34 ನೆಕ್ಕಿಲಾಡಿ ಸಾಮಾನ್ಯ ಸಭೆ

0

ಉಪ್ಪಿನಂಗಡಿ: ಪ್ರತಿಯೊಂದು ಮನೆಗೂ ತ್ಯಾಜ್ಯ ಸಂಗ್ರಹದ ವಾಹನ ಹೋಗಬೇಕು. ಸ್ವಚ್ಛತಾ ಶುಲ್ಕ ಕಟ್ಟಿಲ್ಲವೆಂದು ತ್ಯಾಜ್ಯ ಸಂಗ್ರಹದ ವಾಹನ ಹೋಗದ ಮನೆಯವರಿಗೆ ನೋಟೀಸ್, ದಂಡ ವಸೂಲಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.


34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಎ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮದಲ್ಲಿ ಸ್ವಚ್ಛತಾ ಶುಲ್ಕ ಸರಿಯಾಗಿ ವಸೂಲಿಯಾಗುತ್ತಿಲ್ಲ. ಕೆಲ ಗ್ರಾಮಸ್ಥರು ಶುಲ್ಕ ನೀಡುವುದಕ್ಕೆ ಅಸಹಕಾರ ನೀಡುತ್ತಿದ್ದಾರೆ. ಇಂತವರಿಗೆ ನೋಟೀಸ್ ನೀಡಿ ದಂಡನಾ ಶುಲ್ಕದೊಂದಿಗೆ ಸ್ವಚ್ಛತಾ ಶುಲ್ಕ ವಸೂಲಿ ಮಾಡುವ ಬಗ್ಗೆ ವಿಷಯ ಪ್ರಸ್ತಾಪವಾದಾಗ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯಕುಮಾರ್, ಗ್ರಾಮದ ಎಲ್ಲಾ ಮನೆಗಳಿಗೂ ತ್ಯಾಜ್ಯ ಸಂಗ್ರಹದ ವಾಹನ ತೆರಳುತ್ತಿದೆಯೇ? ನನ್ನ ಗಮನಕ್ಕೆ ಬಂದ ಹಾಗೆ ಕೆಲವು ಮನೆಗಳಿಗೆ ಸ್ವಚ್ಛತಾ ವಾಹನ ಹೋಗುತ್ತಿಲ್ಲ. ಅಂತವರಿಗೆ ನೊಟೀಸ್ ನೀಡಿ ದಂಡ ವಸೂಲಿ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು. ಇತರ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಆಗ ಪಿಡಿಒ ಸತೀಶ್ ಡಿ. ಬಂಗೇರ ಮಾತನಾಡಿ, ಎಲ್ಲಿ ತ್ಯಾಜ್ಯ ಸಂಗ್ರಹದ ವಾಹನ ಹೋಗುತ್ತಿಲ್ಲವೆಂಬುದನ್ನು ನನ್ನ ಗಮನಕ್ಕೆ ತನ್ನಿ. ಅಲ್ಲಿಗೆ ವಾಹನ ಕಳುಹಿಸಲಾಗುವುದು ಎಂದರು. ಸರಿಯಾಗಿ ಬಿಲ್‌ಗಳ ವಸೂಲಾತಿಯಾಗಬೇಕಾದರೆ ಇಲ್ಲಿಗೆ ಸಿಬ್ಬಂದಿಯ ಅಗತ್ಯವಿದೆ ಎಂದು ಪಿಡಿಒ ಅವರು ಹೇಳಿದಾಗ, ಸ್ವಚ್ಛತಾ ಘಟಕದವರನ್ನೇ ಇದಕ್ಕೆ ನೇಮಿಸಿದರೆ ಆಗುವುದಿಲ್ಲವೇ ಎಂದು ಸದಸ್ಯರು ಪ್ರಶ್ನಿಸಿದರು. ಈ ಸಂದರ್ಭ ಪಿಡಿಒ ಅವರು ಸ್ವಚ್ಛತಾ ಘಟಕದವರು ಈ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಾದರೆ ಈ ಹೊಣೆಯನ್ನು ಅವರಿಗೆ ನೀಡುವ ಎಂದರು.


34 ನೆಕ್ಕಿಲಾಡಿಯನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ತರುವ ಕುರಿತಾದ ಪ್ರಸ್ತಾಪಕ್ಕೆ ಸದಸ್ಯ ಪ್ರಶಾಂತ್ ಎನ್. ತೀವ್ರ ವಿರೋಧ ವ್ಯಕ್ತಪಡಿಸಿದರು. 34 ನೆಕ್ಕಿಲಾಡಿಯೆಂಬುದು ಹಳ್ಳಿ. ಇಲ್ಲಿ ಪೇಟೆಯೆಂದು ಇರುವುದು ನೆಕ್ಕಿಲಾಡಿಯಲ್ಲಿ ಸ್ವಲ್ಪ ಮಾತ್ರ. ಉಳಿದಂತೆ ಇದು ಕೃಷಿ ಪ್ರದೇಶವಾಗಿದೆ. ಆದ್ದರಿಂದ ಉಪ್ಪಿನಂಗಡಿ ಜೊತೆ 34 ನೆಕ್ಕಿಲಾಡಿಯನ್ನು ಸೇರಿಸಿ ಪಟ್ಟಣ ಪಂಚಾಯತ್ ಮಾಡುವುದಕ್ಕೆ ನನ್ನದು ಆಕ್ಷೇಪವಿದೆ. ಪಟ್ಟಣ ಪಂಚಾಯತ್‌ಗೆ ನೆಕ್ಕಿಲಾಡಿಯನ್ನೇ ಯಾಕೆ ಕೇಳುವುದು? ಹಿರೇಬಂಡಾಡಿ ಗ್ರಾಮ ಹಾಗೂ ಉಪ್ಪಿನಂಗಡಿ ಗ್ರಾಮವನ್ನು ಜೊತೆ ಸೇರಿಸಿಕೊಂಡು ಉಪ್ಪಿನಂಗಡಿಯನ್ನು ಪಟ್ಟಣ ಪಂಚಾಯತ್ ಆಗಿ ಮಾಡಲಿ ಎಂದರು.


ಈಗ ತಾತ್ಕಾಲಿಕವಾಗಿ ಗ್ರಂಥಾಲಯಕ್ಕೆ ಕೊಟ್ಟಿರುವ ಕೊಠಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅದು ಸುಸ್ಥಿತಿಯಲ್ಲಿಲ್ಲ. ಆದ್ದರಿಂದ ಗ್ರಂಥಾಲಯಕ್ಕೆ ಬೇರೆ ಕಡೆ ಕೊಠಡಿಯ ವ್ಯವಸ್ಥೆಯಾಗಬೇಕು ಎಂದು ಗ್ರಂಥಾಲಯ ಮೇಲ್ವೀಚಾರಕಿಯವರ ಮನವಿಯ ಬಗ್ಗೆ ಚರ್ಚೆಯಾಗಿ, ಈ ಗ್ರಾ.ಪಂ.ನ ಸಭಾಂಗಣದ ಒಂದು ಬದಿಯಲ್ಲಿರುವ ವಿಎ ಕಚೇರಿಗೆ ಬೇರೆ ಕಡೆ ಕೊಠಡಿ ನೀಡೋಣ. ಗ್ರಂಥಾಲಯವನ್ನು ಅಲ್ಲಿಗೆ ಸ್ಥಳಾಂತರಿಸೋಣ ಎಂದು ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪಿಡಿಒ ಸತೀಶ್ ಡಿ. ಬಂಗೇರ ಅವರು ಒಪ್ಪದೇ, ಇಲ್ಲಿಗೆ ಗ್ರಂಥಾಲಯವನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಾಗ, ಈ ಬಗ್ಗೆ ಚರ್ಚೆಗಳು ನಡೆಯಿತು. ಆಗ ಪಿಡಿಒ ಅವರು ಉತ್ತರಿಸಿ, ಗ್ರಂಥಾಲಯಕ್ಕೆ ಈಗ ವಿಎ ಕಚೇರಿಗೆ ಕೊಟ್ಟ ಸ್ಥಳಾವಕಾಶ ಸಾಕಾಗೋದಿಲ್ಲ. ಇಡೀ ಸಭಾಂಗಣವನ್ನೇ ಬಿಟ್ಟು ಕೊಡಬೇಕಾಗುತ್ತದೆ ಎಂದರು. ಉಪಾಧ್ಯಕ್ಷ ಹರೀಶ್ ಡಿ. ಪ್ರತಿಕ್ರಿಯಿಸಿ, ಹಾಗಾದರೆ ಬೇರೆ ವ್ಯವಸ್ಥೆ ಏನು? ಹೊಸ ಕಟ್ಟಡ ನಿರ್ಮಾಣಕ್ಕೆಂದು ಈ ಮೊದಲು ಗ್ರಂಥಾಲಯವಿದ್ದ ಗ್ರಾ.ಪಂ.ನ ಹಳೆಯ ಕಟ್ಟಡವನ್ನು ಕೆಡವಲಾಗಿದೆ. ಅಲ್ಲಿ ಹೊಸ ಕಟ್ಟಡದ ನಿರ್ಮಾಣವನ್ನು ಇನ್ನೂ ಆರಂಭಿಸಲಾಗಿಲ್ಲ. ಅದನ್ನು ಕೂಡಲೇ ಆರಂಭ ಮಾಡೋಣ ಎಂದರು. ಆಗ ಪಿಡಿಒ ಅವರು ಈಗಾಗಲೇ ಕಾಮಗಾರಿ ಮುಗಿದಿರುವ ಸ್ಮಶಾನ, ಭೀತಲಪ್ಪು ಅಂಗನವಾಡಿಗಳ ಉದ್ಘಾಟನೆಯಾದ ಬಳಿಕವೇ ಇದನ್ನು ಆರಂಭ ಮಾಡೋಣ. ಒಂದು ಕಾಮಗಾರಿಗಳು ನಡೆಯುವಾಗ ಸದಸ್ಯರು ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು. ನಿಮ್ಮ ನಿಮ್ಮ ವಾರ್ಡ್‌ನಲ್ಲಿ ಹೆಚ್ಚಿನ ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್‌ಗಳನ್ನು ಮಾಡಿಸಿ, ಅವರ ಕೆಲಸಗಳನ್ನು ಈ ಕಾಮಗಾರಿಗಳಿಗೆ ಬಳಸಿಕೊಳ್ಳೋಣ ಎಂದರು.
ಸಭೆಯಲ್ಲಿ ಸದಸ್ಯರಾದ ಸ್ವಪ್ನ, ತುಳಸಿ, ವೇದಾವತಿ, ರತ್ನಾವತಿ, ಗೀತಾ, ಹರೀಶ್ ಕುಲಾಲ್, ರಮೇಶ ನಾಯ್ಕ ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here