ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆ

0

ಕುಡಿಯುವ ನೀರಿನ ದುರ್ಬಳಕೆ ತಡೆಗೆ ಮುಂದಾದ ಕೆಯ್ಯೂರು ಗ್ರಾಪಂ
ಅಕ್ರಮ ಕಂಡು ಬಂದರೆ ಸಂಪರ್ಕ ಕಡಿತ…!


ಪುತ್ತೂರು: ಬೇಸಿಗೆಕಾಲ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯುಂಟಾಗುವ ಸಾಧ್ಯತೆ ಇದೆ ಆದ್ದರಿಂದ ಪಂಚಾಯತ್‌ನಿಂದ ಸರಬರಾಜಾಗುವ ಕುಡಿಯುವ ನೀರನ್ನು ಯಾರು ಕೂಡ ದುರ್ಬಳಕೆ ಮಾಡಬಾರದು, ಅಕ್ರಮ ನಳ್ಳಿ ಸಂಪರ್ಕ ಮಾಡಿಸಿಕೊಂಡು ನೀರನ್ನು ಪೋಲು ಮಾಡುವುದು, ತೋಟ, ಬಾವಿಗೆ ನೀರನ್ನು ಬಿಡುವುದು ಇತ್ಯಾದಿ ಕಂಡು ಬಂದಿದ್ದು ಈ ರೀತಿಯಾಗಿ ಅಕ್ರಮ ನಳ್ಳಿ ಸಂಪರ್ಕ ಪಡೆದುಕೊಂಡದ್ದು ಕಂಡು ಬಂದರೆ ಅಥವಾ ಕುಡಿಯುವ ನೀರನ್ನು ತೋಟ, ಬಾವಿ ಇತ್ಯಾದಿಗಳಿಗೆ ಉಪಯೋಗಿಸುವುದು ಕಂಡು ಬಂದರೆ ಆ ಫಲಾನುಭವಿಗೆ ಇರುವ ನಳ್ಳಿ ನೀರಿನ ಸಂಪರ್ಕವನ್ನು ಶಾಶ್ವತವಾಗಿ ಕಡಿತಗೊಳಿಸುವುದು ಮತ್ತು ಕಾನೂನು ರೀತಿಯ ಕ್ರಮ ಕೈಗೊಳ್ಳುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿ ಮನೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುವುದು ಎಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.


ಸಭೆಯು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಜ.31 ರಂದು ಗ್ರಾಪಂ ಕಛೇರಿಯಲ್ಲಿ ನಡೆಯಿತು. ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕೇಳಿರುವ ಪ್ರಶ್ನೆಗಳ ಮಂಡನೆ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಶರತ್ ಕುಮಾರ್‌ರವರು, ಗ್ರಾಮಸಭೆಯಲ್ಲಿ ಗ್ರಾಮಸ್ಥರೋರ್ವರು ನಮ್ಮ ಮನೆಗೆ ನಳ್ಳಿ ನೀರು ಬರ‍್ತಾ ಇಲ್ಲ ಎಂದು ದೂರು ನೀಡಿದ್ದರು ಅದರಂತೆ ನಾವು ಪರಿಶೀಲನೆಗೆ ತೆರಳಿದ ವೇಳೆ ಮೀಟರ್ ಅನ್ನು ತಪ್ಪಿಸಿ ಅಕ್ರಮ ಸಂಪರ್ಕ ಪಡೆದುಕೊಂಡು ತೋಟಕ್ಕೆ ನೀರು ಬಿಡುವುದು, ಬಾವಿಗೆ ನೀರು ತುಂಬಿಸುವುದು ಇತ್ಯಾದಿ ಕಂಡು ಬಂದಿದೆ. ಈ ರೀತಿಯಾಗಿ ಅಕ್ರಮ ಎಸಗಿದವರ ನಳ್ಳಿ ಸಂಪರ್ಕವನ್ನು ಶಾಶ್ವತವಾಗಿ ಕಡಿತ ಮಾಡಿದ್ದೇವೆ. ಕುಡಿಯುವ ನೀರನ್ನು ಯಾರೂ ಕೂಡ ದುರ್ಬಳಕೆ ಮಾಡಬಾರದು, ಪಂಚಾಯತ್‌ಗೆ ತಿಳಿಯದಂತೆ ಅಕ್ರಮ ಪೈಪು ಸಂಪರ್ಕ ಪಡೆದುಕೊಂಡು ಅಕ್ರಮ ಎಸಗಿರುವುದು ಕಂಡು ಬಂದರೆ ಅವರಿಗೆ ಮುಂದಕ್ಕೆ ಶಾಶ್ವತವಾಗಿ ನಳ್ಳಿ ಸಂಪರ್ಕವನ್ನು ಕಡಿತ ಮಾಡುತ್ತೇವೆ ಎಂದು ತಿಳಿಸಿದರು.


ಪರಿಶೀಲನೆಗೆ ತಂಡ ರಚನೆ
ಹಲವು ಮಂದಿ ನಮಗೆ ನೀರು ಬರ‍್ತಾ ಇಲ್ಲ ಎಂದು ದೂರು ನೀಡಿರುವ ವಿಚಾರದಲ್ಲಿ ಚರ್ಚೆ ನಡೆದು ಪ್ರತಿ ಸೋಮವಾರ ಪ್ರತಿ ವಾರ್ಡ್‌ಗೆ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರು ಭೇಟಿ ಕೊಟ್ಟು ಪರಿಶೀಲನೆ ಮಾಡುವುದು, ಅಕ್ರಮ ಸಂಪರ್ಕಗಳು ಕಂಡು ಬಂದರೆ ಸಂಪರ್ಕ ಕಡಿತ ಮಾಡುವುದು, ಮುಂದಿನ ದಿನದಿಂದಲೇ ಕುಡಿಯುವ ನೀರಿನ ಪರಿಶೀಲನೆಗೆ ತೆರಳುವುದು ಎಂದು ನಿರ್ಣಯಿಸಲಾಯಿತು. ಈ ಬಗ್ಗೆ ಪ್ರತಿ ವಾರ್ಡ್‌ಗೆ ಪರಿಶೀಲನಾ ತಂಡವನ್ನು ರಚಿಸಲಾಯಿತು.


ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ…!
ಈಗಾಗಲೇ ಗ್ರಾಮದಲ್ಲಿ ಹಲವು ಮಂದಿ ಕುಡಿಯುವ ನೀರಿನ ಬಿಲ್ ಪಾವತಿಸದೇ ಇರುವುದು ಕಂಡು ಬಂದಿದೆ. ನೀರಿನ ಬಿಲ್ ಬಾಕಿ ಇರುವವರಿಗೆ ಹಲವು ಬಾರಿ ನೋಟೀಸ್ ನೀಡಿದ್ದೇವೆ ಅಲ್ಲದೆ ಮೌಖಿಕವಾಗಿಯೂ ಹೇಳಲಾಗಿದೆ. ಹೀಗಿದ್ದರೂ ಬಿಲ್ ಪಾವತಿಸಲು ನಿರಾಕರಿಸುತ್ತಿದ್ದಾರೆ. ನೀರಿನ ಬಿಲ್ ಪಾವತಿಸದವರ ಸಂಪರ್ಕ ಕೂಡ ಕಡಿತ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪದೇ ಪದೇ ಹೇಳಿಯೂ ಬಿಲ್ ಪಾವತಿಸದಿದ್ದರೆ ಅಂಥವರ ಸಂಪರ್ಕ ಕಡಿತ ಮಾಡುವುದು ಎಂದು ನಿರ್ಣಯಿಸಲಾಯಿತು.


ಕಾರ್ಯಕ್ರಮ ಮುಗಿದ ಎರಡೂ ದಿನದೊಳಗೆ ಬ್ಯಾನರ್ ತೆರವು ಮಾಡಬೇಕು…!
ಈಗಾಗಲೇ ಚುನಾವಣೆ ಹತ್ತಿರ ಬರುತ್ತಿದ್ದು ಗ್ರಾಮದಲ್ಲಿ ಅಳವಡಿಸಿರುವ ಬ್ಯಾನರ್‌ಗಳನ್ನು ತೆರವು ಮಾಡುವಂತೆ ಪೊಲೀಸ್ ಇಲಾಖೆಯಿಂದ ಆದೇಶ ಬಂದಿರುವ ವಿಚಾರವನ್ನು ಪಂಚಾಯತ್ ಕಾರ್ಯದರ್ಶಿಯವರ ಸಭೆಗೆ ಗಮನಕ್ಕೆ ತಂದರು. ಈ ಬಗ್ಗೆ ಚರ್ಚೆ ನಡೆದು, ಬ್ಯಾನರ್ ವಿಚಾರದಲ್ಲಿ ಪ್ರತಿ ವಾರ್ಡ್‌ನ ಸದಸ್ಯರು ಗಮನ ಹರಿಸಬೇಕು ತಮ್ಮ ವಾರ್ಡ್‌ನಲ್ಲಿ ಅಳವಡಿಸಿರುವ ಬ್ಯಾನರ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ಶರತ್ ಕುಮಾರ್ ತಿಳಿಸಿದರು. ಯಾವುದೇ ಕಾರ್ಯಕ್ರಮ ಇರಲಿ ಕಾರ್ಯಕ್ರಮ ಮುಗಿದ ಎರಡು ದಿನದೊಳಗೆ ಆ ಬ್ಯಾನರ್ ಅನ್ನು ತೆರವು ಮಾಡಿಸಬೇಕು ಒಂದು ವೇಳೆ ಕಾರ್ಯಕ್ರಮ ಸಂಘಟಕರು ತೆರವು ಮಾಡದಿದ್ದರೆ ಪಂಚಾಯತ್‌ನಿಂದಲೇ ತೆರವು ಮಾಡಿಸುವ ಕೆಲಸ ಆಗಬೇಕು ಎಂದು ಜಯಂತ ಪೂಜಾರಿ ತಿಳಿಸಿದರು. ಅವಧಿ ಮುಗಿದರೂ ಬ್ಯಾನರ್ ತೆರವು ಮಾಡದಿದ್ದರೆ ಬ್ಯಾನರ್ ಶುಲ್ಕವನ್ನು ಮುಟ್ಟುಗೋಳು ಹಾಕಿಕೊಳ್ಳಬೇಕು ಎಂದು ಬಟ್ಯಪ್ಪ ರೈ ತಿಳಿಸಿದರು. ಪರವಾನೆಗ ಪಡೆಯದೇ ಕೆಲವು ಮಂದಿ ರಾತ್ರೋ ರಾತ್ರಿ ಬಂದು ಬ್ಯಾನರ್ ಕಟ್ಟಿ ಹೋಗುತ್ತಾರೆ ಎಂದು ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು. ಬ್ಯಾನರ್ ವಿಷಯದಲ್ಲೇ ಕೆಲವೊಮ್ಮೆ ಘರ್ಷಣೆಗಳು ಸಂಭವಿಸುತ್ತವೆ ಆದ್ದರಿಂದ ಬ್ಯಾನರ್ ಅಳವಡಿಸುವವರು ಕಡ್ಡಾಯವಾಗಿ ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳಬೇಕು ಅಲ್ಲದೆ ಪರವಾನಗೆ ಅವಧಿ ಮುಗಿದ ಬಳಿಕ ಬ್ಯಾನರ್ ತೆರವು ಮಾಡುವ ಮೂಲಕ ಪಂಚಾಯತ್‌ನೊಂದಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಶರತ್ ಕುಮಾರ್ ತಿಳಿಸಿದರು. ಬ್ಯಾನರ್ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.


ರೇಷನ್ ಕಾರ್ಡ್ ತಿದ್ದುಪಡಿ ಆಗ್ತಾ ಇಲ್ಲ…
ಸರಕಾರದ ಸೌಲಭ್ಯಗಳನ್ನು ಪಡೆಯಲು ಸೇರಿದಂತೆ ಎಲ್ಲಾ ದಾಖಲೆಗಳಿಗೂ ರೇಷನ್ ಕಾರ್ಡ್ ಅತೀ ಅಗತ್ಯ ಆದರೆ ಕೆಲವು ದಿನಗಳಿಂದ ರೇಷನ್ ಕಾರ್ಡ್ ತಿದ್ದುಪಡಿ ಆಗದೇ ಇರುವುದರಿಂದ ತೊಂದರೆಗಳಾಗಿವೆ. ಸರ್ವರ್ ಸಮಸ್ಯೆ ಎಂದು ಸೇವಾ ಕೇಂದ್ರದವರು ಹೇಳುತ್ತಾರೆ. ರೇಷನ್ ಕಾರ್ಡ್ ಎಲ್ಲದ್ದಕ್ಕೂ ಅಗತ್ಯವಿರುವುರಿಂದ ಈ ಬಗ್ಗೆ ಸರಕಾರ ಗಮನಹರಿಸಬೇಕು, ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ವಿಜಯ ಕುಮಾರ್ ಸಣಂಗಳ ತಿಳಿಸಿದರು.


ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಮೀನಾಕ್ಷಿ ವಿ.ರೈ, ಶುಭಾಷಿಣಿ, ಗಿರಿಜಾ ಕೆ, ಮಮತಾ ರೈ, ಜಯಂತಿ ಎಸ್.ಭಂಡಾರಿ, ವಿಜಯ ಕುಮಾರ್ ಸಣಂಗಳ, ತಾರಾನಾಥ ಕಂಪರವರುಗಳು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ನಿರ್ಣಯಗಳನ್ನು ದಾಖಲಿಸಿಕೊಂಡರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ ಸರಕಾರದ ಸುತ್ತೋಲೆ, ಸಾರ್ವಜನಿಕರ ಅರ್ಜಿಗಳನ್ನು ಓದಿ ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಧರ್ಮಣ್ಣ, ರಫೀಕ್ ತಿಂಗಳಾಡಿ ಸಹಕರಿಸಿದ್ದರು.

ಅಭಿವೃದ್ಧಿ ಅಧಿಕಾರಿಯವರ ವರ್ಗಾವಣೆ ಬೇಡ
ಕೆಯ್ಯೂರು ಗ್ರಾಮ ಪಂಚಾಯತ್‌ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ನಮಿತಾ ಎ.ಕೆರವರು ಒಳಮೊಗ್ರು ಗ್ರಾಪಂನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಇಓರವರ ಆದೇಶದ ಬಗ್ಗೆ ಚರ್ಚೆ ನಡೆಸಲಾಯಿತು. ಕೆಯ್ಯೂರು ಗ್ರಾಪಂನಲ್ಲಿ ಈಗಾಗಲೇ ಸಿಬ್ಬಂದಿಗಳ ಕೊರತೆ ಇದೆ. ಓರ್ವ ಸಿಬ್ಬಂದಿ ಹೆರಿಗೆ ರಜೆಯಲ್ಲಿದ್ದಾರೆ. ಹೀಗಿರುವಾಗ ಪಿಡಿಓರವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವುದು ಸರಿಯಲ್ಲ ಅವರನ್ನು ಇಲ್ಲಿಯೆ ಉಳಿಸಿಕೊಂಡು ಒಳಮೊಗ್ರು ಗ್ರಾಪಂಗೆ ಬೇರೆ ಪಿಡಿಓರವರ ನೇಮಕ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಹೀಗಿದ್ದೂ ವರ್ಗಾವಣೆ ಮಾಡಿದರೆ ಮುಂದೆ ಪ್ರತಿಭಟನೆ ಮಾಡಲೂ ನಾವು ಸಿದ್ಧರಿದ್ದೇವೆ ಎಂದರು.

ನಳ್ಳಿ ಅಕ್ರಮ ಸಂಪರ್ಕಕ್ಕೆ ಬೀಳಲಿದೆ ಬ್ರೇಕ್…!
ಕುಡಿಯುವ ನೀರಿ ಅತೀ ಅಮೂಲ್ಯವಾದದ್ದು ಅದನ್ನು ತೋಟ, ಬಾವಿಗೆ ಬಿಟ್ಟು ಹಾಳು ಮಾಡುವುದು ಸರಿಯಲ್ಲ. ಇನ್ನು ಪಂಚಾಯತ್‌ನಿಂದ ಅಳವಡಿಸಿದ ಮೀಟರ್ ಅನ್ನು ತಪ್ಪಿಸಿ ಬೇರೆ ಕಡೆಯಿಂದ ಅಕ್ರಮ ಪೈಪು ಲೈನ್ ಸಂಪರ್ಕ ಪಡೆದುಕೊಳ್ಳುವುದು ಅಪರಾಧ. ನಾವು ನೀರನ್ನು ಬೇಕಾಬಿಟ್ಟಿ ಪೋಳು ಮಾಡಿದಾಗ ಇತರ ಮನೆಗಳಿಗೆ ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಯಾರ‍್ಯಾರು ಅಕ್ರಮ ಸಂಪರ್ಕಗಳನ್ನು ಮಾಡಿಸಿಕೊಂಡಿದ್ದೀರೋ ಅವರು ತಕ್ಷಣವೇ ಸಂಪರ್ಕವನ್ನು ಕಡಿತ ಮಾಡಬೇಕು, ನೀರನ್ನು ತೋಟ, ಬಾವಿ,ಹೂನಿನ ಗಿಡ ಇತ್ಯಾದಿ ಬಿಟ್ಟು ಹಾಳು ಮಾಡಬಾರದು.ಇಂತಹ ಯಾವುದೇ ಪ್ರಕರಣ ಕಂಡು ಬಂದರೂ ಆ ಮನೆಯವರಿಗೆ ಶಾಶ್ವತವಾಗಿ ನೀರಿನ ಸಂಪರ್ಕವನ್ನು ಕಡಿತ ಮಾಡುತ್ತೇವೆ. ಈ ಬಗ್ಗೆ ನಾವು ಪ್ರತಿ ಮನೆಗೂ ಬಂದು ರಿಯಾಲಿಟಿ ಚೆಕ್ ಮಾಡಲಿದ್ದೇವೆ. ಗ್ರಾಮದ ಹಿತದೃಷ್ಟಿಯಿಂದ ಪಂಚಾಯತ್‌ನೊಂದಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here