ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸಂಪನ್ನಗೊಂಡ ಐತಿಹಾಸಿಕ ಕಾರ್ಯಕ್ರಮ

0

ಆರ್ಷ ವಿದ್ಯಾಸಮಾಜದ ಸಂಸ್ಥಾಪಕ ಆಚಾರ್ಯ ಮನೋಜ್ ಜಿ ಅವರಿಂದ ನೂತನ ಅಂತಸ್ತು, ಸಭಾಂಗಣ, ವ್ಯಾಯಾಮಶಾಲೆ ಉದ್ಘಾಟನೆ

8 ಸಾವಿರಕ್ಕೂ ಅಧಿಕ ಮಂದಿಯನ್ನು ಮರಳಿ ಮಾತೃಧರ್ಮಕ್ಕೆ ಕರೆತಂದ ಆಚಾರ್ಯ ಮನೋಜ್ ಜಿ

ಪುತ್ತೂರು: ಹಿಂದಿನ ಕಾಲದ ಅಧರ್ಮಿಗಳು ಯಾರು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ರಾಮಾಯಣದಲ್ಲಿ ರಾವಣ ಕುಂಭಕರ್ಣರಂತಹವರಿದ್ದರೆ ದ್ವಾಪರದಲ್ಲಿ ಕಂಸ, ದುರ್ಯೋದನ, ಶಕುನಿಯಂತಹವರಿದ್ದರು. ಆದರೆ ಇಂದಿನ ಕಾಲಘಟ್ಟದ ಅಧರ್ಮಿಗಳ ಬಗೆಗೆ ಅನೇಕರಿಗೆ ತಿಳಿದೇ ಇಲ್ಲ. ಅಂತಹವರ ಬಗೆಗೆ ನಾವು ಸರಿಯಾಗಿ ತಿಳಿದುಕೊಳ್ಳುವುದೇ ನಮ್ಮ ಧರ್ಮ, ಪರಂಪರೆಗಳನ್ನು ಉಳಿಸಿಕೊಳ್ಳುವ ಮಾರ್ಗ ಎಂದು ತಿರುವನಂತಪುರಂನ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ಆಚಾರ್ಯ ಕೆ.ಆರ್.ಮನೋಜ್ ಜಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ವ್ಯವಸ್ಥೆಗೆ ಇಪ್ಪತ್ತೈದು ವರ್ಷ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ವಿದ್ಯಾಲಯಕ್ಕೆ ಹತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ವಿದ್ಯಾಲಯದ ಕಟ್ಟಡದ ನೂತನ ಅಂತಸ್ತು, ವ್ಯಾಯಾಮಶಾಲೆ ಹಾಗೂ ’ಸುಶೀಲಾ – ಶಿವಾನಂದ ರಾವ್’ ವೇದಿಕೆ ಸಭಾಂಗಣವನ್ನು ಶುಕ್ರವಾರ ಉದ್ಘಾಟಿಸಿ ಅಂಬಿಕಾ ಸಂಸ್ಥೆಗಳಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿದರು.


ಯಾವ ವಿದ್ಯಾಭ್ಯಾಸ ವಿದ್ಯಾರ್ಥಿಗಳನ್ನು ರೂಪುಗೊಳಿಸಬೇಕೋ ಅದೇ ವಿದ್ಯಾಭ್ಯಾಸ ಇಂದು ವಿದ್ಯಾರ್ಥಿಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದೆ. ಆದರೆ ಮರಳಿ ವಿದ್ಯಾಭ್ಯಾಸದ ಮೂಲಕವೇ ನಾವು ನಮ್ಮವರನ್ನು ಉಳಿಸಿಕೊಳ್ಳಬೇಕಾಗಿದೆ. ಇಂದು ಗೆಳೆಯರ ಸೋಗಿನಲ್ಲಿ, ಶಿಕ್ಷಕರ ರೂಪಿನಲ್ಲಿ, ಪಠ್ಯಕ್ರಮದ ವೇಷಗಳಲ್ಲಿ ಹರಯದ ಮಕ್ಕಳ ತಲೆಹಾಳು ಮಾಡುವ ಕುತಂತ್ರಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದಕ್ಕೆ ಎದೆತಟ್ಟಿ ನಿಲ್ಲಬೇಕಾದರೆ ನಮ್ಮತನದ ಉತ್ಕೃಷ್ಟತೆಯ ಅರಿವು ನಮಗಿರಬೇಕು ಎಂದು ಹೇಳಿದರು.


ಯುವಕ ಯುವತಿಯರನ್ನು ಮತಾಂತರಗೊಳಿಸುವ ಬಹುದೊಡ್ಡ ಜಾಲವೇ ಇದೆ. ಆರಂಭದಲ್ಲಿ ಗೆಳೆತನ ಬೆಳೆಸುತ್ತಾ, ಸನಾತನ ಧರ್ಮದ ಬಗೆಗೆ ಜಿಜ್ಞಾಸುಗಳಂತೆ ಪ್ರಶ್ನೆ ಮಾಡುವುದಕ್ಕೆ ಆರಂಭಿಸುತ್ತಾರೆ. ಆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನಮ್ಮ ಬಳಿ ಇರದಿದ್ದರೆ ನಂತರ ನಮ್ಮನ್ನು ಗೊಂದಲಕ್ಕೀಡುಮಾಡತೊಡಗುತ್ತಾರೆ. ಹಿಂದೂ ಆಚಾರ ವಿಚಾರಗಳನ್ನು, ದೇವ ದೇವತೆಗಳನ್ನು ಅಪಹಾಸ್ಯ ಮಾಡತೊಡಗುತ್ತಾರೆ. ಕ್ರಮೇಣ ಇದು ಬೆಳೆಯುತ್ತಾ ಮತಾಂತರದ ಖೆಡ್ಡಾಕ್ಕೆ ಕೆಡವುತ್ತಾರೆ. ಆದರೆ ಯಾವಾಗ ನಾವು ಸನಾತನ ಧರ್ಮದ ಬಗೆಗೆ ಶಾಸ್ತ್ರಬದ್ಧವಾಗಿ ಅಧ್ಯಯನ ನಡೆಸುತ್ತೇವೋ, ಆಗ ನಮ್ಮನ್ನು ಮೋಸಗೊಳಿಸುವುದಕ್ಕೆ ಸಾಧ್ಯವಾಗಲಾರದು ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತದನಂತರ ಆರ್ಷ ವಿದ್ಯಾ ಸಮಾಜದ ಬೋಧನೆಯ ಮುಖಾಂತರ ಮರಳಿ ಮಾತೃಧರ್ಮಕ್ಕೆ ಆಗಮಿಸಿದ ಆತಿರಾ ಅವರು ಬರೆದ ಕೃತಿಯ ಕನ್ನಡ ಅವತರಣಿಕೆ ’ನಾನು ಆತಿರಾ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಕೃತಿಕಾರರಾದ ಆತಿರಾ ಎಸ್., ಕನ್ನಡಕ್ಕೆ ಅನುವಾದಿಸಿದ ನಾಗೇಂದ್ರ ಹಾಗೂ ಶ್ವೇತಾ ಜಲಗೇರಿ ಅನಿಸಿಕೆ ಹಂಚಿಕೊಂಡರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಭಾರತವನ್ನು ಉಳಿಸುವ ಬೆಳೆಸುವ ಕಾರ್ಯವನ್ನು ಮಾಡಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಂತೆಯೇ ವಿದ್ಯಾರ್ಥಿಗಳಿಗೆ ನೀಡಬೇಕಾದ ನ್ಯಾಯಯುತ ವಿಚಾರಗಳನ್ನು ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಹಲವು ವ್ಯವಸ್ಥೆಗಳನ್ನು ಅಂಬಿಕಾದಲ್ಲಿ ರೂಪುಗೊಳಿಸಲಾಗಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಆಚಾರ್ಯ ಕೆ.ಆರ್.ಮನೋಜ್ ಜಿ ಹಾಗೂ ಅಂಬಿಕಾ ಶಿಕ್ಷಣ ಸಂಸ್ಥೆಗಳಿಗೆ ನಿರಂತರವಾಗಿ ಸಹಕಾರ ಒದಗಿಸಿಕೊಡುತ್ತಿರುವ ಶರವೂರು ಸುಬ್ಬ ರಾವ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಾನು ಆತಿರಾ ಕೃತಿ ಲೇಖಕಿ ಹಾಗೂ ಅನುವಾದಕರನ್ನು ಅಭಿನಂದಿಸಲಾಯಿತು. ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಸತ್ಯಪ್ರಸಾದ್ ಕೋಟೆ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.


ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್ ಸ್ವಾಗತಿಸಿ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲೆ ಶೈನಿ ಹಾಗೂ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಸನ್ಮಾನ ಪತ್ರಗಳನ್ನು ವಾಚಿಸಿದರು. ಆರ್ಷ ವಿದ್ಯಾಸಮಾಜದ ಶೃತಿ ಭಟ್ ಅವರು ಆಚಾರ್ಯ ಮನೋಜ್ ಜಿ ಅವರ ಮಳೆಯಾಳಂ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು.


ವಿದ್ಯಾರ್ಥಿಗಳಾದ ಜ್ವಲನ್ ಜೋಷಿ, ಅವನೀಶ ಶರ್ಮ ಹಾಗೂ ವಿದ್ಯಾರ್ಥಿನಿ ತೇಜಶ್ರೀ ಎಂ.ಜೆ ಶಂಖನಾದಗೈದರು. ವಿದ್ಯಾರ್ಥಿಗಳಾದ ಪ್ರಮೋದ ಗಣಪತಿ ಭಟ್, ಅವನೀಶ ಶರ್ಮ, ಸ್ಕಂದ ಕೃಷ್ಣ, ಶ್ರೀಶ ಎಂ, ಭರತ ಕೃಷ್ಣ, ಸಾತ್ವಿಕ್, ಸಂದೀಪಕೃಷ್ಣ, ಜ್ವನ್ ಜೋಷಿ, ಶ್ರೀರಾಮ ಪಿ., ಶಿಶರ್ ವೇದಘೋಷ ಪ್ರಸ್ತುತಪಡಿಸಿದರು. ವಿದ್ಯಾರ್ಥಿನಿಯರಾದ ಧೃತಿ ಭಟ್, ನಿಧಿ, ಶಿಶಿರಾ, ಈಶಿತಾ ಹಾಗೂ ಹಂಸಿನಿ ಕುಮಾರಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು.


ಆರ್ಷ ವಿದ್ಯಾ ಸಮಾಜ ಸಂಸ್ಥೆಗೆ 10 ಲಕ್ಷ ದೇಣಿಗೆ :
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜರ ಮಾತೃಶ್ರೀಯವರಾದ ಸುಶೀಲಾ ಎಸ್.ರಾವ್ ಕೆಲ ಸಮಯದ ಹಿಂದೆ ಸ್ವರ್ಗಸ್ಥರಾಗಿದ್ದು, ಅವರ ಸವಿನೆನಪಿಗಾಗಿ ಸುಬ್ರಮಣ್ಯ ನಟ್ಟೋಜ ಅವರು ತಮ್ಮ ವೈಯಕ್ತಿಕ ನೆಲೆಯಿಂದ 10 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಈ ದೇಣಿಗೆಯನ್ನು ಅಂಬಿಕಾ ಸಂಸ್ಥೆಗಳ ಖಾತೆಯಿಂದ ನೀಡದೆ ತನ್ನ ಕೌಟುಂಬಿಕ ನೆಲೆಯಿಂದ ನೀಡುತ್ತಿರುವುದಾಗಿ ಘೋಷಿಸಿದರು. ಆರ್ಷ ವಿದ್ಯಾ ಸಮಾಜ ಈಗಾಗಲೇ ಮತಾಂತರಗೊಂಡಿದ್ದ ೮ ಸಾವಿರಕ್ಕೂ ಅಧಿಕ ಸಂಖ್ಯೆಯ ಹಿಂದೂ ಯುವಕ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಮೂಲಕ ದೊಡ್ಡ ಕ್ರಾಂತಿಯನ್ನು ಮೂಡಿಸಿದೆ. ಆದರೆ ಇಂತಹ ಸಮಾಜಪರ ಕಾರ್ಯವನ್ನು ನೆರವೇರಿಸುವುದಕ್ಕೆ ಹಣಕಾಸಿನ ಅಗತ್ಯ ಆ ಸಂಸ್ಥೆಗೆ ಇದೆ. ಆದ್ದರಿಂದ ತಾವು ಹತ್ತು ಲಕ್ಷ ಘೋಷಿಸುತ್ತಿರುವುದಾಗಿ ಸುಬ್ರಮಣ್ಯ ನಟ್ಟೋಜ ತಿಳಿಸಿದರು.


ಸುದರ್ಶನ ಕೋರ್ಸ್ ಅಳವಡಿಕೆ:
ಮತಾಂತರ ಅವ್ಯಾಹತವಾಗಿ ನಡೆಯುತ್ತಿರುವುದಕ್ಕೆ ಸನಾತನ ಧರ್ಮದ ಬಗೆಗೆ ಯುವಸಮುದಾಯಕ್ಕೆ ಮಾಹಿತಿ ಇಲ್ಲದಿರುವುದೇ ಕಾರಣ ಎಂಬ ನೆಲೆಯಲ್ಲಿ ಆರ್ಷ ವಿದ್ಯಾ ಸಮಾಜದ ಮೂಲಕ ಸುದರ್ಶನ ಎಂಬ ಕೋರ್ಸ್ ಒಂದನ್ನು ರೂಪಿಸಲಾಗಿದೆ. ಈ ಕೋರ್ಸ್ ಕುತಂತ್ರಿಗಳ ವಾಮಮಾರ್ಗವನ್ನು ತಡೆಯುವಲ್ಲಿ ಪರಿಣಾಮಕಾರಿ ಎನಿಸಲಿದೆ. ಈ ಹಿನ್ನೆಲೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಯೊಬ್ಬರಿಗೂ ಈ ಕೋರ್ಸ್ ಅನ್ನು ಒದಗಿಸಿಕೊಡುವುದಾಗಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಘೋಷಿಸಿದರು. ತನ್ಮೂಲಕ ಇಡಿಯ ರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಈ ಕೋರ್ಸ್ ಅಳವಡಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಅಂಬಿಕಾ ಪಾತ್ರವಾಯಿತು.


ನೃತ್ಯ ನಾಟಕ :
ಸಭಾ ಕಾರ್ಯಕ್ರಮದ ಬಳಿಕ ಆರ್ಷ ವಿದ್ಯಾ ಸಮಾಜದ ತಂಡದವರಿಂದ ಸುದರ್ಶನಂ ಎಂಬ ನೃತ್ಯನಾಟಕ ನಡೆಯಿತು. ಪ್ರಾಚೀನ ಭಾರತದ ಹಿರಿಮೆ ಗರಿಮೆ, ತದನಂತರದ ಕಾಲಘಟ್ಟದಲ್ಲಾದ ಬದಲಾವಣೆ, ಆಧುನಿಕ ಮತಾಂಧ ಕಿರುಕುಳಗಳು ಹಾಗೂ ಕೊನೆಯಲ್ಲಿ ಅಂತಹ ಕುತಂತ್ರಗಳಿಂದ ಪಾರಾಗುವ ಬಗೆಯ ಕುರಿತಾಗಿ ಮೂಡಿಬಂದ ಮನೋಜ್ಞವಾದ ನೃತ್ಯನಾಟಕ ನೆರೆದವರ ಮನಸ್ಸನ್ನು ಭಾವಪೂರ್ಣಗೊಳಿಸಿತು.


ವಿದ್ಯಾರ್ಥಿನಿಯಿಂದ ಗಣಹೋಮ :
ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನೂತನ ಅಂತಸ್ತಿನಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಸೀಮಾ ಅಗ್ನಿಹೋತ್ರಿ ಅವರಿಂದ ಗಣಹೋಮ ನೆರವೇರಿತು. ಹೆಣ್ಣುಮಕ್ಕಳಿಗೂ ವೇದಾಧ್ಯಯನದ ಅರ್ಹತೆ ಸಾಧ್ಯತೆಗಳಿವೆ ಎಂಬುದನ್ನು ಸಾಧಿಸಿ ತೋರಿಸುವ ಹಿನ್ನೆಲೆಯಲ್ಲಿ ಹಾಗೂ ಹುಡುಗಿಯರಲ್ಲಿ ವೇದಾಧ್ಯಯನದ ಆಸಕ್ತಿ ಮೂಡಿಸುವ ಹಿನ್ನಲೆಯಲ್ಲಿ ಅಸೀಮಾ ಅವರಿಂದ ಗಣಹೋಮ ನಡೆಸಲಾಯಿತು.















LEAVE A REPLY

Please enter your comment!
Please enter your name here