ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ, ಪಿಲಿಗುಂಡದ ಯಮುನಾ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಹೊಸ ಮನೆ ರಚನೆಯ ಗುದ್ದಲಿ ಪೂಜೆ ಕಾರ್ಯಕ್ರಮ ಜ.31ರಂದು ನಡೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಶಶಿಧರ್ ಇವರು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ನಿರ್ಗತಿಕರಿಗೆ ವಾತ್ಸಲ್ಯ ಮನೆ ರಚನೆ ಮಾಡಿ ಕೊಡುವುದು ಮಾತೃಶ್ರೀ ಅಮ್ಮನವರ ಒಂದು ಉತ್ತಮವಾದ ಯೋಜನೆ. ಯಮುನಾ ಇವರಿಗೆ ಹೊಸ ವಾತ್ಸಲ್ಯ ಮನೆ ರಚನೆಯಾಗುತ್ತಿದ್ದು, ಯಾವುದೇ ವಿಘ್ನಗಳಿಲ್ಲದೆ ಮನೆಯ ಕೆಲಸಗಳು ಮುಂದುವರಿಯಲಿ, ಆದಷ್ಟು ಬೇಗ ಮನೆ ಕೆಲಸ ಪೂರ್ಣಗೊಂಡು ಮನೆಯವರು ಹೊಸ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ, ಬಲ್ನಾಡು ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಬಲ್ನಾಡು ವಲಯಾಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಮಾಜಿ ವಲಯಾಧ್ಯಕ್ಷ ಅಂಬ್ರೋಸ್ ಡಿಸೋಜಾ, ಕುಂಜೂರುಪಂಜ ಒಕ್ಕೂಟದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಬಲ್ನಾಡು ಶೌರ್ಯ ವಿಪತ್ತು ಘಟಕದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಸೇವಾಪ್ರತಿನಿಧಿಗಳು, ಗ್ರಾಮಸ್ಥರು ಮನೆಯ ಸದಸ್ಯರು ಉಪಸ್ಥಿತರಿದ್ದರು.