ಪುತ್ತೂರು: ಅಂಗನವಾಡಿಗೆ ತೆರಳುತ್ತಿದ್ದ ತಾಯಿ ಮತ್ತು ಮಗುವಿಗೆ ಕೆಎಸ್ಆರ್ಟಿಸಿ ಬಸ್ಸೊಂದು ಡಿಕ್ಕಿಯಾಗಿ ತಾಯಿ ಮತ್ತು ಮಗು ತೀವ್ರ ಗಾಯಗೊಂಡ ಘಟನೆ ನೆಟ್ಟಣಿಗೆಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಜ.4ರಂದು ನಡೆದಿರುವ ಬಗ್ಗೆ ತಡವಾಗಿ ವರದಿಯಾಗಿದೆ.
ನೆಟ್ಟಣಿಗೆಮುಡ್ನೂರು ಗ್ರಾಮದ ಗಾಳಿಮುಖ ಸುಜಿತ್ ಜಿ ಅವರ ಪತ್ನಿ ಅಶ್ವಿತ(26ವ) ಮತ್ತು ಅವರ ಪುತ್ರಿ ಸಮನ್ವಿ(4 ವ)ರವರು ತೀವ್ರ ಗಾಯಗೊಂಡವರು. ಅಶ್ವಿತ ಅವರು ಪುತ್ರಿ ಸಮನ್ವಿಯನ್ನು ಅಂಗನವಾಡಿಗೆ ಬಿಡಲೆಂದು ಬೆಳಿಗ್ಗೆ ಮನೆಯಿಂದ ನಡೆದು ಕೊಂಡು ಹೋಗುತ್ತಿದ್ದ ವೇಳೆ ಗಾಳಿಮುಖದ ಲಕ್ಷ್ಮೀಗೇರು ಬೀಜದ ಕಾರ್ಖಾನೆ ಬಳಿ ತಿರುವಿನಲ್ಲಿ ಕುಂಟಾರು ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ತಾಯಿ ಮತ್ತು ಮಗುವಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತಾಯಿ ಮತ್ತು ಮಗು ಮಣ್ಣು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಈ ವೇಳೆ ಅಶ್ವಿತ ಅವರ ಗಂಡ ತಕ್ಷಣ ಅಲ್ಲಿಗೆ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಬ್ಬರನ್ನು ಪುತ್ತೂರು ಆಸ್ಪತ್ರೆಗೆ ಕೆರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿ ಬಸ್ ಚಾಲಕ ರಾಜೇಶ್ ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.