ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತಗೊಂಡಿರುವ ಪುತ್ತೂರು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘವು ಕಡಬ ಭಾಗದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತನ್ನ ಸಕಲ ಸೇವೆಗಳೊಂದಿಗೆ ಕಡಬದ ಹೃದಯ ಭಾಗದಲ್ಲಿರುವ ಜೆ.ಪಿ ಕಾಂಪ್ಲೆಕ್ಸ್ ಶಾಖೆಯನ್ನು ಪ್ರಾರಂಭಿಸಿದ್ದು ಮಾ.12ರಂದು ಶುಭಾರಂಭಗೊಳ್ಳಲಿದೆ.
ತಾಲೂಕಿನ ಅಜ್ಜಿಕಲ್ಲು, ನೆಕ್ಕಿಲಾಡಿ ಹಾಗೂ ಬಡಗನ್ನೂರಿನಲ್ಲಿ ಈಗಾಗಲೇ ಸಣಘದ ಶಾಖೆಗಳನ್ನು ಹೊಂದಿದ್ದು ನಾಲ್ಕನೇ ಶಾಖೆಯು ಕಡಬದಲ್ಲಿ ಪ್ರಾರಂಭಗೊಳ್ಳುತ್ತಿದೆ. ಈ ಹಿಂದೆ ಕಡಬ ಸೇರಿದಂತೆ ಪುತ್ತೂರು ತಾಲೂಕು ವಾಪ್ತಿಯನ್ನು ಹೊಂದಿತ್ತು. ಕಡಬ ಪ್ರತ್ಯೇಕ ತಾಲೂಕು ಘೋಷಣೆಯಾದ ಬಳಿಕ ಪುತ್ತೂರು ಹಾಗೂ ಕಡಬ ತಾಲೂಕುಗಳ ಸಂಬಂಧಿಸಿದಂತೆ ಅವಿಭಜಿತ ಪುತ್ತೂರು ತಾಲೂಕಿಗೆ ಸಂಘದ ಬೈಲವನ್ನು ತಿದ್ದುಪಡಿ ಮಾಡಿಕೊಂಡು ಕಡಬದಲ್ಲಿ ಶಾಖೆಯನ್ನು ಪ್ರಾರಂಭಿಸುವ ಮೂಲಕ ಕಡಬ ಭಾಗದ ಸದಸ್ಯರ ಬಹುಕಾಲದ ಬೇಡಿಕೆಗೆ ಸ್ಪಂಧಿಸಿ ಶಾಖೆಯನ್ನು ಪ್ರಾರಂಭಿಸಲಾಗಿದೆ.
ನೂತನ ಶಾಖೆಯಲ್ಲಿ ಪ್ರಧಾನ ಕಚೇರಿಯಲ್ಲಿರುವಂತೆ ಪೂರ್ಣ ಪ್ರಮಾಣದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು ದೊರೆಯಲಿದೆ. ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ ಕಿರುಕಾಡುತ್ಪತ್ತಿಗಳಾದ ರಾಂಪತ್ರೆ, ದಾಲ್ಚಿನಿ, ನೊರೆಕ್ಕಾಯಿ, ಸೀಗೆಕಾಯಿ ಸಂಗ್ರಹಣೆ, ಇದಕ್ಕೆ ಪೂರಕವಾದ ಗೋದಾಮನ್ನು ಹೊಂದಿದೆ. ಶಾಖೆಯಲ್ಲಿ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾ ಮಂಡಲದ ಬ್ರ್ಯಾಂಡ್‌ಗಳಾದ ಸೀಗೆ ಹುಡಿ, ಚಿಗರೆ ಹುಡಿ ಹಾಗೂ ಜೇನುತುಪ್ಪಗಳ ಮಾರಾಟ ಸೌಲಭ್ಯಗಳು ದೊರೆಯಲಿದೆ.
ನೂತನ ಶಾಖೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾಮಂಡಳ ಮೈಸೂರು ಇದರ ಉಪಾಧ್ಯಕ್ಷ ಮಂಜುನಾಥ ಎನ್.ಎಸ್. ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್., ಉಪಾಧ್ಯಕ್ಷ ಧರ್ಣಪ್ಪ ನಾಯ್ಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್. ತಿಳಿಸಿದ್ದಾರೆ.