ಪಾಲಶ ಮರದ ಕೊಂಬೆ ಮೆರವಣಿಗೆ – ಕೆಂಡ ಸೇವೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಡಿ.27ರಂದು ಪ್ರಾತಃ ಕಾಲ ಗಂಟೆ 6.30ರಿಂದ ಸಾಂಪ್ರದಾಯಿಕವಾಗಿ ನಡೆಯಲಿದೆ.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹವನದ ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಅಯ್ಯಪ್ಪ ಗುಡಿಯಲ್ಲಿ ಶ್ರೀ ಅಯ್ಯಪ್ಪ ದೇವರಿಗೆ ವಿವಿಧ ದ್ರವ್ಯ, ಭಸ್ಮ, ಸುವಸ್ತುಗಳಿಂದ ಅಭಿಷೇಕಗಳು ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಿಂದ ಪಾಲ್ ಕೊಂಬು/ ಪಾಲಶ ಮರದ ಕೊಂಬೆಯ ಭವ್ಯ ಮೆರವಣಿಗೆ ಆರಂಭಗೊಳ್ಳಲಿದೆ. ರಾತ್ರಿ ಶ್ರೀ ಅಯ್ಯಪ್ಪ ಗುಡಿಯಲ್ಲಿ ಮಂಗಳಾರತಿ, ದೀಪಾರಾಧನೆ ನಡೆಯಲಿದೆ. ರಾತ್ರಿ ಗಂಟೆ 10.30 ರಿಂದ ಅಯ್ಯಪ್ಪ ವಳಕ್ಕು ಕಾರ್ಯಕ್ರಮ, ಅಯ್ಯಪ್ಪ ವಾವರಯುದ್ದ ನಡೆಯಲಿದೆ. ಪಿ. ವೇಣುಗೋಪಾಲ್ ಮತ್ತು ಬಳಗದವರಿಂದ ಕೇರಳದ ವಿಳಕ್ಕು ಕಾರ್ಯಕ್ರಮ ಮಾಡಲಿದ್ದಾರೆ. ರಾತ್ರಿ ಗಂಟೆ 2ಕ್ಕೆ ಕೆಂಡ ಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.