ಡಿ. 26ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ
ಪುತ್ತೂರು: ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಳಕೆಗೆ ಸಿಗುವಂತಹ ಭವನವನ್ನು ನಿರ್ಮಾಣ ಮಾಡುವ ಕನಸು ನನಸಾಗುತ್ತಿದೆ. ಇಂತಹ ಭವನದ ಶಂಕುಸ್ಥಾಪನೆಗೆ ಇನ್ನು ಕೇವಲ 1 ತಿಂಗಳು ಮಾತ್ರ ಇರುವುದು. ಈ ಸಣ್ಣ ಅವಧಿಯಲ್ಲಿ ಸೂಕ್ತ ಕಾರ್ಯಯೋಜನೆ ಸಿದ್ಧಪಡಿಸಿ, ಎಲ್ಲರೂ ಒಂದಾಗಿ ಜಾರಿಗೊಳಿಸಿದರೆ ಯಶಸ್ಸು ಖಂಡಿತಾ ಎಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಹೇಳಿದರು.
ಕಡಬ ವಲಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸುಸಜ್ಜಿತ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಾಲ್ಕನಿ ಸೇರಿದಂತೆ 1200 ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಸಮುದಾಯ ಭವನ ಹೊಸ್ಮಠ ಸೇತುವೆಯ ಸಮೀಪದಲ್ಲೇ ತಲೆಎತ್ತಲಿದೆ. 2023ರ ಡಿಸೆಂಬರ್ 26ರಂದು ಶಂಕುಸ್ಥಾಪನೆ ನಡೆಯಲಿದ್ದು, 2024ರ ಡಿಸೆಂಬರ್ ಹೊತ್ತಿಗೆ ಅಂದರೆ ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ ಭವನ ನಿರ್ಮಾಣ ಕಾರ್ಯ ಪೂರ್ತಿ ಆಗಬೇಕಾಗಿದೆ. ಈ ಭವನ ನಿರ್ಮಾಣಕ್ಕಾಗಿ ಈಗಾಗಲೇ 130 ಮಂದಿ 1 ಲಕ್ಷ ರೂ.ನಂತೆ ನೀಡಿದ್ದು, 1.30 ಕೋಟಿ ರೂ. ಸಂಗ್ರಹವಾಗಿದೆ. ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನಕ್ಕೆ ಇನ್ನಷ್ಟು ಧನ ಸಂಗ್ರಹದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಂಕುಸ್ಥಾಪನಾ ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಬೇಕು ಎನ್ನುವ ಯೋಜನೆ ಸಿದ್ಧಪಡಿಸಿಕೊಂಡಿದ್ದೇವೆ ಎಂದರು.
ಶಂಕುಸ್ಥಾಪನಾ ಸಮಾರಂಭದ ದಿನ ವಾಹನ ಜಾಥಾ ನಡೆಸಲು ಉದ್ದೇಶಿಸಲಾಗಿದೆ. ಜಾಥಾದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ತಬ್ಧಚಿತ್ರ ಇರಲಿದೆ. ಕಾಲಾವಕಾಶದ ಮಿತಿಯಲ್ಲೂ ಆ ದಿನ ಎಲ್ಲರೂ ತಮ್ಮ ಮನೆಗಳಲ್ಲಿರುವ ಒಂದು ವಾಹನವನ್ನಾದರೂ ಜಾಥಾದಲ್ಲಿ ಜೋಡಿಸಿಕೊಳ್ಳಬೇಕು. ಸಮುದಾಯದ ಶಕ್ತಿಯನ್ನು ಅನಾವರಣ ಮಾಡಬೇಕಾಗಿದೆ. ರಾಜ್ಯ ನಾಯಕರುಗಳಾದ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಅಶ್ವತ್ಥ ನಾರಾಯಣ್, ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಜಗ್ಗೇಶ್, ಸಂಜೀವ ಮಠಂದೂರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಇದರೊಂದಿಗೆ ಸಮುದಾಯ ಜಾತಿ ಗಣತಿಯನ್ನು ನಡೆಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸಮುದಾಯದ ಪ್ರತಿಯೋರ್ವ ವ್ಯಕ್ತಿಯ ಗಣತಿಯೂ ಆಗಬೇಕು. ಶಂಕುಸ್ಥಾಪನೆಗೆ ಮೊದಲು ಶೇ. 25ರಷ್ಟು ಧನ ಸಂಗ್ರಹ ಆಗಬೇಕಾಗಿದೆ. ಮುಂದಿನ ಧನಸಂಗ್ರಹಕ್ಕೆ ಈ ಜಾತಿಗಣತಿಯೂ ಪೂರಕವಾಗಿರಲಿದೆ ಎಂದರು.
ಕಡಬ ಸ್ಪಂದನಾ ಸಹಕಾರಿ ಸಂಘದ ಮುಖ್ಯ ಪ್ರವರ್ತಕ ಕೇಶವ ಅಮೈ ಮಾತನಾಡಿ, ಈಗಾಗಲೇ 15 ಮಂದಿ ಪ್ರವರ್ತಕರು ಸಹಕಾರಿ ಸಂಘದ ಕಾರ್ಯದಲ್ಲಿ ಕೈಜೋಡಿಸಿಕೊಂಡಿದ್ದೇವೆ. 1000ಕ್ಕೂ ಮಿಕ್ಕಿ ಶೇರುಗಳ ಸಂಗ್ರಹ ಆಗಬೇಕಾಗಿದೆ. ಓರ್ವ ಸದಸ್ಯ ಶೇರು ಸೇರಿದಂತೆ ಒಟ್ಟು 1150 ರೂ. ನೀಡಬೇಕಾಗಿದೆ. ಹೀಗೆ 1000 ಶೇರುಗಳಾದಾಗ ಮಾತ್ರ ಸಹಕಾರಿ ಸಂಘಕ್ಕೆ ಅನುಮತಿ ಸಿಗಲಿದೆ. ಈ ನಿಟ್ಟಿನಲ್ಲಿ ಗ್ರಾಮದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ವಲಯ ಉಪಾಧ್ಯಕ್ಷರು ಸಹಕರಿಸಬೇಕು. ಮುಂದಿನ 1 ವಾರದ ಅವಧಿಯಲ್ಲಿ ಸದಸ್ಯತ್ವ ಭರ್ತಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿಕೊಂಡರು.
ಹೊರೆಕಾಣಿಕೆ ಬಗ್ಗೆ ವಿವರಿಸಿದ ಪ್ರವೀಣ್ ಕುಂಟ್ಯಾನ, ಡಿ.24ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಗಣಪತಿ ದೇವಸ್ಥಾನದ ಬಳಿ ಎಲ್ಲಾ ಗ್ರಾಮದವರು ಸೇರಬೇಕು. 3 ಗಂಟೆ ವೇಳೆಗೆ ಹೊರೆಕಾಣಿಕೆ ಹೊರಡಬೇಕು. 4 ಗಂಟೆ ವೇಳೆಗೆ ಶಂಕುಸ್ಥಾಪನೆ ನಡೆಯುವ ಸ್ಥಳಕ್ಕೆ ತಲುಪಬೇಕು. ಹಾಗಾಗಿ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಬೇಕು. ಪ್ರತಿ ಮನೆಯಿಂದ ಕನಿಷ್ಠ 1 ಗೊನೆ ಅಡಕೆಯನ್ನಾದರೂ ನೀಡಬೇಕು. 10 ಸಾವಿರಕ್ಕೆ ಮಿಕ್ಕಿ ಅಡಕೆ ಗೊನೆ ಸಂಗ್ರಹ ಆಗಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಇದರ ಜೊತೆ ತೆಂಗಿನಕಾಯಿಯನ್ನು ನೀಡಬೇಕು. ಗ್ರಾಮ ಪ್ರಮುಖರು ಪ್ರತಿ ಮನೆಗೆ ಭೇಟಿ ನೀಡಿ ಹೊರೆಕಾಣಿಕೆಯ ಯಶಸ್ಸಿಗೆ ಶ್ರಮಿಸುವಂತೆ ಕರೆ ನೀಡಿದರು.
ಸಂಘಟನಾ ಕಾರ್ಯದರ್ಶಿ ಶಿವರಾಮ ಏನೇಕಲ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗಾಗಿ ಮಹಿಳಾ ಹಾಗೂ ತರುಣ ಗ್ರಾಮ ಸಮಿತಿಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಶುಚಿತ್ವ, ನೀರು, ಮಾಧ್ಯಮ, ಸಭಾ ಕಾರ್ಯಕ್ರಮ ನಿರ್ವಹಣೆ, ಸನ್ಮಾನ, ವೈದ್ಯಕೀಯ, ಆಸನ ವ್ಯವಸ್ಥೆ, ಹೊರೆಕಾಣಿಕೆ ಹೀಗೆ ಅನೇಕ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ಎಸ್. ಗೌರವಾಧ್ಯಕ್ಷ, ನಿವೃತ್ತ ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣ ಗೌಡ, ವಲಯ ಪೂರ್ವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಸ್ಪಂದನಾ ಸಹಕಾರಿ ಸಂಘದ ನಿರ್ದೇಶಕಿ ಆಶಾ ತಿಮ್ಮಪ್ಪ, ವಲಯ ಮಹಿಳಾ ಅಧ್ಯಕ್ಷೆ ನೀಲಾವತಿ ಶಿವರಾಂ, ಉಪಾಧ್ಯಕ್ಷರಾದ ಓಡ್ಯಪ್ಪ ಗೌಡ ಎರ್ಮಾಯಿಲ್, ರಾಧಾಕೃಷ್ಣ ಗೌಡ ಕೆರ್ನಡ್ಕ, ಗೋಪಾಲಕೃಷ್ಣ ಪಟೇಲ್, ವೆಂಕಟ್ ರಾಜ್ ಕೋಡಿಬೈಲು, ದಯಾನಂದ ಆಲಂಕಾರು, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ಕೊಳ್ಳೆಸಾಗು, ತರುಣ ಘಟಕದ ಅಧ್ಯಕ್ಷ ಪೂರ್ಣೇಶ್ ಮೊದಲಾದವರು ಉಪಸ್ಥಿತರಿದ್ದರು.
ನಿಕಟಪೂರ್ವಾಧ್ಯಕ್ಷ ತಮ್ಮಯ್ಯ ಗೌಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ ವಂದಿಸಿದರು. ವಾಸುದೇವ ಗೌಡ ಕಾರ್ಯಕ್ರಮ ನಿರೂಪಿಸಿದರು.