಚಾರವೂ ದೊರಕಿತ್ತು. ಪೊಲೀಸ್ ಇಲಾಖೆ ಮಾಡಲು ಬಯಸಿದ್ದ ಸುಳ್ಳು ಕೇಸುಗಳಿಗೆ ತಡೆಯೂ ದೊರಕಿತ್ತು. ಚುನಾವಣೆ ಕಳೆದ ಮೇಲೆ ನನಗೆ ಏನಾದರೂ ತೊಂದರೆ ಬಂದರೆ ತಿಳಿಸಿ ನಾವು ರಕ್ಷಣೆ ನೀಡುತ್ತೇವೆ ಎಂದು ಬೆಂಗಳೂರಿನ ಪತ್ರಿಕೆಯವರೂ ಹೇಳಿದ್ದರು.

ಚುನಾವಣೆ ಕಳೆದ ಮೇಲೆ ಈ ರೀತಿಯ ಜನಜಾಗೃತಿಯನ್ನುಂಟು ಮಾಡಲು ಪತ್ರಿಕೆಯ ಅವಶ್ಯಕತೆ ಮನಗಂಡು 1985ರಲ್ಲಿ ಸುಳ್ಯದಲ್ಲಿ ‘ಸುದ್ದಿ ಬಿಡುಗಡೆ ಪತ್ರಿಕೆ ಪ್ರಾರಂಭಿಸಿದೆ. ಜನರ ಹಕ್ಕುಗಳು, ಜನರ ಮೇಲಾಗುವ ಶೋಷಣೆಗಳು, ಇಲಾಖಾ ಮಾಹಿತಿಗಳು ಪ್ರಮುಖ ವಿಷಯವಾಗಿದ್ದುದರಿಂದ, ನಿಷ್ಪಕ್ಷಪಾತ ವರದಿಯಾಗಿದ್ದುದರಿಂದ ಪತ್ರಿಕೆ ಯಶಸ್ವಿಯಾಯಿತು. ಪುತ್ತೂರು, ಬೆಳ್ತಂಗಡಿಯಲ್ಲಿ ಪತ್ರಿಕೆ ಪ್ರಾರಂಭವಾಯಿತು. ಸುದ್ದಿ ಪತ್ರಿಕೆ ಮತ್ತು ಮಾಧ್ಯಮ ಪ್ರಾರಂಭದಿಂದಲೂ ಯಾರ ವಿರುದ್ಧವೂ, ಯಾರ ಪರವೂ ಇಲ್ಲದೇ ಜನಪರ ಪತ್ರಿಕೆಯಾಗಿ, ವೆಬ್‌ಸೈಟಾಗಿ, ಚಾನೆಲಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಮತ್ತು ಬಂಟ್ವಾಳ, ಮಂಗಳೂರಿನಲ್ಲಿ ಚಾನೆಲ್ ಆಗಿ ಕೆಲಸಮಾಡುತ್ತಿದೆ. ಜಗತ್ತಿನಾದ್ಯಂತ ಇರುವ ಸುಳ್ಯ, ಪುತ್ತೂರು, ಬೆಳ್ತಂಗಡಿಯವರನ್ನು ತಲುಪುತ್ತಿದೆ. ಊರಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವ ದಿಕ್ಕಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಾಕಷ್ಟು ವಿರೋಧ, ಅಡಚಣೆಗಳನ್ನು ಎದುರಿಸಿದ್ದರೂ ಜನಬೆಂಬಲದಿಂದ ಅದನ್ನು ಮೀರಿ ನಿಂತಿದ್ದೇವೆ. ಪತ್ರಿಕೆಯಲ್ಲಿ ಬರುವ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಾರ್ಯಕ್ರಮಗಳ ಮಾಹಿತಿ. ಬಲಾತ್ಕಾರದ ಬಂದ್ ವಿರುದ್ಧದ ಹೋರಾಟ, ಸಾಮಾಜಿಕ ಜಾಲತಾಣದ ದುರುಪಯೋಗದ ವಿರುದ್ಧದ ಹೋರಾಟ, ಲಂಚ-ಭ್ರಷ್ಟಾಚಾರದ ವಿರುದ್ಧದ ಆಂದೋಲನ, ಉತ್ತಮ ಸೇವೆ ಮಾಡುವವರನ್ನು ಗುರುತಿಸುವ ಕಾರ್ಯಕ್ರಮ ಪರಿಣಾಮಕಾರಿಯಾಗಿ ಕೆಲಸಮಾಡಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಇದನ್ನು ತಮ್ಮ ಪ್ರಣಾಳಿಕೆಯಾಗಿ ಆರಿಸಿಕೊಂಡು ಕೆಲಸಮಾಡುತ್ತಿದ್ದಾರೆ. ಈ ಮೇಲಿನ ವಿಚಾರಗಳಿಗೆ ಮಾನ್ಯತೆ ಸಿಗಲಿಕ್ಕಾಗಿ ಮತ್ತು ಮತದಾರರ ಹಕ್ಕುಗಳ ಜಾಗೃತಿಗಾಗಿ ನಾನು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಎದುರು ಅಮೇಥಿಯಲ್ಲಿ ಸ್ಪರ್ಧಿಸಿದ್ದೆ. ಪ್ರಧಾನಿ ಮೋದಿಯವರೆದುರು ವಾರಣಾಸಿಯಲ್ಲಿ ಸ್ಪರ್ಧಿಸಲು ಬಯಸಿದ್ದೆ. ಕಳೆದ 2023ರ ವಿಧಾನ ಸಭಾ ಚುನಾವಣೆಯಲ್ಲಿ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯರ ವರುಣ ಕ್ಷೇತ್ರದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ ಸ್ಪರ್ಧಿಸಿ ಲಂಚ-ಭ್ರಷ್ಟಾಚಾರದ ವಿರುದ್ಧ ಪ್ರಚಾರ ಮಾಡಿದ್ದೆ, ಜನಜಾಗೃತಿ ಮೂಡಿಸಿದ್ದೆ. ಅದು ಕೂಡ ಇಂದು ಪರಿಣಾಮ ಬೀರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಸಿಬ್ಬಂದಿಗಳಿಂದ, ಅಧಿಕಾರಿಗಳಿಂದ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿಸಿದ್ದಾರೆ. ರಾಜ್ಯವ್ಯಾಪಿ ಈ ಕಾರ್ಯಕ್ರಮ ನಡೆದಿದೆ. ಪ್ರಧಾನಿ ಮೋದೀಜಿಯವರು ಲಂಚ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜನರಿಗೆ ಕರೆ ನೀಡಿದ್ದಾರೆ. ಇದರಿಂದ ಲಂಚ-ಭ್ರಷ್ಟಾಚಾರ ಅನಿವಾರ್ಯ ಎಂದು ತಿಳಿಯುವುದು ಮತ್ತು ಅದಕ್ಕೆ ಮಾನ್ಯತೆ ಕೊಡುವುದು ಕಡಿಮೆಯಾಗಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹ ದೊರಕಲು ಪ್ರಾರಂಭವಾಗಿದೆ.

ಈ ಎಲ್ಲಾ ಆಂದೋಲನಗಳೊಂದಿಗೆ ಕೃಷಿಕರಿಗೆ ಕೃಷಿ ಮಾಹಿತಿ, ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಒಳಗೊಳ್ಳುವ ಕೃಷಿಮೇಳಗಳನ್ನು ಮಾಡುತ್ತಿದ್ದೇವೆ. ಕೃಷಿ ಸೇವಾ ಕ್ಲಿನಿಕ್‌ಗಳನ್ನು ತೆರೆಯುತ್ತಿದ್ದೇವೆ. ಕೃಷಿಕರು ಸ್ವಾವಲಂಬಿಗಳಾಗಿ ಶೋಷಣೆಗೆ ಒಳಗಾಗದೆ ಸ್ವತಂತ್ರರಾಗಿರಬೇಕೆಂಬ ಘೋಷಣೆ ಮೊಳಗಿಸಿದ್ದೇವೆ. ಮಳೆಕೊಯ್ಲು ಮೂಲಕ ನೀರಿನ ಅಭಾವ ನಿವಾರಿಸುವ, ಸೋಲಾರ್ ಪವರ್ ಮೂಲಕ ಬೇಕಾದಷ್ಟು ವಿದ್ಯುತ್ ಪಡೆಯುವ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಮಾಧ್ಯಮ ಈ ರೀತಿಯಾಗಿ ಕತ್ತಲಿನಿಂದ ಬೆಳಕಿನೆಡೆಗೆ ಜನರನ್ನು ಒಯ್ಯುವ ಕೆಲಸದಲ್ಲಿ ಭಾಗಿಯಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಜನರ ಪ್ರೋತ್ಸಾಹ ಬೆಂಬಲ ಇರುವವರೆಗೆ ಯಾವುದೇ ಅಡಚಣೆ ಇದ್ದರೂ, ಬೆದರಿಕೆ ಬಂದರೂ ಅದನ್ನು ಎದುರಿಸಿ ಮುಂದುವರೆಸಲಿದ್ದೇವೆ. ನಮ್ಮ ಕಾರ್ಯ ಕ್ಷೇತ್ರವನ್ನು ಹಳ್ಳಿಹಳ್ಳಿಗಳಿಗೆ, ದ.ಕ. ಜಿಲ್ಲೆಗೆ ಮತ್ತು ಬೆಂಗಳೂರಿಗೆ ವಿಸ್ತರಿಸಲಿದ್ದೇವೆ. ನಮಗೆ, ನಮ್ಮ ತಂಡಕ್ಕೆ, ಓದುಗರಿಗೆ ಮತ್ತು ಸಾರ್ವಜನಿಕರಿಗೆ ಇದನ್ನು ಮುಂದುವರೆಸಲು ಈ ದೀಪಾವಳಿ ಬೆಳಕಿನ ಶಕ್ತಿ ನೀಡಲಿ ಎಂದು ಹಾರೈಸುತ್ತಿದ್ದೇನೆ.
-ಡಾ.ಯು.ಪಿ. ಶಿವಾನಂದ ಮೊ: 9448120911

LEAVE A REPLY

Please enter your comment!
Please enter your name here