ರಾಮಕುಂಜ: ನಮ್ಮ ಹಿರಿಯರ ಕಾಲಘಟ್ಟದಲ್ಲಿದ್ದ ಕೂಡು ಕುಟುಂಬದಲ್ಲಿ ಸಾಮರಸ್ಯವಿತ್ತು. ಬದಲಾದ ಪ್ರಸಕ್ತ ದಿನದಲ್ಲಿ ಕುಟುಂಬಗಳು ಕಿರಿದಾಗಿ ವಿಘಟನೆಗಳೇ ಜಾಸ್ತಿಯಾಗಿದೆ. ಕುಟುಂಬ ವ್ಯವಸ್ಥೆಗಳು ಸರಿಯಾದ ದಾರಿಯಲ್ಲಿ ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಧಾರ್ಮಿಕ ಕೇಂದ್ರಗಳು ಜೀವನ ಧರ್ಮ ಪಾಲಿಸುವ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಧರ್ಮ ಸಾಮರಸ್ಯ ಬೆಳೆಸಬೇಕು ಎಂದು ಕಡಬ ತಾಲೂಕು ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ ಹೇಳಿದರು.
ಅವರು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.1ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಸ್ಥಾನದ ಸಮಿತಿಗಳು ದೇವಳದ ಅಭಿವೃದಿಗೆ ಮಾತ್ರ ಸೀಮಿತವಾಗಬಾರದು. ಆತೂರು ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಬೇರೆ ದೇವಸ್ಥಾನಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಅಭಿನಂದನಾ ಭಾಷಣ ಮಾಡಿ, ನಮ್ಮ ವ್ಯವಸ್ಥಾಪನಾ ಸಮಿತಿ ಅಸ್ಥಿತ್ವಕ್ಕೆ ಬಂದಾಗ ಆರಂಭದಲ್ಲಿ ದೇವಸ್ಥಾನ ಅಭಿವೃದ್ದಿ ಮಾತ್ರವಲ್ಲದೆ ಗ್ರಾಮದಲ್ಲಿ ಬದಲಾವಣೆ ತರುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಕಳೆದ ಮೂರು ವರ್ಷದಲ್ಲಿ ದೇವಸ್ಥಾನದ ಆಭಿವೃದ್ದಿ, ಗ್ರಾಮದಲ್ಲಿ ಸಾಮರಸ್ಯ, ಹಿಂದೂ ಸಮಾಜದ ಸಂಘಟನೆ ಅನುಷ್ಠಾನ ಮಾದರಿಯಾಗಿದೆ. ದೇವಸ್ಥಾನದಲ್ಲಿ ಸ್ವಾಭಿಮಾನದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಗ್ರಾಮದ ಜನತೆ, ಗ್ರಾಮದಿಂದ ಮದುವೆಯಾಗಿ ತೆರಳಿರುವ ತವರು ಲಕ್ಷ್ಮೀಯರು ನೀಡಿದ ಆರ್ಥಿಕ ಪ್ರೋತ್ಸಾಹ ಅನನ್ಯವಾಗಿದೆ. ಮುಂದೆಯೂ ಗ್ರಾಮದ ಅಭಿವೃದ್ದಿಗೆ ಸಂಬಂದಪಟ್ಟ ನಮ್ಮ ಯೋಜನೆಗಳು ನಿರಂತರವಾಗಿ ಮುಂದುವರಿಯಲಿದೆ.
ದೇವಸ್ಥಾನದ ಆಡಳಿತಾಧಿಕಾರಿ ಸುಜಾತ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅಭಿವೃದ್ದಿ ಸಮಿತಿ ಸಲಹೆಗಾರ , ಉದ್ಯಮಿ ಕೇಶವ ಅಮೈ ಶುಭ ಹಾರೈಸಿದರು. ಉತ್ಸವ ಸಮಿತಿ ಸದಸ್ಯರಾದ ವಿನಯ ರೈ ಕೊಯಿಲ ಪಟ್ಟೆ, ವನಜಾ ಪಲ್ಲಡ್ಕ, ಸಂಜೀವ ಗೌಡ ಕೊನೆಮಜಲು, ಶ್ರೀರಾಮ ಕೆಮ್ಮಾರ, ಅಭಿವೃದ್ದಿ ಸಮಿತಿ ಪ್ರದಾನ ಕಾರ್ಯದರ್ಶಿ ಚೇತನ್ ಆನೆಗುಂಡಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರೂ ಆದ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹಾಗೂ ಮಮತಾ ಯದುಶ್ರೀ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉತ್ಸವ ಸಮಿತಿ ಉಪಾಧ್ಯಕ್ಷ ರಾಮಚಂದ್ರ ನಾಯ್ಕ ಏಣಿತ್ತಡ್ಕ ವಂದಿಸಿದರು. ಅಭಿವೃದ್ದಿ ಸಮಿತಿ ಸದಸ್ಯ ಸುದೀಶ್ ಪಟ್ಟೆ ನಿರೂಪಿಸಿದರು.