ನೆಲ್ಯಾಡಿ: ಪಂಚಾಯತ್ ರಸ್ತೆ ಬಳಕೆಗೆ ತಗಾದೆ ತೆಗೆದು ಹಲ್ಲೆಗೈದು ಜೀವಬೆದರಿಕೆ ಒಡ್ಡಲಾಗಿದೆ ಎಂದು ಇಚ್ಲಂಪಾಡಿ ಗ್ರಾಮದ ಅಲಂಗ ನಿವಾಸಿ ರೋಸಮ್ಮ ಎಂಬವರು ನೀಡಿದ ದೂರಿನಂತೆ ಎಮ್.ಎಮ್.ತೋಮಸ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 504,323,354, 506 ಐಪಿಸಿ ಪ್ರಕರಣ ದಾಖಲಾಗಿದೆ.
ರೋಸಮ್ಮ ಅವರು ಪೊಲೀಸರಿಗೆ ದೂರು ನೀಡಿ, ಮಾ.17ರಂದು ಮಧ್ಯಾಹ್ನ ದನವನ್ನು ಬಿಚ್ಚಿ ಕಟ್ಟಲು ಜಮೀನಿನ ಪಕ್ಕದಲ್ಲಿರುವ ಪಂಚಾಯತು ರಸ್ತೆಗೆ ಹೋದಾಗ ಪಂಚಾಯತ್ ರಸ್ತೆಯ ಬದಿಯಲ್ಲಿ ನಿಂತಿದ್ದ ಎಂ.ಎಂ ತೋಮಸ್ರವರು ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿ ಕಾಲಿನಿಂದ ಹೊಟ್ಟೆ, ಬೆನ್ನಿಗೆ ತುಳಿದು ಮಾನಭಂಗ ಮಾಡುವ ಉದ್ದೇಶದಿಂದ ಮೈಮೇಲಿನ ಬಟ್ಟೆಯ ಎದೆಯ ಭಾಗ ಹಾಗೂ ಹಿಂಬದಿ ಹರಿದು ಹಾಕಿದ್ದಾರೆ. ನನ್ನ ಬೊಬ್ಬೆ ಕೇಳಿ ಮಗ ಬರುವುದನ್ನು ಕಂಡು ಆರೋಪಿ ತೋಮಸ್ರವರು ಕತ್ತಿಯನ್ನು ತೆಗೆದು ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ರೋಸಮ್ಮ ಅವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ತೋಮಸ್ರವರು ಈ ಹಿಂದೆಯೂ ಹಲ್ಲೆ ನಡೆಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಪಂಚಾಯತ್ ರಸ್ತೆಯನ್ನು ಬಳಸಬಾರದೆಂದು ತೋಮಸ್ರವರು ಆಗಾಗ ತಗಾದೆ ತೆಗೆಯುತ್ತಾ ಹಳೆ ದ್ವೇಷ ಸಾಧಿಸಿ ಹಲ್ಲೆ ನಡೆಸಿರುವುದಾಗಿದೆ ಎಂದು ರೋಸಮ್ಮ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.