ಕಡಬ: ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆ-ವಿದ್ಯುತ್ ಬಳಕೆದಾರರಿಂದ ಅಹವಾಲು ಸಲ್ಲಿಕೆ

0

ಕಡಬ: ಬಳಕೆದಾರರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಕಡಬ ಮೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳು ನಡೆದಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುತ್ತೂರು ಮೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಲಕ್ಮೀ ಮಾಹಿತಿ ನೀಡಿದ್ದಾರೆ.

ನ.16ರಂದು ಕಡಬದಲ್ಲಿ ಜರಗಿದ ಕಡಬ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಡಬ ಉಪ ವಿಭಾಗದ 4 ಶಾಖಾ ಕಚೇರಿಗಳ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವ ಸಲುವಾಗಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ. ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದರು. ಮಂಗಳೂರು ಮೆಸ್ಕಾಂ ವೃತ್ತದ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ವಿಡಿಯೋ ಕಾನ್ಪೆರೆನ್ಸ್ ಮೂಲಕ ಸಬೆಯ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು.

ಹೆಚ್ಚುವರಿ ಫೀಡರ್ ಅಳವಡಿಕೆಗೆ 2.75 ಕೋಟಿ ರೂ:
ಕಡಬ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಮಾತನಾಡಿ, ಹೆಚ್ಚುವರಿ ಬಳಕೆದಾರರ ಹೊರೆಯಿಂದಾಗಿ ಸಮಸ್ಯೆಗೆ ಕಾರಣವಾಗಿದ್ದ ಕೊಣಾಜೆ ಹಾಗೂ ಪರಪ್ಪು ವ್ಯಾಪ್ತಿಗೆ 2 ಪ್ರತ್ಯೇಕ ಫೀಡರ್‌ಗಳು ಮಂಜೂರಾಗಿದ್ದು, 2.75 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ನೆಲ್ಯಾಡಿ ಶಾಖೆಯ ವ್ಯಾಪ್ತಿಯಲ್ಲಿ 33/11 ಕೆವಿ ಸಬ್‌ಸ್ಟೇಶನ್‌ನಲ್ಲಿ 12.5 ಎಂವಿಎ ಪರಿವರ್ತಕ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, 4 ಹೆಚ್ಚುವರಿ 11 ಕೆವಿ ಫೀಡರ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 3.79 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿ ಪೂರ್ಣಗೊಂಡಾಗ ಕಡಬ ಉಪ ವಿಭಾಗದ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದರು.

ಬಳಕೆದಾರರಿಂದ ಅಹವಾಲು ಸಲ್ಲಿಕೆ:
ಸಭೆಯಲ್ಲಿ ಭಾಗವಹಿಸಿದ ವಿದ್ಯುತ್ ಬಳಕೆದಾರರು ಹಲವು ಅಹವಾಲುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಬಲ್ಯದ ಕಿರಣ್ ಕೆ.ಪಿ. ಅವರು ಬಲ್ಯ ಬಳಿ ಕೂರಾಟ 63 ಕೆವಿಎ ವಾಹಕ ಬದಲಾವಣೆ ಬಗ್ಗೆ, ಎಂ.ಪಿ. ತೋಮಸ್ ಅವರು ನೂಜಿಬಾಳ್ತಿಲ ಬಳಿ, ಕೇಶವ ಡಿ. ಕುಬಲಾಡಿ ಅವರ ಮನೆ ಬಳಿ, ಜೋಸೆಫ್ ಪಟ್ನ ಅವರ ಮನೆ ಬಳಿ ವಾಹಕ ಬದಲಾವಣೆ ಬಗ್ಗೆ, ಕಡಬದ ಪಣೆಮಜಲು ಬಳಿ ಫಾರೆಸ್ಟ್ ಪರಿವರ್ತಕದ ವಾಹಕ ಬದಲಾವಣೆ ಬಗ್ಗೆ ಹಾಗೂ ಪಣೆಮಜಲು ಬೈಲು ಬಳಿ ಹೆಚ್ಚುವರಿ ಪರಿವರ್ತಕ ಅಳವಡಿಸುವ ಬಗ್ಗೆ ಬಳಕೆದಾರರು ನೀಡಿದ ಅಹವಾಲುಗಳನ್ನು ಸಭೆಯಲ್ಲಿ ಸ್ವೀಕರಿಸಲಾಯಿತು. ಮೆಸ್ಕಾಂ ಕಡಬ ಉಪ ವಿಭಾಗದ ಸಹಾಯಕ ಇಂಜಿನಿಯರ್ ಸತ್ಯನಾರಾಯಣ, ಅಸಿಸ್ಟಂಟ್ ಅಕೌಂಟ್ಸ್ ಆಫೀಸರ್ ಕೃಷ್ಣಮೂರ್ತಿ ಕೆಮ್ಮಾರ, ಆಲಂಕಾರು ಶಾಖಾಧಿಕಾರಿ ಪ್ರೇಮ್‌ಕುಮಾರ್, ಸರ್ವೀಸ್ ಸ್ಟೇಶನ್ ಇಂಜಿನಿಯರ್, ಬಿಳಿನೆಲೆ ಪ್ರಭಾರ ಶಾಖಾಧಿಕಾರಿ ವಸಂತ್‌ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here