ತಿಲಾಮಯ ಗರ್ಭಗೃಹದಲ್ಲಿ ವೀರಾಜಮನರಾದ ಶ್ರೀ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯ ಪ್ರಾಣ ದೇವರು ಹಾಗೂ ಶ್ರೀ ಗುರು ರಾಘವೇಂದ್ರರ ಬೃಂದಾವನ
ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಗುರುವಾರದಂದು ಶ್ರೀ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯ ಪ್ರಾಣ ದೇವರು ಹಾಗೂ ಶ್ರೀ ಗುರು ರಾಘವೇಂದ್ರರ ಬೃಂದಾವನ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಅಯೋಧ್ಯಾ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಟ್ರಸ್ಟಿ ಹಾಗೂ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಲ್ಲಿ ನೆರವೇರಿತು.
ಬ್ರಹ್ಮಕಲಶೋತ್ಸವದ ನಿಮಿತ್ತ ಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಕಲಶಾರಾಧನೆ, ನಡೆದು ವೇದಮಂತ್ರಘೋಷಗಳೊಂದಿಗೆ ಬ್ರಹ್ಮಕಲಶೋತ್ಸವವು ನಡೆಯಿತು. ಶ್ರೀ ಅಂಬಾಭವಾನಿ ದೇವಿಯ ಆರಾಧನೆಯು ಇಲ್ಲಿ ಸಂಪನ್ನಗೊಂಡಿತು.
ಈ ಸಂಬಂಧ ನಡೆದ ಧರ್ಮ ಸಭೆಯಲ್ಲಿ ಅಶೀರ್ವಚನ ನೀಡಿದ ಪೇಜಾವರ ಶ್ರೀಗಳು, ಗುರುರಾಯರು ಭಗವಂತನ ಸೇವೆಯನ್ನು ಮಾಡಿ ಭಗವಂತನನ್ನು ಒಲಿಸಿಕೊಂಡರು. ಗುರುಗಳಿಗೆ ಒಲಿದ ದೇವರು ಗುರುರಾಯರಲ್ಲಿ ಅಸಾಮಾನ್ಯ ಶಕ್ತಿಯನ್ನು ದಯಪಾಲಿಸಿದ್ದಾನೆ. ಅಂತಹ ಶಕ್ತಿಯ ಫಲವಾಗಿ ಗುರುರಾಯರು ಎಲ್ಲೆಡೆಯ ಭಕ್ತರ ಸಂಕಷ್ಠಗಳನ್ನು ನಿವಾರಿಸುತ್ತಾ ಕಾಮಧೇನುವಿನಂತೆ ಈ ಪುಣ್ಯ ಮಣ್ಣಿನಲ್ಲಿ ನೆಲೆ ನಿಂತಿದ್ದಾರೆ. ಗುರುರಾಯರ ಪ್ರೇರಣೆಯಿಂದಲೇ ಸಣ್ಣದಾಗಿದ್ದ ಮಠವು ಇಂದು ಸರ್ವ ಜನರ ಸಹಕಾರದಿಂದ ಸುವ್ಯವಸ್ಥಿತವಾಗಿ ವಿಶಾಲವಾಗಿ ಮೂಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರು ರಾಘವೇಂದ್ರ ಮಠದ ಪುನರ್ ನಿರ್ಮಾಣದಲ್ಲಿ ಅವಿರತ ಶ್ರಮಿಸಿದ ಸಮಿತಿಯ ಸರ್ವ ಸದಸ್ಯರನ್ನು ಗೌರವಿಸುವ ಸಲುವಾಗಿ ಪುನರ್ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಕೆ. ಉದಯ ಕುಮಾರ್ ಅನಿತಾ ದಂಪತಿಯನ್ನು ಪೇಜಾವರ ಮಠಾಧೀಶರು ಸನ್ಮಾನಿಸಿ ಗೌರವಿಸಿದರು. ಹಾಗೂ ಕೆ. ಉದಯ ಕುಮಾರ್ ರವರಿಗೆ ‘ಶ್ರೀ ರಾಘವೇಂದ್ರ ಸ್ವಾಮೀನಾಂಪ್ರಿಯ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳಿಗೆ ಸ್ಥಳಾವಕಾಶವನ್ನು ನೀಡಿದ ಸನಿಹದ ಪೆಟ್ರೋಲ್ ಪಂಪಿನ ಮಾಲಕ ಕಿರಣ್ ಕಾಮತ್‌ರನ್ನು ಸ್ವಾಮೀಜಿಯವರು ಸ್ಮರಣಿಕೆಯನ್ನಿತ್ತು ಗೌರವಿಸಿದರು.
ವೇದಿಕೆಯಲ್ಲಿ ಮಂತ್ರಾಲಯ ಮಠದ ಪ್ರತಿನಿಧಿಯಾಗಿ ಸಮೀರ ಆಚಾರ್ಯ, ಆನಂದ ಬಳಗದ ರಾಮಚಂದ್ರ ಉಪಾಧ್ಯಾ, ಶ್ರೀ ರಾಘವೇಂದ್ರ ಮಠ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಉದಯ ಕುಮಾರ್, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರುಗಳಾದ ಕೆ. ರಾಧಾಕೃಷ್ಣ ನಾಕ್, ಕೆ. ಹರೀಶ್ ಉಪಾಧ್ಯಾಯ, ಬಿ. ಧನ್ಯ ಕುಮಾರ್ ರೈ ಮತ್ತು ಅನಿತಾ ಉದಯ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕ ನಾರಾಯಣ ಭಟ್, ಕೋಶಾಧಿಕಾರಿ ಸೇಸಪ್ಪ ರೈ, ಬಿಎಸ್ಸೆಫ್‌ನ ವಿಶ್ರಾಂತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ವ್ಯವಸ್ಥಾಪನಾ ಸಮಿತಿಯ ಸದಸ್ಯ ಆರ್ತಿಲ ಜಿ. ಕೃಷ್ಣರಾವ್, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ಪ್ರಮುಖರಾದ ಶಾಂತರಾಮ ಭಟ್, ಕಾಮಾಕ್ಷಿ ಜಿ. ಹೆಗ್ಡೆ, ಐ ಪುರುಷೋತ್ತಮ ನಾಯಕ್, ಗುರುರಾಜ್ ಭಟ್, ಶಕೀಲಾ ಕುಂದರ್, ಮುಖೇಶ್ ಕುಂದರ್, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಕೆ. ಸದಾನಂದ, ಪ್ರಶಾಂತ್ ಎನ್. ಶಿವಾಜಿನಗರ, ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್, ಪಧಾಧಿಕಾರಿಗಳಾದ ಶಿವಕುಮಾರ್ ಬಾರಿತ್ತಾಯ, ವಿನೀತ್ ಶಗ್ರಿತ್ತಾಯ, ಜಯಪ್ರಕಾಶ್ ಶ್ರೀನಿಧಿ, ವಿದ್ಯಾಧರ ಜೈನ್, ಸ್ವರ್ಣೇಶ್ ಗಾಣಿಗ, ಬಿಪಿನ್, ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ ಸ್ವಾಗತಿಸಿದರು. ಪದಾಧಿಕಾರಿ ವಿನೀತ್ ಶಗ್ರಿತ್ತಾಯ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀನಿಧಿ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರಿನ ವೈ.ಜಿ. ಶ್ರೀಲತಾ ನಿಕ್ಷಿತ್ ಮತ್ತು ಬಳಗವರಿಂದ ವೀಣಾ ವಾದನ ನಡೆಯಿತು. ಈ ಸಂದರ್ಭ ವಿವಿಧ ದೇವರ ಚಿತ್ರಗಳನ್ನು ವೇದಿಕೆಯಲ್ಲಿ ಬಿಡಿಸಲಾಯಿತು. ಸಂಜೆ ಮ.ಶಾ. ಸಂಪನ್ನ ಶ್ರೀ ಪವಮಾನಾಚಾರ್ಯರು ಕಲ್ಹಾಪುರ ಇವರಿಂದ ‘ಶ್ರೀ ರಾಘವೇಂದ್ರ ವೈಭವ’ ಧಾರ್ಮಿಕ ಉಪನ್ಯಾಸ ನಡೆಯಿತು. ರಾತ್ರಿ ವೇ.ಮೂ. ಶ್ರೀ ಹರಿ ಉಪಾಧ್ಯಾಯ ತಂಡದಿಂದ ರಂಗಪೂಜೆ, ತೊಟ್ಟಿಲು ಸೇವೆ, ಅಷ್ಠಾವಧಾನ ನಡೆಯಿತು. ಬಳಿಕ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ರಾತ್ರಿ ಶ್ರೀ ಕೃಷ್ಣ ಮುಖ್ಯಪ್ರಾಣ ಹವ್ಯಾಸಿ ಯಕ್ಷಗಾನ ಬಳಗ ಉಡುಪಿ ಇವರಿಂದ ‘ಭಾರ್ಗವ ವಿಜಯ’ ಯಕ್ಷಗಾನ ನಡೆಯಿತು.