ಕಲೆ, ಜೀವನ ಕೌಶಲ್ಯ, ವಿಜ್ಞಾನ, ಸಂಸ್ಕೃತಿಯ ಪ್ರದರ್ಶನ | ಸಾವಿರಾರು ಜನರಿಂದ ವೀಕ್ಷಣೆ
ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ: ಭಾಗೀರಥಿ ಮುರುಳ್ಯ
ನೆಲ್ಯಾಡಿ; ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜು, ಎಸ್.ಬಿ.ಕಾಲೇಜು, ಬೆಥನಿ ಐಟಿಐ ಇದರ ಆಶ್ರಯದಲ್ಲಿ ಕಲ್ಪನೆಯ ಅದ್ಬುತಗಳು ಎಂಬ ಧ್ಯೇಯದೊಂದಿಗೆ ಎರಡು ದಿನ ನಡೆಯುವ ಕಲೆ, ಜೀವನ ಕೌಶಲ್ಯ, ವಿಜ್ಞಾನ ಮತ್ತು ಸಂಸ್ಕೃತಿಯ ಪ್ರದರ್ಶನ ’ಸೃಷ್ಟಿ 2023’ಕ್ಕೆ ಡಿ.21ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಚಟುವಟಿಕೆ ಪ್ರತಿವರ್ಷವೂ ನಡೆಯಬೇಕು. ಇದೊಂದು ಮಕ್ಕಳ ಚಟುವಟಿಕೆ, ಅವರ ಕಲಿಕೆಯ ಗುಣಮಟ್ಟ ತಿಳಿಯಲು ಪೋಷಕರಿಗೆ ಸಿಗುವ ಅವಕಾಶವಾಗಿದೆ. ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ಸುಂದರ ಮೂರ್ತಿಯಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಮೃದು ಮನಸ್ಸಿನ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಸಿಗಬೇಕು. ಅವರನ್ನು ಸಮಾಜಕ್ಕೆ ಮಾದರಿಯಾಗಿ ಬೆಳೆಸಬೇಕು. ಇದರಿಂದ ಮಕ್ಕಳು ಮುಂದೆ ದೇಶದ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರಂತೆ ಪೋಷಕರೂ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಮಕ್ಕಳನ್ನು ಬೆಳೆಸಬೇಕೆಂದು ಹೇಳಿದರು. ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯು ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಲ್ಪಿಸಿಕೊಟ್ಟಿದೆ. ಹೊಸ ಹೊಸ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ’ಸೃಷ್ಟಿ 2023’ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವಾಗಿದೆ. ಇದು ಯಶಸ್ವಿಯಾಗಲಿ. ಶಾಲೆಯ ಬೇಡಿಕೆಗಳಿಗೆ ಸರಕಾರದ ಮಟ್ಟದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ಜೈಸನ್ ಸೈಮನ್ ಒಐಸಿಯವರು ಮಾತನಾಡಿ, ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಜ್ಞಾನ ಸಂಪಾದನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ’ಸೃಷ್ಟಿ 2023’ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿನ ಟ್ಯಾಲೆಂಟ್ ಇಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸವೂ ಆಗಲಿದೆ ಎಂದರು. ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಮಾತನಾಡಿ, ಸೃಷ್ಟಿ 2023 ಅದ್ಭುತವಾದ ಕಾರ್ಯಕ್ರಮವಾಗಿದೆ. ಎರಡು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳೇ ತಯಾರಿಸಿದ ಮಾದರಿಗಳು ಪ್ರದರ್ಶನಗೊಳ್ಳಲಿದೆ. ಇದೊಂದು ನೆಲ್ಯಾಡಿಯ ಇತಿಹಾಸದಲ್ಲಿಯೇ ಪ್ರಥಮ ಕಾರ್ಯಕ್ರಮವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲರೂ, ಸೃಷ್ಟಿ 2023ರ ನಿರ್ದೇಶಕರೂ ಆದ ರೆ.ಫಾ.ಡಾ| ವರ್ಗೀಸ್ ಕೈಪುನಡ್ಕ ಒಐಸಿ ಅವರು, ಡಿ.21 ಹಾಗೂ 22ರಂದು ಸಂಸ್ಥೆಯ ಆವರಣದಲ್ಲಿ ಕಲೆ, ಜೀವನ ಕೌಶಲ್ಯ, ವಿಜ್ಞಾನ ಹಾಗೂ ಸಂಸ್ಕೃತಿಯ ಪ್ರದರ್ಶನ ’ಸೃಷ್ಟಿ 2023’ ನಡೆಯಲಿದೆ. ಇದೊಂದು ಅದ್ಭುತ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ ಒದಗಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೃಹತ್ ವಿಜ್ಞಾನ ವಸ್ತುಪ್ರದರ್ಶನ, ಪ್ರಾಚ್ಯ ವಸ್ತುಗಳ ಸಂಗ್ರಹ, ಕರಕುಶಲ ವಸ್ತುಗಳ ಪ್ರದರ್ಶನ, ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಆಹಾರ ಮಳಿಗೆಗಳು ವಿದ್ಯಾರ್ಥಿಗಳಿಂದಲೇ ನಡೆಯಲಿದೆ ಎಂದು ತಿಳಿಸಿದರು.
ಬಹುಮಾನ ವಿತರಣೆ:
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಹಲ್ಯ ಅವರಿಗೆ 2023-24ನೇ ಸಾಲಿನ ಸಂಸ್ಥೆಯ ’ಉತ್ತಮ ವಿದ್ಯಾರ್ಥಿ’ಪ್ರಶಸ್ತಿಯನ್ನು ಸಂಸ್ಥೆಯ ಪರವಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರು ನೀಡಿ ಗೌರವಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಾಗೂ ಐಟಿಐಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಬೆಥನಿ ವಿದ್ಯಾಸಂಸ್ಥೆಯ ಸ್ಥಾಪಕರಾದ ರೆ.ಫಾ.ಝಕರಿಯಾ ನಂದಿಯಾಟ್, ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲರೂ, ಸೃಷ್ಟಿ 2023ರ ಸಹ ಸಂಯೋಜಕರಾದ ಜೋಸ್ ಎಂ.ಜೆ., ಬೆಥನಿ ಐಟಿಐ ಪ್ರಾಂಶುಪಾಲರಾದ ಸಜಿ ಕೆ.ತೋಮಸ್, ಜ್ಞಾನೋದಯ ಬೆಥನಿ ಪ್ರೌಢಶಾಲಾ ಮುಖ್ಯಶಿಕ್ಷಕ ಜಾರ್ಜ್ ಕೆ.ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಥನಿ ಎಸ್.ಬಿ.ಕಾಲೇಜಿನ ಪ್ರಾಂಶುಪಾಲ, ಸೃಷ್ಟಿ ೨೦೨೩ರ ಮುಖ್ಯ ಸಂಯೋಜಕರಾದ ರೆ.ಫಾ.ಜಿಜನ್ ಅಬ್ರಹಾಂ ಅವರು ಸ್ವಾಗತಿಸಿ, ಸೃಷ್ಟಿ 2023ರ ಸಹ ಸಂಯೋಜಕ, ಬೆಥನಿ ಐಟಿಐನ ಉಪ ಪ್ರಾಂಶುಪಾಲರಾದ ಜಾನ್ ಪಿ.ಎಸ್.ವಂದಿಸಿದರು. ವಿದ್ಯಾರ್ಥಿನಿ ಸೋನಾ ಫ್ರಾನ್ಸಿಸ್ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅನ್ನ ಮರಿಯಾ ಮತ್ತು ತಂಡದವರಿಂದ ಸ್ವಾಗತ ನೃತ್ಯ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜ್ಞಾನ ಮಾದರಿ ಪ್ರದರ್ಶನ:
ಸೃಷ್ಟಿ 2023ರ ಆಕರ್ಷಣೆಯಾಗಿ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ವಸ್ತು ಪ್ರದರ್ಶನಗಳು ಗಮನ ಸೆಳೆಯಿತು. ವಿವಿಧ ಮಾಡೆಲ್‌ಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ಅದರ ಬಗ್ಗೆ ವಿವರಣೆ ನೀಡಿದರು. ಇದರ ಜೊತೆಗೆ ಕರಕುಶಲ ವಸ್ತುಗಳ ಪ್ರದರ್ಶನ, ಪ್ರಾಚ್ಯ ವಸ್ತುಗಳ ಪ್ರದರ್ಶನವೂ ಗಮನ ಸೆಳೆಯಿತು. ಬೆಥನಿ ಐಟಿಐ ವಿದ್ಯಾರ್ಥಿಗಳಿಂದಲೂ ವಸ್ತು ಪ್ರದರ್ಶನ ನಡೆಯಿತು. ಬೆಥನಿ ವಿದ್ಯಾಸಂಸ್ಥೆಯ ಪೋಷಕರು, ಸಾರ್ವಜನಿಕರು, ನೆರೆಯ ಶಾಲೆಗಳ ವಿದ್ಯಾರ್ಥಿಗಳೂ ಭೇಟಿ ನೀಡಿ ವಸ್ತುಪ್ರದರ್ಶನ ವೀಕ್ಷಿಸಿದರು.
ಆಹಾರ ಮೇಳ:
ವಿವಿಧ ಮನೋರಂಜನಾ ಸ್ಪರ್ಧೆಗಳು, ಆಹಾರ ಮಳಿಗೆಗಳೂ ಗಮನ ಸೆಳೆಯಿತು. ಶಾಲೆಯ ಮಕ್ಕಳೇ ಆಹಾರ ಮೇಳಗಳನ್ನು ಆಯೋಜಿಸಿದ್ದರು. ಈ ಮೂಲಕ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಮೂಡಿಸಲು ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆಹಾರ ಮಳಿಗೆಗಳಿಗೆ ಮಕ್ಕಳು, ಪೋಷಕರೂ ಭೇಟಿ ನೀಡಿ ವಿವಿಧ ವಸ್ತುಗಳನ್ನು ಖರೀದಿಸಿದರು. ಇಲ್ಲಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಮಕ್ಕಳಿಗೆ, ಸಾರ್ವಜನಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಜಿ.ಪಂ. ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾರಾಲಯ ವಿಶೇಷ ಆಕರ್ಷಣೆ:
ತಾರಾಲಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರವನ್ನು ಇಲ್ಲಿ ಪ್ರದರ್ಶನ ಮಾಡಲಾಯಿತು. 45 ನಿಮಿಷದ ಚಿತ್ರ ಪ್ರದರ್ಶನವನ್ನು ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು, ಪೋಷಕರು, ಸಾರ್ವಜನಿಕರು ವೀಕ್ಷಿಸಿ ಆನಂದಿಸಿದರು. ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಡಿ.22: ಸಮಾರೋಪ:
ಸೃಷ್ಟಿ 2023 ಇದರ ಸಮಾರೋಪ ಸಮಾರಂಭ ಡಿ.22ರಂದು ಮಧ್ಯಾಹ್ನ ನಡೆಯಲಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಭೋಜೇಗೌಡ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿ.22ರಂದು ಅಂತರ್ ಕಾಲೇಜು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯೂ ನಡೆಯಲಿದೆ. ಅಲ್ಲದೇ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ತನಕ ಮಂಗಳೂರು ಸುರತ್ಕಲ್‌ನ ಶ್ರೀನಿವಾಸ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.