ಬಿಜೆಪಿ ಟಿಕೆಟ್ ದೊರೆಯದ ಬೇಸರ: ಪಕ್ಷದ ನಾಯಕರ ವಿರುದ್ಧ ಮುನಿಸು- ಕೈ ಹಿಡಿಯುವರೇ ಮಾಜಿ ಸಿ.ಎಂ.ಡಿ.ವಿ.ಎಸ್-ಮುಂದಿನ ರಾಜಕೀಯ ನಿರ್ಧಾರದ ಕುರಿತು ಇಂದು ಪತ್ರಿಕಾಗೋಷ್ಠಿ

0

ಮಾ.22ರಂದು ಕಾಂಗ್ರೆಸ್ ಸೇರ್ಪಡೆ?
ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡದೇ ಇರುವ ಬಿಜೆಪಿ ನಾಯಕರ ತೀರ್ಮಾನದಿಂದ ಬೇಸರಗೊಂಡಿರುವ ಡಿ.ವಿ.ಸದಾನಂದ ಗೌಡ ಅವರು ಮಾ.೨೨ರಂದು ಕಾಂಗ್ರೆಸ್‌ಗೆ ಸೇರ್ಪಡೆ ಯಾಗಲಿದ್ದಾರೆ. ದ.ಕ.,ಬೆಂಗಳೂರು ಉತ್ತರ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರದಲ್ಲಿ ಬೇಕಿದ್ದರೂ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ನಾಯಕರು ಡಿ.ವಿ.ಯವರಿಗೆ ಭರವಸೆ ನೀಡಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೇ ಡಿ.ವಿ.ಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಏನಿದ್ದರೂ ಈ ಎಲ್ಲ ವಿಚಾರವನ್ನು ಡಿ.ವಿ.ಯವರು ಮಾ.೧೯ರಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸುವ ಸಾಧ್ಯತೆ ಇದೆ.

ಕುಟುಂಬಸ್ಥರ ಜೊತೆ ಚರ್ಚಿಸಿ ನಿರ್ಧಾರ
ಮಾ.೧೭ರಂದು ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು, ಸಾಂತ್ವನ ಮಾಡಿದ್ದಾರೆ.ಮುಂದಿನ ನಿರ್ಧಾರದ ಬಗ್ಗೆ ನನ್ನ ಕುಟುಂಬಸ್ಥರ ಜತೆ ಚರ್ಚಿಸ ಬೇಕು.ದೆಹಲಿಯಲ್ಲಿ, ರಾಜ್ಯದಲ್ಲಿ ಒಂದಷ್ಟು ವಿದ್ಯಮಾನ ನಡೆದಿವೆ.ನಿಮಗೆ ಟಿಕೆಟ್ ಅಂದರು,ಕೊನೇ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲ.ಕೆಲವೊಂದು ಮನದಾಳದ ವಿಚಾರವನ್ನು ಹೇಳಿಕೊಳ್ಳಬೇಕಿದೆ.ಇವತ್ತು ನನ್ನ ಜನ್ಮದಿನ,ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ.ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ನನ್ನ ನಿರ್ಣಯ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದು ತಿಳಿಸುತ್ತೇನೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ನಾನು ಕರೆಯಲು ಹೋಗಿಲ್ಲ, ಡಿ.ವಿ.ಸದಾನಂದ ಗೌಡರು ಬಂದರೆ ಅದು ಸ್ವಂತ ನಿರ್ಧಾರ: ಅಶೋಕ್ ರೈ
ಪುತ್ತೂರು: ಡಿ.ವಿ.ಸದಾನಂದ ಗೌಡರು ಓರ್ವ ಭಾರೀ ಹಿರಿಯ ರಾಜಕಾರಣಿ. ಅವರು ಪಕ್ಷಕ್ಕೆ ಬರುವುದು ಅವರ ಸ್ವಂತ ನಿರ್ಧಾರ. ನನ್ನ ಬಳಿ ಅವರನ್ನು ಕರೆಯಲೂ ಹೇಳಿಲ್ಲ, ನಾನು ಕರೆಯಲೂ ಹೋಗಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಡಿ.ವಿ.ಸದಾನಂದ ಗೌಡ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಅಶೋಕ್ ಕುಮಾರ್ ರೈಯವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎನ್ನುವ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಇದೆಲ್ಲಾ ಮಾಧ್ಯಮಗಳಲ್ಲಿ ಕೊಟ್ಟಿರುವ ಮಾಹಿತಿ, ನನಗೇನೂ ಗೊತ್ತಿಲ್ಲ. ಡಿ.ವಿ.ಸದಾನಂದ ಗೌಡರು ಓರ್ವ ಭಾರೀ ಹಿರಿಯ ರಾಜಕಾರಣಿ. ಎಲ್ಲಾ ಹುದ್ದೆಗಳನ್ನು ಅಲಂಕರಿಸಿದವರು. ನಾವು ಅವರನ್ನು ಕರೆದು ಅವರು ಬರುವಂತಹ ವಿಚಾರ ನನಗೆ ಗೊತ್ತಿಲ್ಲ. ನನ್ನ ಬಳಿ ಅವರನ್ನು ಕರೆಯಲೂ ಹೇಳಿಲ್ಲ, ನಾನು ಕರೆಯಲೂ ಹೋಗಿಲ್ಲ. ಅವರು ಪಕ್ಷಕ್ಕೆ ಬರುವುದು ಅವರ ಸ್ವಂತ ನಿರ್ಧಾರ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದು ನನ್ನ ಸ್ವಂತ ನಿರ್ಧಾರ. ಯಾವುದೇ ಒಂದು ವ್ಯಕ್ತಿ ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗುವುದು, ಜೀವನದಲ್ಲಿ ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾರೋ ಒಬ್ಬರು ಕರೆದು ಬರುವಂತಹುದಲ್ಲ. ಅವರವರು ತೆಗೆದುಕೊಳ್ಳುವ ಮಹತ್ವದ ನಿರ್ಧಾರ. ನಾನು ಯಾವುದೇ ರೀತಿಯಲ್ಲಿ ಮಾತುಕತೆಗೂ ಹೋಗಿಲ್ಲ. ನಾನು ಮೊನ್ನೆಯಿಂದ ಪುತ್ತೂರಿನಲ್ಲೇ ಇzನೆ. ನನ್ನದು ಏನಿದ್ದರೂ ಅಭಿವೃದ್ಧಿ ಮಾತ್ರ. ಸಾಧ್ಯವಿದ್ದರೆ ಹೊಗಳುತ್ತೇನೆ, ನಾನು ಯಾರನ್ನೂ ದೂರುವುದಿಲ್ಲ, ನನ್ನ ಕೆಲಸ ಅಭಿವೃದ್ಧಿ ಮಾತ್ರ. ಅದಕ್ಕೆ ಜನರ ಸಹಕಾರ ಇರಲಿ, ಅದನ್ನು ಮಾಡಿ ತೋರಿಸುತ್ತೇನೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಬೆಂಗಳೂರು:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ವಂಚಿತರಾಗಿರುವ ಮಾಜಿ ಮುಖ್ಯಮಂತ್ರಿ,ಮಾಜಿ ಕೇಂದ್ರ ಸಚಿವರೂ ಆಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಹಿರಿಯ ಬಿಜೆಪಿ ನಾಯಕ ಡಿ.ವಿ.ಸದಾನಂದ ಗೌಡ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿದ್ದು ಡಿ.ವಿ.ಯವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ವದಂತಿಗಳ ಬೆನ್ನಲ್ಲೇ, ನನ್ನ ರಾಜಕೀಯ ನಿರ್ಧಾರದ ಕುರಿತು ನಾಳೆ(ಮಾ.೧೯)ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವುದಾಗಿ ಡಿ.ವಿ.ಸದಾನಂದ ಗೌಡ ಹೇಳಿದ್ದು ಎಲ್ಲರ ಚಿತ್ತ ಡಿ.ವಿ.ಯವರತ್ತ ನೆಟ್ಟಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯನಾಗಿದ್ದು ಸಕ್ರಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ ಬಳಿಕ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು, ನಿವೃತ್ತಿ ಘೋಷಣೆ ಹಿಂಪಡೆದಿದ್ದ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷರೂ ಆಗಿರುವ ಡಿ.ವಿ.ಯವರು ಬಳಿಕ, ಈ ಬಾರಿ ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರಲ್ಲದೆ, ನನಗೆ ಟಿಕೆಟ್ ದೊರೆಯದೇ ಇದ್ದಲ್ಲಿ ಮನಸ್ಸಿಗೆ ನೋವಾಗಲಿದೆ ಎಂದೂ ತಿಳಿಸಿದ್ದರು.ಆದರೂ ಪಕ್ಷ ಅವರಿಗೆ ಈ ಬಾರಿ ಅವಕಾಶ ನೀಡದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.ಪಕ್ಷದ ಈ ನಿರ್ಧಾರದಿಂದ ಬೇಸರಗೊಂಡಿರುವ ಡಿ.ವಿ.ಸದಾನಂದ ಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಮಾತ್ರವಲ್ಲದೆ, ಡಿವಿ.ಆಪ್ತರಾಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ಡಿ.ವಿ.ಯವರನ್ನು ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಪ್ಲ್ಯಾನ್ ರೂಪಿಸಿದ್ದಾರೆ,ಅಶೋಕ್ ಕುಮಾರ್ ರೈಯವರು ಈಗಾಗಲೇ ಡಿ.ವಿ.ಯವರೊಂದಿಗೆ ಈ ಕುರಿತು ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿಯಾಗಿದೆ.

ಡಿ.ವಿ.ಗೆ ಹುಟ್ಟುಹಬ್ಬದ ಸಂಭ್ರಮ: ಕುದುರೆಯಲ್ಲಿ ಮೆರವಣಿಗೆ ಮಾಡಿಸಿದ ಅಭಿಮಾನಿಗಳು: ಮಾ.೧೮ರಂದು ಡಿ.ವಿ.ಸದಾನಂದ ಗೌಡ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಡಿ.ವಿ.ಯವರನ್ನು ಕುದುರೆಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿ ಅಭಿಮಾನ ಮೆರೆದಿದ್ದಾರೆ. ನೂರಾರು ಬೆಂಬಲಿಗರು ಡಿ.ವಿ.ಯವರ ನಿವಾಸಕ್ಕೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಡಿ.ವಿ.ಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.ಅಭಿಮಾನಿ,ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದ ಡಿ.ವಿ.ಎಸ್.,ಮುಂದಿನ ರಾಜಕೀಯ ತೀರ್ಮಾನದ ಬಗ್ಗೆ ಮಂಗಳವಾರ ನಿರ್ಧರಿಸುವುದಾಗಿ ತಿಳಿಸಿದರು.

ಇಂದು ಹುಟ್ಟೂರಿಗೆ: ನನ್ನ ಕುಟುಂಬದೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ತೀರ್ಮಾನ ಪ್ರಕಟಿಸುವುದಾಗಿ ಹೇಳಿರುವ ಪುತ್ತೂರಿನ ಮಾಜಿ ಶಾಸಕರು, ದ.ಕ., ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಡಿ.ವಿ.ಸದಾನಂದ ಗೌಡ ಮಾ.೧೯ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಹುಟ್ಟೂರು ಮಂಡೆಕೋಲು ದೇವರಗುಂಡ ಮನೆ, ದೈವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here