ಪುತ್ತೂರು: ಮನೆಯಿಂದ ಪೇಟೆಗೆಂದು ಬಂದ ಬಾಲಕ ದಿಢೀರನೆ ನಾಪತ್ತೆಯಾಗಿದ್ದು, ಹುಡುಕಾಟದ ಬಳಿಕ ಪೊಲೀಸರು ಬಾಲಕನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದ ಘಟನೆ ಜ.18ರಂದು ಬೆಳಿಗ್ಗೆ ನಡೆದಿದೆ.
ಉಪ್ಪಿನಂಗಡಿಯ ಆದರ್ಶ ನಗರ ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿ ಜ.17ರಂದು ಸಂಜೆ ಸುಮಾರು ಏಳು ಗಂಟೆಗೆ ಮನೆಯಿಂದ ಉಪ್ಪಿನಂಗಡಿ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಾನೆ. ಆದರೆ ರಾತ್ರಿ ಸುಮಾರು 11 ಗಂಟೆಯಾದರೂ ಆತ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ರಾತ್ರಿ ಉಪ್ಪಿನಂಗಡಿಯಲ್ಲಿ ಹುಡಕಾಟ ನಡೆಸಿದ್ದಾರೆ. ಬಾಲಕ ಎಲ್ಲಿಯೂ ಪತ್ತೆಯಾಗದೆ ಇದ್ದಾಗ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವರ್ತರಾದ ಶಾಸಕರು ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ, ನಾಪತ್ತೆಯಾದ ಬಾಲಕನ ಮಾಹಿತಿ ನೀಡಿದ್ದರು. ಶಾಸಕರ ಸೂಚನೆಯಂತೆ ಪೊಲೀಸರು ವಿವಿಧ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ಮಾಹಿತಿ ರವಾನೆ ಮಾಡಿದ್ದರು. ಪೊಲೀಸರು ಬೆಳಿಗಿನ ಜಾವ ಹುಡುಕಾಟ ನಡೆಸುವ ವೇಳೆ ನಾಪತ್ತೆಯಾದ ಬಾಲಕ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಆತನನ್ನು ಕರೆದುಕೊಂಡು ಬರಲು ಪೋಷಕರು ಬೆಂಗಳೂರಿಗೆ ತೆರಳಿದ್ದಾರೆ. ತಡರಾತ್ರಿ ಕರೆ ಮಾಡಿದಾಗ ತುರ್ತು ಸ್ಪಂದನೆ ನೀಡುವ ಮೂಲಕ ಬಾಲಕನ ಪತ್ತೆಗೆ ನೆರವು ನೀಡಿದ ಶಾಸಕರಿಗೆ, ಸಹಕರಿಸಿದ ಪೊಲೀಸರಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ದಿಢೀರ್ ನಾಪತ್ತೆಯಾದ ವಿದ್ಯಾರ್ಥಿ – ತಡರಾತ್ರಿಯಲ್ಲಿ ಪೋಷಕರ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ-...