*ಅಟಲ್ ಉದ್ಯಾನದಲ್ಲಿ ನಿರಂತರ ಆರೋಗ್ಯ ಕಾರ್ಯಕ್ರಮ – ಪಿ.ಜಿ.ಜಗನ್ನಿವಾಸ ರಾವ್
*2027ರ ಒಳಗೆ ಕುಷ್ಠರೋಗ ಸಂಪೂರ್ಣ ನಿರ್ಮೂಲನೆ ಗುರಿ – ಡಾ. ದಿನೇಶ್ ಕಾಮತ್
ಪುತ್ತೂರು: ಬಿಳಿ ಮಚ್ಚೆ ಮೈಯಲ್ಲಿದ್ದರೆ ಅದು ಕುಷ್ಠರೋಗ ಹೌದಾ ಅಲ್ವಾ ಎಂದು ಪರೀಕ್ಷೆ ಮಾಡಿಸಿಕೊಳ್ಳಿ. ಕುಷ್ಠರೋಗ ಸಮಾಜದಲ್ಲಿ ಕಳಂಕವಲ್ಲ. ಸಾಂಕ್ರಾಮಿಕ ರೋಗದಂತೆ ತಪಾಸಣೆ ಮಾಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ ಹೇಳಿದರು.
ಕಳಂಕವನ್ನು ಕೊನೆಗೊಳಿಸಿ, ಘನತೆಯನ್ನು ಎತ್ತಿ ಹಿಡಿಯಿರಿ ಎಂಬ ಘೋಷ ವಾಕ್ಯದೊಂದಿಗೆ ಫೆ.13ರ ತನಕ ನಡೆಯುವ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೊಂಬೆಟ್ಟು ವಾರ್ಡ್ನ ಅಟಲ್ ಉದ್ಯಾನವನದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಕುಷ್ಠರೋಗ ಇನ್ನೂ ನಮ್ಮ ಸಮಾಜದಲ್ಲಿದೆ ಯಾಕೆಂದರೆ 2023ರಲ್ಲಿ ಪುತ್ತೂರಿನಲ್ಲಿ ನಾಲ್ಕು ಕೇಸ್ ಪತ್ತೆ ಹಚ್ಚಿದ್ದೇವೆ. ಪತೆ ಹಚ್ಚವುದಕ್ಕಿಂತ ಬಚ್ಚಿಟ್ಟ ಕೇಸುಗಳು ಹಲವಿದೆ. ಅವರು ಸಮಾಜದಲ್ಲಿ ಕಳಂಕ ಬರುತ್ತದೆ ಎಂಬ ಮನೋಭಾವದಿಂದ ಮುಂದೆ ಬರುತ್ತಿಲ್ಲ. ಇವತ್ತು ಆ ಕಳಂಕವನ್ನು ತೆಗೆದು ಹಾಕಬೇಕು. ಕುಷ್ಠರೋಗ ಸಾಂಕ್ರಾಮಿಕ ರೋಗವಷ್ಟೆ. ಆದಷ್ಟು ಜನರು ತಪಾಸಣೆ ನಡೆಸಿ ರೋಗವನ್ನು ನಿರ್ಮೂಲನೆ ಮಾಡಲು ಸಹಕಾರ ನೀಡಬೇಕು ಎಂದರು.
ಅಟಲ್ ಉದ್ಯಾನದಲ್ಲಿ ನಿರಂತರ ಆರೋಗ್ಯ ಕಾರ್ಯಕ್ರಮ:
ಶಿಬಿರ ಉದ್ಘಾಟಿಸಿದ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಮೊದಲ ಬಾರಿಗೆ ಕೋವಿಡ್ ಲಸಿಕೆಯನ್ನು ಉದ್ಯಾನವನದಲ್ಲೂ ನೀಡುವ ಹೆಗ್ಗಳಿಕೆ ಅಟಲ್ ಉದ್ಯಾನಕ್ಕಿದೆ. ಕೋವಿಡ್ ಸಂದರ್ಭದಲ್ಲಿ ಏಳೆಂಟು ಬಾರಿ ಇಲ್ಲಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅಟಲ್ ಉದ್ಯಾನವನದಲ್ಲಿ ನಿರಂತರ ಆರೋಗ್ಯ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ ಎಂದರು.
2027ರ ಒಳಗೆ ಕುಷ್ಠರೋಗ ಸಂಪೂರ್ಣ ನಿರ್ಮೂಲನೆ ಗುರಿ:
ಚರ್ಮರೋಗ ತಜ್ಞ ಡಾ. ದಿನೇಶ್ ಕಾಮತ್ ಮಂಗಳೂರು ಅವರು ಮಾತನಾಡಿ ಪ್ರಪಂಚದಲ್ಲಿರುವ ಕುಷ್ಠರೋಗದ ಮೂರನೇ ಒಂದು ಭಾಗದಷ್ಟು ಕೇಸ್ ನಮ್ಮ ದೇಶದಲ್ಲಿದೆ. ಕುಷ್ಠರೋಗ ಕಡಿಮೆಯಾಗಿಲ್ಲ. ಹೊಸ ರೋಗಗಳು ಬರುತ್ತಾನೆ ಇವೆ. 2027ನೇ ಇಸವಿಯ ಒಳಗೆ ಇದನ್ನು ಸಂಪೂರ್ಣ ನಿರ್ಮೂಲನೆ ಆಗಬೇಕೆಂದು ಕೇಂದ್ರ ಸರಕಾರದ ಕಾರ್ಯಕ್ರಮವಿದೆ. ಬೇರೆ ಖಾಯಿಲೆಯಂತೆ ಈ ರೋಗ ಬಂದು ಹೋಗುವಂತಹದ್ದಲ್ಲ. ಇದರಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅಂಗವಿಕಲತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಆದಷ್ಟು ಪ್ರಾರಂಭದಲ್ಲೇ ರೋಗ ಪತ್ತೆ ಹಚ್ಚುವ ಕೆಲಸ ಆಗಬೇಕು. ಪಲ್ಸ್ ಪೋಲಿಯೋ ರೀತಿಯಲ್ಲಿ ಕುಷ್ಠರೋಗ ನಿರ್ಮೂಲನೆ ಅಭಿಯಾನ ನಡೆಯಬೇಕೆಂದರು. ಈ ಸಂದರ್ಭದಲ್ಲಿ ಗಣೇಶ್ ಬಾಳಿಗ, ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಶ್ಮಿತಾ ಪ್ರಭು, ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ನಿಶಾ, ಶಿಬಿರದ ಸಂಯೋಜಕಿ ಕುಸುಮಾ, ಜಯಲತಾ, ಹೊನ್ನಮ್ಮ ಉಪಸ್ಥಿತರಿದ್ದರು. ಪರಿಸರದ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ ಕುಷ್ಠರೋಗ ನಿರ್ಮೂಲನೆ ಘೋಷಣೆ ಪ್ರಮಾಣ ಮಾಡಲಾಯಿತು.