ಪುತ್ತೂರು:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ವಂಚಿತರಾಗಿ, ಹಿಂದುತ್ವದ ಸಿದ್ಧಾಂತದಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲನುಭವಿಸಿ, ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ರಾಜ್ಯವ್ಯಾಪಿ ಸುದ್ದಿಯಾಗಿರುವ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದ ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಅರುಣ್ ಕುಮಾರ್ ಪುತ್ತಿಲ ಮತ್ತವರ ತಂಡವನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಮಾತುಕತೆ ನಡೆಯುತ್ತಿದೆಯಾದರೂ ಇನ್ನೂ ಯಾವುದೇ ನಿರ್ಧಾರ ಪ್ರಕಟವಾಗದೇ ಇರುವ ಹಿನ್ನೆಲೆಯಲ್ಲಿ ಪುತ್ತಿಲ ಪರಿವಾರ ಮಾತುಕತೆಯಿಂದ ಹಿಂದೆ ಸರಿದಂತೆ ಕಾಣುತ್ತಿದೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ದ.ಕ.ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.ಮಾತ್ರವಲ್ಲದೆ ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ದ.ಕ.ಜಿಲ್ಲೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಮಾಡಲು ತೀರ್ಮಾನಿಸಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ.ಇದಕ್ಕೆ ಮಂಗಳೂರುನಲ್ಲಿ ಪ್ರತಿಕ್ರಿಯೆ ನೀಡಿರುವ ಹಾಲಿ ಸಂಸದ, ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಪ್ರತಿ ಚುನಾವಣೆ ಬಂದಾಗ ಗೊಂದಲ, ಸಮಸ್ಯೆ ಎದುರಾಗುತ್ತಿದ್ದು ಎಲ್ಲಾ ಸವಾಲುಗಳನ್ನು ಎದುರಿಸಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿಯೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎನ್ನುವ ಮೂಲಕ, ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ, ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಾಗಿದೆ.
ಬಿಜೆಪಿಯ ಹಿರಿಯ ನಾಯಕರು, ಸಂಘದ ನಾಯಕರೊಂದಿಗೆ ನಿರಂತರ ಮಾತುಕತೆ ನಡೆಯುತ್ತಿದೆ.ಆದರೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲು ಅವರಿಗೆ ಆಗದೇ ಇರುವ ಹಿನ್ನೆಲೆಯಲ್ಲಿ,ನಮ್ಮ ಸಮಾಲೋಚನಾ ಸಮಾವೇಶದಲ್ಲಿ ಕೈಗೊಂಡ ತೀರ್ಮಾನದಂತೆ,ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.ಮಾತ್ರವಲ್ಲದೆ ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಜಿಲ್ಲೆಯಲ್ಲಿ ಪುತ್ತಿಲ ಪರಿವಾರದ ಸ್ಪರ್ಧೆ ಇದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಘೋಷಣೆ ಮಾಡುವ ಮೂಲಕ, ಬಿಜೆಪಿಯೊಂದಿಗಿನ ಮಾತುಕತೆ ಮುರಿದು ಬಿದ್ದಂತೆ ತೋರುತ್ತಿದೆ ಮಾತ್ರವಲ್ಲದೆ, ಬಿಜೆಪಿಗೆ ಸಡ್ಡು ಹೊಡೆಯಲು ಪುತ್ತಿಲ ಪರಿವಾರ ತೀರ್ಮಾನಿಸಿರುವಂತೆ ಕಾಣುತ್ತಿದೆ.ಇನ್ನೊಂದೆಡೆ,ಮಾತೃಪಕ್ಷಕ್ಕೆ ಹೋಗಲು ಅಥವಾ ವಿಲೀನವಾಗಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ.ಆದರೆ ಇನ್ನು ಮುಂದೆ, ಪುತ್ತಿಲ ಪರಿವಾರದ ಇವತ್ತು ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರ ತನಕ ಪುತ್ತಿಲ ಪರಿವಾರದ ಯಾರೂ ಬಿಜೆಪಿಯ ಮುಂದೆ ಸಂಧಾನ ಪ್ರಕ್ರಿಯೆಗೆ ಹೋಗುವುದಿಲ್ಲ.ಅವರಾಗಿ ಬಂದರೆ ಮುಂದೆ ಆಲೋಚನೆ ಮಾಡೋಣ ಎಂದು ಪುತ್ತಿಲ ಪರಿವಾರದ ರಾಜಾರಾಮ ಭಟ್ ಹೇಳಿಕೊಂಡಿರುವುದು,ಬಿಜೆಪಿ-ಪುತ್ತಿಲ ಪರಿವಾರದ ನಡುವಿನ ಮಾತುಕತೆ ಫಲಪ್ರದವಾಗದೇ ಇರುವುದಕ್ಕೆ ನಿದರ್ಶನ ಎಂದೇ ಹೇಳಲಾಗುತ್ತಿದೆ.
ಕಾದು ನೋಡುವ ತಂತ್ರಕ್ಕೆ ಶರಣಾದರೇ ಪುತ್ತಿಲ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಸ್ಪರ್ಧೆ ಮಾಡಲಿದ್ದಾರೆ ಮತ್ತು ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಜಿಲ್ಲೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಆದರೆ,ಪುತ್ತಿಲ ಪರಿವಾರದ ಕೇಂದ್ರ ಬಿಂದುವಾಗಿರುವ ಅರುಣ್ ಕುಮಾರ್ ಪುತ್ತಿಲ ಅವರೇ ಇದನ್ನು ಘೋಷಣೆ ಮಾಡದೇ ಇರುವುದು ಮತ್ತು ಸುದ್ದಿಗೋಷ್ಠಿಯಲ್ಲಿಯೂ ಅವರು ಉಪಸ್ಥಿತರಿಲ್ಲದೇ ಇದ್ದುದು, ಅರುಣ್ ಕುಮಾರ್ ಪುತ್ತಿಲ ಅವರು ಕಾದು ನೋಡುವ ತಂತ್ರಕ್ಕೆ ಶರಣಾದರೇ ಅಥವಾ ಬಿಜೆಪಿ-ಪುತ್ತಿಲ ಪರಿವಾರದ ನಡುವಿನ ಮಾತುಕತೆ ಫಲಪ್ರದವಾಗುವ ನಿರೀಕ್ಷೆಯಲ್ಲಿ ಇನ್ನೂ ಅವರಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಪಕ್ಷ ಅವಕಾಶ ನೀಡಿದರೆ ಆ ಬಳಿಕ ನೋಡೋಣ..
ಪುತ್ತಿಲ ಪರಿವಾರದ ಸ್ಪರ್ಧೆಗೂ ನಮ್ಮ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ.ನಮ್ಮ ಕಾರ್ಯಚಟುವಟಿಕೆ ಹೀಗೇ ಮುಂದುವರಿಯುತ್ತದೆ.ಪುತ್ತಿಲ ಅವರ ನಿರ್ಧಾರದ ಕುರಿತು ಪಕ್ಷದವರು ಉತ್ತರಿಸಬೇಕು.ನನಗೆ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲದೇ ಇರುವುದರಿಂದ ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ಮುಂದೆ ನನಗೆ ಪಕ್ಷ ಅಭ್ಯರ್ಥಿಯಾಗಿ ಅವಕಾಶ ನೀಡಿದರೆ ಆ ಸಂದರ್ಭ ನೋಡೋಣ ಎಂದು ಸತ್ಯಜಿತ್ ಸುರತ್ಕಲ್ ಪ್ರತಿಕ್ರಿಯಿಸಿದ್ದಾರೆ.
ಸತ್ಯಜಿತ್ ಸುರತ್ಕಲ್ ನಡೆ ಇನ್ನೂ ನಿಗೂಢ
ಇತ್ತ ಪುತ್ತಿಲ ಪರಿವಾರದ ತೀರ್ಮಾನ ಘೋಷಣೆ ಯಾಗಿದೆಯಾದರೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶದ ನಿರೀಕ್ಷೆಯಲ್ಲಿರುವ ಸತ್ಯಜಿತ್ ಸುರತ್ಕಲ್ ಅವರ ನಡೆ ಇನ್ನೂ ನಿಗೂಢವಾಗಿದೆ.ಈ ಬಾರಿ ದ.ಕ. ಲೋಕಸಭಾ ಕ್ಷೇತ್ರದಿಂದ ಸತ್ಯಜಿತ್ ಸುರತ್ಕಲ್ ಅವರಿಗೆ ಅವಕಾಶ ನೀಡಬೇಕು ಎಂದು ಪುತ್ತೂರು ಸಹಿತ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸತ್ಯಜಿತ್ ಅಭಿಮಾನಿಗಳು, ಹಿತೈಷಿಗಳು ಸಭೆ ನಡೆಸಿ ಆಗ್ರಹಿಸಿದ್ದಾರೆ.ಮಾತ್ರವಲ್ಲದೆ, ಕೊನೆಯ ಕ್ಷಣದಲ್ಲಿ ಸತ್ಯಜಿತ್ ಸುರತ್ಕಲ್ ಅವರಿಗೇ ಬಿಜೆಪಿ ಟಿಕೆಟ್ ದೊರೆಯಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.ಒಂದು ವೇಳೆ ಅವರಿಗೆ ಪಕ್ಷದ ಟಿಕೆಟ್ ದೊರೆಯದೇ ನಳಿನ್ ಕುಮಾರ್ ಕಟೀಲ್ ಅವರಿಗೇ ಮತ್ತೆ ಅವಕಾಶ ನೀಡಿದರೆ ಸತ್ಯಜಿತ್ ಸುರತ್ಕಲ್ ಅವರು ಬಂಡಾಯವಾಗಿ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.ಆದರೆ,ಅರುಣ್ ಕುಮಾರ್ ಪುತ್ತಿಲ ಅವರು ಸ್ಪರ್ಧೆ ಮಾಡಿದರೆ ಸತ್ಯಜಿತ್ ಅವರು ಸ್ಪರ್ಧಿಸುವರೇ ಅಥವಾ ಪುತ್ತಿಲರಿಗೆ ಬೆಂಬಲ ಘೋಷಿಸುವರೇ? ಇಲ್ಲ ಪುತ್ತಿಲ ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ತಾವೂ ಸ್ಪರ್ಧೆ ಮಾಡುವರೇ ಎನ್ನುವುದೂ ನಿಗೂಢವಾಗಿದೆ.