ಎ.25: ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ದಶಾಂಬಿಕೋತ್ಸವ ಸಮಾರೋಪಕ್ಕೆ

0

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಗಮನ -ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ

ಪುತ್ತೂರು: ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಶೃಂಗೇರಿಯಲ್ಲಿ ಲೋಕಾರ್ಪಣೆಗೊಳಿಸಿದ ಅಂಬಿಕಾ ವಿದ್ಯಾಲಯದ ಹತ್ತನೆಯ ವರ್ಷದ ಸಂಭ್ರಮದ ಸಮಾರೋಪಕ್ಕೆ ಮಹಾಸನ್ನಿಧಾನಂಗಳವರ ಶಿಷ್ಯರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಎ.25ರಂದು ಆಗಮಿಸಲಿದ್ದಾರೆ. ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ನಡೆಯುವ ಸಂಸ್ಥೆಯ ದಶಾಂಬಿಕೋತ್ಸವದ ಸಮಾರೋಪ ಸಮಾರಂಭ ಅವರು ಆಶೀರ್ವಚನ ನೀಡಲಿದ್ದಾರೆ ಎಂದು ಶೀಮಜ್ಜಗದ್ಗುರು ಅಭಿನಂದನಾ ಸಮಿತಿ ಮತ್ತು ಅಂಬಿಕಾ ವಿದ್ಯಾಲಯದ ಸಂಚಲಕ ಸುಬ್ರಮಣ್ಯ ನಟ್ಟೋಜ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಹುಟ್ಟು ಹಾಕಿರುವ ಈ ಸಂಸ್ಥೆ ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ಅಂಬಿಕಾ ಸಂಸ್ಥೆ ತೊಡಗಿಕೊಂಡಿದೆ. ಹಾಗಾಗಿ ಇಲ್ಲಿ ಎಲ್.ಕೆ.ಜಿ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಯೊಬ್ಬ ಆ ವರ್ಷದಿಂದಲೇ ಜೀವನ ಶಿಕ್ಷಣವನ್ನೂ ಕರಗತ ಮಾಡಿಕೊಳ್ಳುತ್ತಾನೆ ಎಂಬುದು ವಿಶೇಷ. ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣವನ್ನು ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಇದೀಗ ತನ್ನ ಹತ್ತನೆಯ ವರ್ಷದ ಸಂಭ್ರಮದಲ್ಲಿದೆ. ಆ ಪ್ರಯುಕ್ತ ’ದಶಾಂಬಿಕೋತ್ಸವ’ ಹೆಸರಿನಲ್ಲಿ ವರ್ಷಪೂರ್ತಿ ನಾನಾ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಎಲ್ಲಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಎಪ್ರಿಲ್ 25ರಂದು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸಲಿದ್ದಾರೆ ಎಂದರು.


ಶ್ರೀಗಳ ಭೇಟಿ, ಆಶೀರ್ವಾದ:
ಶೃಂಗೇರಿ ಉಭಯ ಜಗದ್ಗುರುಗಳ ಕೃಪಾಶೀರ್ವಾದ ಅಂಬಿಕಾ ಸಂಸ್ಥೆಗಳ ಬೆಳವಣಿಗೆಯ ಹಿಂದಿರುವ ಮಹಾನ್ ಶಕ್ತಿ. ಅಂಬಿಕಾ ವಿದ್ಯಾಲಯದ ನಾಮಫಲಕವನ್ನು ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು 2014ರಲ್ಲಿ ಅನಾವರಣಗೊಳಿಸಿ ಹರಸಿದ್ದರು. ತದನಂತರ 2016ರಲ್ಲಿ ಮಹಾಸನ್ನಿಧಾನಂಗಳವರು ತಮ್ಮ ಉತ್ತರಾಧಿಕಾರಿ ಶಿಷ್ಯರಾದ ಶ್ರೀ ವಿಧುಶೇಖರ ಬಾರತೀ ಸನ್ನಿಧಾನಂಗಳವರ ಜತೆಗೂಡಿ ಬಪ್ಪಳಿಗೆಗೆ ಆಗಮಿಸಿ ವಸತಿಯುತ ಅಂಬಿಕಾ ಪದವಿಪೂರ್ವ ವಿದ್ಯಾಲಯವನ್ನು ಲೋಕಾರ್ಪಣೆಗೊಳಿಸಿದ್ದರು. ಇದಲ್ಲದೆ 2021ರಲ್ಲಿ ಅಂಬಿಕಾ ವಿದ್ಯಾಲಯಕ್ಕೆ ಸಿಬಿಎಸ್‌ಇ ಮಾನ್ಯತೆ ದೊರಕಿದಾಗ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶೃಂಗೇರಿಯಲ್ಲಿ ’ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ’ ಎಂಬ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಪುತ್ತೂರಿನ ಮೊತ್ತಮೊದಲ ಸಿಬಿಎಸ್‌ಇ ಸಂಸ್ಥೆ ಲೋಕಾರ್ಪಣೆಗೊಂಡಿತು. ತನ್ಮಧ್ಯೆ 2019ರಲ್ಲಿ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಅಂಬಿಕಾ ಮಹಾವಿದ್ಯಾಲಯವನ್ನು ಬಪ್ಪಳಿಗೆಯಲ್ಲಿ ಲೋಕಕ್ಕೆ ಸಮರ್ಪಿಸಿದ್ದರು. ಹೀಗೆ ಶೃಂಗೇರಿ ಜಗದ್ಗುರುಗಳ ಪ್ರೇರಣೆ, ಆಶೀರ್ವಾದ, ಮಾರ್ಗದರ್ಶನದ ನೆಲೆಯಲ್ಲಿಯೇ ಅಂಬಿಕಾ ಸಂಸ್ಥೆಗಳು ಬೆಳೆದುಬರುತ್ತಿವೆ. ಇದೀಗ, ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಶೃಂಗೇರಿಯಲ್ಲಿ ಲೋಕಾರ್ಪಣೆಗೊಳಿಸಿದ ಅಂಬಿಕಾ ವಿದ್ಯಾಲಯದ ಹತ್ತನೆಯ ವರ್ಷದ ಸಂಭ್ರಮದ ಸಮಾರೋಪಕ್ಕೆ ಮಹಾಸನ್ನಿಧಾನಂಗಳವರ ಶಿಷ್ಯರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸುತ್ತಿರುವುದು ಸುಕೃತಪುಣ್ಯದಂತೆನಿಸಿದೆ. ಎಪ್ರಿಲ್ 25ರಂದು ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ದಶಾಂಬಿಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡಲಿದ್ದಾರೆ ಎಂದು ನಟ್ಟೋಜ ಸುಬ್ರಹ್ಮಣ್ಯ ಅವರು ಹೇಳಿದರು.


ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ:
ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಪಾದುಕ ಪೂಜೆ, ಫಲಸಮರ್ಪಣೆ, ಭಿಕ್ಷಾವಂದನೆಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಭಿವಂದನಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ವಿವಿಧ ಸಮುದಾಯದ ಸಂಘಗಳ ಪದಾಧಿಕಾರಿಗಳು, ಮುಖಂಡರನ್ನೊಳಗೊಂಡಂತೆ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಶ್ರೀ ಗುರುಗಳ ಅಭಿವಂದನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಎ.25ರಂದು ದಶಾಂಬಿಕೋತ್ಸವದ ಸಮಾರೋಪ ಹಾಗೂ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ ಜಂಟಿಯಾಗಿ ಜರುಗಲಿದೆ. ಶೃಂಗೇರಿಯ ಭಕ್ತವರ್ಗವಾದ ವಿವಿಧ ಸಮುದಾಯಗಳ ವತಿಯಿಂದ ಪ್ರತ್ಯೇಕ ಪ್ರತ್ಯೇಕವಾಗಿ ಗುರುವಂದನಾ ಕಾರ್ಯಕ್ರಮ – ಫಲಸಮರ್ಪಣೆ, ಭಿಕ್ಷಾವಂದನೆ ನಡೆಯಲಿದೆ. ಪಾದಪೂಜೆಗೂ ವಿಶೇಷ ಅವಕಾಶ ಕಲ್ಪಿಸಿಕೊಡಲಾಗಿದೆ. ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲಾ ಭಕ್ತಾದಿಗಳಿಗೂ ಶ್ರೀ ಗುರುಗಳು ಮಂತ್ರಕಾಕ್ಷತೆ ನೀಡಿ ಹರಸಲಿದ್ದಾರೆ. ಮಂತ್ರಾಕ್ಷತೆಯ ಬಳಿಕ ನೆರೆದ ಎಲ್ಲಾ ಭಕ್ತಾದಿಗಳಿಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜದ ವಿವಿಧ ಸಮುದಾಯಗಳ ಶೃಂಗೇರಿ ಭಕ್ತರು, ಸಮಾಜದ ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಜಗದ್ಗುರುಗಳ ಕೃಪೆಗೆ ಪಾತ್ರರಾಗುವಂತೆ ಸುಬ್ರಹ್ಮಣ್ಯ ನಟ್ಟೋಜ ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಗದ್ಗುರು ಶ್ರೀ ವಿಧಿಶೇಖರ ಭಾರತೀ ಸನ್ನಿಧಾನಂಗಳವ ಅಭಿನಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಬಿ.ಐತ್ತಪ್ಪ ನಾಯ್ಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್ ಉಪಸ್ಥಿತರಿದ್ದರು.

ಪಾದುಕ ಪೂಜೆಗೆ ಉತ್ತಮ ಅವಕಾಶ
ಶೃಂಗೇರಿ ಶ್ರೀಗಳ ಪಾದುಕ ಪೂಜೆಗೆ ಭಕ್ತರು ಶೃಂಗೇರಿಗೆ ಹೋಗುವ ಸಂಪ್ರದಾಯವಿದೆ. ಇದೀಗ ಶ್ರೀಗಳ ಪಾದುಕ ಪೂಜೆಗೆ ಅಂಬಿಕಾ ವಿದ್ಯಾ ಸಂಸ್ಥೆಯಲ್ಲೇ ದಶಾಂಬಿಕೋತ್ಸವದಲ್ಲಿ ಅವಕಾಶ ಮಾಡಲಾಗಿದೆ. ಭಕ್ತ ಜನರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಜಗದ್ಗುರು ಶ್ರೀ ವಿಧಿಶೇಖರ ಭಾರತೀ ಸನ್ನಿಧಾನಂಗಳವ ಅಭಿನಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ ಅವರು ಹೇಳಿದರು.

ಎ.24ಕ್ಕೆ ಚಂದ್ರಮೌಳಿ ಪೂಜೆ, ಎ.25ಕ್ಕೆ ಸರಸ್ವತೀ ಹೋಮ
ಏ.24ರಂದು ಸಂಜೆ ಶ್ರೀ ಗುರುಗಳು ಆಗಮಿಸಲಿದ್ದು, ಸಮಾಜದ ವಿವಿಧ ಸಮುದಾಯಗಳು ಹಾಗೂ ಅಂಬಿಕಾ ಪರಿವಾರದ ವತಿಯಿಂದ ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ. ತದನಂತರ ರಾತ್ರಿ ಸುಮಾರು 8 ಗಂಟೆಯಿಂದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. ಎ.25ರಂದು ಬೆಳಗ್ಗೆ 9 ಗಂಟೆಗೆ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸರಸ್ವತಿ ಹೋಮದ ಪೂರ್ಣಾಹುತಿ ನಡೆಯಲಿದೆ.
ಸುಬ್ರಹ್ಮಣ್ಯ ನಟ್ಟೋಜ

LEAVE A REPLY

Please enter your comment!
Please enter your name here