ಪುತ್ತೂರು: ಮಗುವಿನ ಆರೋಗ್ಯವು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ ಆ ಕಾರಣಕ್ಕಾಗಿ ಸರ್ಕಾರ ಶಿಕ್ಷಣ ಜೊತೆಗೆ ಆರೋಗ್ಯ ಶಿಕ್ಷಣವನ್ನು ಕೂಡ ಪರಿಣಾಮಕಾರಿಯಾಗಿ ಪಠ್ಯದಲ್ಲಿ ಜೋಡಿಸಿಕೊಂಡಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಹೇಳಿದರು.
ಅವರು ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಶೀರ್ಷಿಕೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಮಂಗಲದಲ್ಲಿ ದಂತ ಚಿಕಿತ್ಸೆ ಮೆಡಿಕಲ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು. ಪಿಎಂಶ್ರೀ ಶಾಲೆಗಳ ಹತ್ತಾರು ಕಾರ್ಯಕ್ರಮಗಳು ಪುತ್ತೂರು ತಾಲೂಕಿನ ವೀರಮಂಗಲ ಶಾಲೆಯಲ್ಲಿ ಅನುಷ್ಠಾನಗೊಂಡು ಈಗಾಗಲೇ ಕಾರ್ಯರೂಪವನ್ನು ಪಡೆದಿದೆ, ಈ ಕಾರ್ಯಕ್ರಮಗಳ ಪೈಕಿ ಅತ್ಯಂತ ಪ್ರಮುಖವಾದ ಯೋಜನೆ ಆರೋಗ್ಯ ಶಿಬಿರ ಕಾರ್ಯಕ್ರಮ ಎಂದು ತಿಳಿಸಿದರು. ಅವರು ಮಾತನಾಡುತ್ತಾ ದೇಶದಲ್ಲಿ 14,500 ಶಾಲೆಗಳು ಪಿಎಂಶ್ರೀ ಯೋಜನೆಗೆ ಒಳಪಟ್ಟಿದೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ವೀರಮಂಗಲ ಶಾಲೆಯು ಪಿಎಂಶ್ರೀ ಕಾರ್ಯಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಶಾಲೆಯಾಗಿದೆ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಶಿಕ್ಷಣದ ಎಲ್ಲಾ ಸ್ತರಗಳ ಪರಿಚಯವನ್ನು ಮಾಡುತ್ತಾರೆ ಇದು ಅವರ ಮುಂದಿನ ಜೀವನಕ್ಕೆ ತಳಹದಿಯಾಗಿದೆ ಎಂದರು. ಈ ಸಂಸ್ಥೆಯ ಮುಖ್ಯಗುರು ತಾರಾನಾಥ ಇವರ ಕಾರ್ಯದಕ್ಷತೆ ಮತ್ತು ಕಾರ್ಯ ಕ್ಷಮತೆ ಶಿಕ್ಷಕ ವೃಂದದ ಸಹಕಾರ ಈ ಶಾಲೆಯು ಪಿಎಂಶ್ರೀ ಶಾಲೆಯಾಗಿ ರೂಪುಗೊಳ್ಳಲು ಕಾರಣವಾಗಿದೆ ಎಂದರು. ಪಿಎಂ ಶ್ರೀ ಯೋಜನೆಯಲ್ಲಿ ಹಸಿರು ಶಾಲೆಯ ಪರಿಕಲ್ಪನೆ,ವಿಜ್ಞಾನ ವೃತ್ತ, ಗಣಿತ ವೃತ್ತ, ಸಿರಿಧಾನ್ಯಗಳು, ಯೋಗ ಶಿಕ್ಷಣ, ಕರಾಟೆ, ಜನಭಾಗಿಧಾರಿ ಕಾರ್ಯಕ್ರಮಗಳು, ಕಂಪ್ಯೂಟರ್ ಶಿಕ್ಷಣ ಹೀಗೆ ಹತ್ತಾರು ಚಟುವಟಿಕೆಗಳು ಸೃಜನಾತ್ಮಕವಾಗಿ ಮತ್ತು ನಾವಿನ್ಯತೆಯಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಶಿಕ್ಷಣ ಸಂಯೋಕರಾದ ಹರಿಪ್ರಸಾದ್, ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದ ವೈದ್ಯರಾದ ಡಾ.ಪೃಥ್ವಿಜ ಉಪಸ್ಥಿತರಿದ್ದರು. ಕೆವಿಜಿ ದಂತ ಮಹಾವಿದ್ಯಾಲಯದ ಪಿ ಆರ್ ಓ ಜಯಂತ್ ಇವರು ಪ್ರಾಸ್ತಾವಿಕವಾಗಿ ನುಡಿದರು. ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ ಬಿ ಎಸ್ ಇವರು ವಹಿಸಿದ್ದರು. ಉಪಾಧ್ಯಕ್ಷ ರಝಾಕ್ ಸದಸ್ಯರಾದ ಸುರೇಶ್ ಗಂಡಿ, ಭವ್ಯ, ಪುಷ್ಪ, ರಾಜೇಶ್ವರಿ, ಶಾಂಬಲತಾ, ಶಾಲಾ ಶಿಕ್ಷಕರಾದ ಹರಿಣಾಕ್ಷಿ,ಶ್ರೀಲತಾ, ಕವಿತಾ, ಹೇಮಾವತಿ, ಶಿಲ್ಪರಾಣಿ, ಸೌಮ್ಯ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿ, ಕಾರ್ಯಕ್ರಮ ಸಯೋಜಿಸಿದರು. ಶಿಕ್ಷಕಿ ಶಿಲ್ಪರಾಣಿ ವಂದಿಸಿದರು.
ಬಳಿಕ ನಡೆದ ದಂತ ಪರೀಕ್ಷೆ ಮತ್ತು ಚಿಕಿತ್ಸಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಪರಿಣತ ಕೆವಿಜಿ ದಂತ ಮಹಾವಿದ್ಯಾಲಯದ 20 ವೈದ್ಯರು ಮಕ್ಕಳ ದಂತ ಪರೀಕ್ಷಿಸಿ ಚಿಕಿತ್ಸೆ ನೀಡಿದರು