ಉಪ್ಪಿನಂಗಡಿ: ಗುಡ್ಡವೊಂದಕ್ಕೆ ಬೆಂಕಿ ಬಿದ್ದು ಅದರಲ್ಲಿದ್ದ ತೆಂಗು, ಗೇರು ಮರಗಳ ಸಹಿತ ಇತರ ಕೃಷಿಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೆ, ಸ್ಥಳೀಯರ ಸಕಾಲಿಕ ಪ್ರಯತ್ನದಿಂದ ಎರಡು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕದೇ ಬಚಾವಾದ ಘಟನೆ ಎ.4ರಂದು ಉಪ್ಪಿನಂಗಡಿ ಗ್ರಾಮದ ಕಂಪ ಎಂಬಲ್ಲಿ ನಡೆದಿದೆ.
ಇಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ನಲ್ಲಿ ಶಾರ್ಟ್ಸರ್ಕ್ಯೂಟ್ ಬೆಂಕಿಯ ಕಿಡಿಗಳು ಬಾಬು ಹಾಗೂ ಸೀನ ಎಂಬವರಿಗೆ ಸೇರಿದ ಗುಡ್ಡಕ್ಕೆ ಬಿದ್ದಿದ್ದು, ಒಣಗಿದ ತರಗೆಲೆಗಳಿಗೆ ಬೆಂಕಿ ಹಚ್ಚಿಕೊಂಡು ಗುಡ್ಡವನ್ನಿಡೀ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿತ್ತು. ಸುದ್ದಿ ತಿಳಿದು ತಕ್ಷಣವೇ ಧಾವಿಸಿ ಬಂದ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ನ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಮಾಜಿ ನಿರ್ದೇಶಕ ಧರ್ನಪ್ಪ ನಾಯ್ಕ, ಸ್ಥಳೀಯರಾದ ಪರಮೇಶ್ವರ ಕಂಪ, ಹೊನ್ನಪ್ಪ ಗೌಡ ಬೊಳ್ಳಾವು ಮತ್ತಿತರರು ಬೆಂಕಿಯನ್ನು ನಂದಿಸಲು ಮುಂದಾದರಲ್ಲದೆ, ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದರು. ಅಗ್ನಿ ಶಾಮಕ ದಳ ಸ್ಥಳಕ್ಕೆ ತಲುಪುವಷ್ಟರಲ್ಲಿ ಮುಕ್ಕಾಲು ಭಾಗ ಬೆಂಕಿಯನ್ನು ನಂದಿಸುವಲ್ಲಿ ಈ ಯುವಕರು ಸಫಲರಾಗಿದ್ದರು ಹಾಗೂ ಅಲ್ಲೇ ಇದ್ದ ಎರಡು ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ತಡೆದಿದ್ದರು. ಬಳಿಕ ಅಗ್ನಿಶಾಮಕ ದಳದವರೂ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಸುಮಾರು ಒಂದೂವರೆ ಎಕರೆಯಷ್ಟು ಗುಡ್ಡ ಬೆಂಕಿಗೆ ಆಹುತಿಯಾಗಿದ್ದು, ಇದರಲ್ಲಿದ್ದ ಗೇರು ಮರಗಳು, ಸುಮಾರು 10ರಷ್ಟು ತೆಂಗಿನ ಮರಗಳು ಸೇರಿದಂತೆ ಇನ್ನಿತರ ಕೃಷಿಗಳು ಬೆಂಕಿಗೆ ಅಹುತಿಯಾಗಿ, ನಷ್ಟ ಸಂಭವಿಸಿದೆ.