ಪುತ್ತೂರು: ನಮ್ಮ ಮನೆಗಳ ಮೇಲೆ ಧರೆ ಕುಸಿದಿದೆ, ಮಳೆ ಬರುವಾಗ ಮಳೆ ನೀರು ಮನೆಯೊಳಗೆ ಬರುತ್ತಿದೆ, ಮಳೆಗಾಲದಲ್ಲಿ ನಮ್ಮ ಮನೆಯೊಳಗೆ ಕುಳಿತುಕೊಳ್ಳಲು ನಮಗೆ ಭಯವಾಗುತ್ತಿದೆ, ಕೆಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದರ ಬಗ್ಗೆ ನಾವು ಮಾಜಿ ಶಾಸಕರಾದ ಸಂಜೀವ ಮಠಂದೂರಿಗೆ ಮನವಿ ಮಾಡಿದ್ದೆವು. ಅವರು ಬಂದು ಸ್ಥಳ ವೀಕ್ಷಣೆ ಮಾಡಿ ಇಲ್ಲಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಪಿಕ್ಕಾಸು ಹಾಕಿ ಹೋಗಿದ್ದಾರೆ. ಆ ಬಳಿಕ ಇತ್ತ ಕಡೆ ತಿರುಗಿ ನೋಡಿಲ್ಲ ಎಂದು ಮಾಜಿ ಶಾಸಕರ ವಿರುದ್ದ ಸಂಪ್ಯ ಕಾಲನಿ ನಿವಾಸಿಗಳು ಹಾಲಿ ಶಾಸಕ ಅಶೋಕ್ ರೈಯವರಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಕಂಬಲ್ದಡ್ಡ ಅಂಗನವಾಗಿ ಕಟ್ಟಡ ಉದ್ಘಾಟನೆಗೆ ತೆರಳಿದ ಶಾಸಕರು ರಸ್ತೆಯಲ್ಲಿ ಬರುವಾಗ ಅಡ್ಡಗಟ್ಟಿದ ಕಾಲನಿ ನಿವಾಸಿಗಳು ನಮ್ಮ ಸಮಸ್ಯೆಯನ್ನು ಬಂದು ನೋಡಿ ಎಂದು ಮನವಿ ಮಾಡಿದರು. ಸ್ಥಳಕ್ಕೆ ತೆರಳಿದಾಗ ಅಲ್ಲಿನ ಅವಸ್ಥೆ ಕಂಡು ಮರುಗಿದ ಶಾಸಕರು ನೀವು ಈ ಹಿಂದೆ ಯಾರಲ್ಲಾದರೂ ಸಮಸ್ಯೆ ಬಗ್ಗೆ ಹೇಳಿಲ್ಲವೇ? ಎಂದು ಕೇಳಿದಾಗ ಅಲ್ಲಿದ್ದ ನಿವಾಸಿಗಳು ನಡೆದ ಘಟನೆಯನ್ನು ವಿವರಿಸಿದರು. ನಾವು ಕಾಂಗ್ರೆಸ್ಸಿಗೆ ವೋಟು ಹಾಕಿಲ್ಲ, ಭರವಸೆಯನ್ನು ನಂಬಿ ನಾವು ಕೆಟ್ಟಿದ್ದೇವೆ ಎಂದು ಸ್ಥಳೀಯರು ಶಾಸಕರಲ್ಲಿ ಹೇಳಿದರು. ನೀವು ದಯಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಕೊಡಿ ಎಂದು ಕೇಳಿಕೊಂಡರು. ಈ ಬಗ್ಗೆ ಮಾತನಾಡಿದ ಶಾಸಕರು ನಾನು ಅನುದಾನ ಬಿಡುಗಡೆಯಾದರೆ ಮಾತ್ರ ಪಿಕ್ಕಾಸು ಹಾಕುವುದು, ಭರವಸೆ ಕೊಟ್ಟು ಪಿಕ್ಕಾಸು ಹಾಕಿ ಹೋಗುವುದಿಲ್ಲ. ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲು ಸುಮಾರು 3 ಕೋಟಿ ಅನುದಾನ ಬೇಕು. ನಾನು ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಮೊದಲ ಆಧ್ಯತೆಯಲ್ಲೇ ಪರಿಹರಿಸಲು ಯತ್ನ ಮಾಡುತ್ತೇನೆ. ಸ್ವಲ್ಪ ಕಾಲವಕಾಶ ಬೇಕು ಎಂದು ತಿಳಿಸಿದರು. ಸ್ಥಳೀಯರಾದ ಪದ್ಮ ಸೇರಿದಂತೆ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.