ಹಿಜಾಬ್ ಧರಿಸಿ ತರಗತಿ ಪ್ರವೇಶ ನಿಷೇಧಿಸಿದ್ದ ಬಿಜೆಪಿ ಸರಕಾರ
ವಿದ್ಯಾರ್ಥಿನಿಯರು ಶಾಲಾ,ಕಾಲೇಜು ತರಗತಿಗಳಿಗೆ ಹಿಜಾಬ್ ಧರಿಸಿ ಪ್ರವೇಶಿಸುವುದನ್ನು ಹಿಂದಿನ ಬಿಜೆಪಿ ಸರಕಾರ ನಿಷೇಧಿಸಿತ್ತು. ಹಿಜಾಬ್ ನಿಷೇಧ ವಿಚಾರದ ವಿವಾದದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಗಲಾಟೆ, ಪ್ರತಿಭಟನೆ ನಡೆದಿತ್ತು.
ಬೆಂಗಳೂರು:ಹಿಂದಿನ ಬಿಜೆಪಿ ಸರ್ಕಾರದ ಅವಽಯಲ್ಲಿ ತರಲಾಗಿದ್ದ ಹಿಜಾಬ್ ನಿಷೇಧವನ್ನು ಹಿಂಪಡೆಯಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ ಎಂದು ಮೈಸೂರಿನಲ್ಲಿ ಸಿಎಂ ಹೇಳಿದರು.
ಎಲ್ಲರೂ ಹಿಜಾಬ್ ಧರಿಸಿ ಹೋಗಬಹುದು. ಆದೇಶ ಹಿಂಪಡೆಯಲು ಸೂಚಿಸಿದ್ದೇನೆ. ಉಡುಪು, ಊಟ ಮಾಡುವುದು ನಿಮ್ಮ ಆಯ್ಕೆ. ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು. ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಇದರಿಂದ ವಿಚಲಿತರಾಗುವ ಪ್ರಶ್ನೆಯೇ ಇಲ್ಲ. ರಾಜೀ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಸುಳ್ಳು, ಮೋಸ ಮಾಡುವವರ ಜೊತೆ ಹೋಗಬೇಡಿ ಎಂದು ಸಿದ್ಧರಾಮಯ್ಯ ಹೇಳಿದರು. ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ತಂದಿದ್ದ ಹಿಜಾಬ್ ನಿಷೇಧ ಆದೇಶವನ್ನು ಹಾಲಿ ಕಾಂಗ್ರೆಸ್ ಸರಕಾರ ತೆರವು ಮಾಡುತ್ತಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ತೆರಳಲು ಅವಕಾಶ ನೀಡಲು ಮುಂದಾಗಿದೆ.
ಹಿಜಾಬ್ ಧರಿಸಿ ತರಗತಿ ಪ್ರವೇಶ ನಿಷೇಧಿಸಿದ್ದ ಬಿಜೆಪಿ ಸರಕಾರ: ಶಾಲಾ,ಕಾಲೇಜು ತರಗತಿಗಳಿಗೆ ಹಿಜಾಬ್ ಧರಿಸಿ ಪ್ರವೇಶಿಸುವುದನ್ನು ಹಿಂದಿನ ಬಿಜೆಪಿ ಸರಕಾರ ನಿಷೇಧಿಸಿತ್ತು. ಹಿಜಾಬ್ ನಿಷೇಧ ವಿಚಾರದ ವಿವಾದದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಗಲಾಟೆ, ಪ್ರತಿಭಟನೆ ನಡೆದಿತ್ತು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಪುತ್ತೂರು, ವಿಟ್ಲ,ಕಡಬದಲ್ಲೂ ಹಿಜಾಬ್ ನಿಷೇಧ ವಿಚಾರ ಪ್ರತಿಧ್ವನಿಸಿತ್ತು.ಕಾಲೇಜಿನ ಸಮವಸ ನಿಯಮಾವಳಿ ಉಲ್ಲಂಸಿ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ್ದ ಉಪ್ಪಿನಂಗಡಿ ಸ.ಪ್ರ.ದ.ಕಾಲೇಜಿನ ಸುಮಾರು 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು. ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು, ಸರ್ಕಾರದ ಆದೇಶ, ಕಾಲೇಜು ಅಭಿವೃದ್ದಿ ಸಮಿತಿಯ ನಿರ್ಣಯದ ಹೊರತಾಗಿಯೂ ಸತತವಾಗಿ ನಿಯಮ ಉಲ್ಲಂಸಿ ಹಿಜಾಬ್ ಧರಿಸಿಯೇ ಕಾಲೇಜು ಪ್ರವೇಶಿಸಲು ಉದ್ದೇಶಿಸಿದ್ದ ಆರೋಪದಲ್ಲಿ 24 ಮಂದಿ ವಿದ್ಯಾರ್ಥಿನಿಯರನ್ನು ಒಂದು ವಾರ ಕಾಲ ಅಮಾನತುಗೊಳಿಸಲಾಗಿತ್ತು.ಇದಕ್ಕೂ ಮುನ್ನ ಇದೇ ಕಾರಣಕ್ಕಾಗಿ 7 ಮಂದಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು. ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದುದರಿಂದ ಬಳಿಕ ಕಾಲೇಜಿಗೆ ರಜೆ ಸಾರಲಾಗಿತ್ತು. ಇತರ ಕೆಲವೆಡೆಯೂ ಹಿಜಾಬ್ ನಿಷೇಧ ವಿಚಾರ ವಿವಾದ ಸೃಷ್ಟಿಸಿತ್ತು.
ಸಮವಸ್ತ್ರ ಕಡ್ಡಾಯ ಹೈಕೋರ್ಟ್ ತೀರ್ಪು: ಶಾಲಾ ಕಾಲೇಜುಗಳಲ್ಲಿ ಸರಕಾರ ನಿಗದಿ ಪಡಿಸಿದ ಸಮವಸ್ತ್ರ ಧರಿಸುವುದು ಕಡ್ಡಾಯ. ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು.ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಖ್ಯ ನ್ಯಾಯಮೂರ್ತಿಯವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. ಹಿಜಾಬ್ ವಿಚಾರ ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಭಾಗವಲ್ಲ, ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವ ಆದೇಶ ಪಾಲಿಸಬೇಕು. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಿದೆ ಎಂದು ಮಹತ್ವದ ತೀರ್ಪು ನೀಡಿದ ಹೈಕೋರ್ಟ್ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿತ್ತು.
ಹೈಕೋರ್ಟ್ ತೀರ್ಪಿಗೆ ಅಸಮಾಧಾನ ಮುಸ್ಲಿಂ ವರ್ತಕರಿಂದ ಸ್ವಯಂಪ್ರೇರಿತ ಬಂದ್: ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿ ಕರ್ನಾಟಕ ಅಮೀರೇ ಎ ಶರೀಅತ್‌ನ ಮೌಲಾನಾ ಸಗೀರ್ ಅಹಮ್ಮದ್ ಅವರು ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲವಾಗಿ ಪುತ್ತೂರು, ಕಡಬ ತಾಲೂಕು ಮತ್ತು ವಿಟ್ಲ ವ್ಯಾಪ್ತಿಯಲ್ಲಿಯೂ ಮಾರ್ಚ್ 17ರಂದು ಮುಸ್ಲಿಮ್ ವರ್ತಕರು ವ್ಯವಹಾರ ಸ್ಥಗಿತ ಮಾಡಿ ಶಾಂತಿಯುತ ಬಂದ್ ಆಚರಿಸಿದ್ದರು.
ಮುಸ್ಲಿಮ್ ಸಮುದಾಯದವರಿಗೆ ಸೇರಿರುವ ಬಹುತೇಕ ಅಂಗಡಿ, ಮಳಿಗೆಗಳು, ಹೊಟೇಲ್‌ಗಳು ಹಾಗೂ ಹಸಿಮೀನು, ಒಣಮೀನು ಮತ್ತು ಚಿಕನ್, ಮಟನ್ ಮಾರುಕಟ್ಟೆಯನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಮುಸ್ಲಿಮ್ ಸಮುದಾಯದವರಿಗೆ ಸೇರಿದ ಅಟೋರಿಕ್ಷಾಗಳು ಹಾಗೂ ಇತರ ಟೂರಿಸ್ಟ್ ವಾಹನಗಳ ಪೈಕಿ ಬಹುತೇಕ ಓಡಾಟ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದ್ದರು. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು, ಮದರಸಗಳಿಗೆ ರಜೆ ಘೋಷಿಸಲಾಗಿತ್ತು. ಕೆಲವೆಡೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಗೈರು ಹಾಜರಾಗಿದ್ದರು.