ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ-‘ಜನತಾ ದರ್ಪಣ’ ವಾರ್ಷಿಕ ಸವಿ ಸಂಚಿಕೆ ಬಿಡುಗಡೆ

0

ಅಡ್ಯನಡ್ಕ: ಇಲ್ಲಿನ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವವು ಅಡ್ಯನಡ್ಕದ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.25ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟ್ವಾಳದ ಮಾಜಿ ರೋಟರಿ ಜಿಲ್ಲಾ ಗವರ್ನರ್ ಹಾಗೂ ಉದ್ಯಮಿ ರೊ| ಪ್ರಕಾಶ ಕಾರಂತ ಮಾತನಾಡಿ, ವಿದ್ಯೆಗಿಂತಲೂ ಮೌಲ್ಯಗಳು ಮುಖ್ಯವಾದದ್ದು. ಒಳ್ಳೆಯವರ ಸಹವಾಸ, ವಿನಯ, ಸತ್ಕರ್ಮಗಳು ಹೃದಯದಲ್ಲಿ ಸಂತೃಪ್ತಿಯನ್ನು ಹುಟ್ಟುಹಾಕುತ್ತವೆ ಎಂದು ಹೇಳಿದರು. ಪರಮಾತ್ಮನಿಗೆ ಸಲ್ಲಿಸಬೇಕಾದ ಋಣಭಾರವನ್ನು ನಾವು ಜನರಿಗೆ ಸಲ್ಲಿಸಬೇಕು. ಸಂಬಂಧ ಮತ್ತು ಸಂವಹನದ ಮೂಲಕ ಸಮಾಜವನ್ನು ಕಟ್ಟಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು ಮಾತನಾಡಿದರು. ಜನತಾ ವಿದ್ಯಾಸಂಸ್ಥೆಗಳ 2023-24ನೇ ಸಾಲಿನ ‘ಜನತಾ ದರ್ಪಣ’ ವಾರ್ಷಿಕ ಸವಿ ಸಂಚಿಕೆಯನ್ನು ಜನತಾ ಆಂಗ್ಲ ಮಾಧ್ಯಮ ಶಾಲೆಯ ಎಲ್ಕೆಜಿ ಪುಟಾಣಿಗಳಿಂದ ಬಿಡುಗಡೆಗೊಳಿಸಲಾಯಿತು.

ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ., ಜನತಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ., ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ವಾರ್ಷಿಕ ವರದಿಗಳನ್ನು ಮಂಡಿಸಿದರು. ಜನತಾ ಪದವಿಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದೇವಾನಂದ ಶೆಣೈ, ಜನತಾ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಅತಿಥಿಗಳನ್ನು ಪರಿಚಯಿಸಿದರು. ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಮಿತಾ ಪಿ. ಕೆ. ಹಾಗೂ ಹಾಫಿಲ್ ಅವರನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಅಂತರ್ ಕಾಲೇಜು ಪಿಯು ವಿಭಾಗದ ‘AETERNUS 2023’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ದ್ವಿತೀಯ ವಿಜ್ಞಾನ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮೋಕ್ಷಾ ಮತ್ತು ಹರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ನಾಟಕ – ಪ್ರಹಸನ – ರೂಪಕಗಳು, ವಿವಿಧ ಬಗೆಯ ಆಕರ್ಷಕ ನೃತ್ಯಗಳು ಪ್ರದರ್ಶನಗೊಂಡವು.

LEAVE A REPLY

Please enter your comment!
Please enter your name here