ಪುತ್ತೂರು: ಮೇ 1 ರಂದು ಆಚರಿಸಲ್ಪಡುವ ಕಾರ್ಮಿಕ ದಿನಾಚರಣೆ ಪ್ರಯುಕ್ತ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ಸಂಸ್ಥೆಯಿಂದ ಮೂವರು ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾದ ಪುತ್ತೂರು ವರ್ತಕ ಸಂಃದ ಕಾರ್ಯದರ್ಶಿ ಹಾಗೂ ದರ್ಬೆ ಸುದರ್ಶನ್ ಎಂಟರ್ಪ್ರೈಸಸ್ ಮಾಲಕ ಮನೋಜ್ ಟಿ.ವಿ ಮಾತನಾಡಿ, ನಾನೂ ಒಬ್ಬ ಕಾರ್ಮಿಕನೇ. ನನ್ನ ಸಂಸ್ಥೆಯಲ್ಲೂ ಹತ್ತು ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಅವರುಗಳನ್ನು ಗೌರವ ಭಾವನೆಯಿಂದ ನೋಡುವುದು ದೇವರಿಗೆ ಸಲ್ಲುವ ಗೌರವವಾಗಿದೆ. ಕಾರ್ಮಿಕರನ್ನು ಗೌರವಿಸುವುದು ನಮಗೆ ವಿಶಿಷ್ಟ ಅನುಭವದ ಜೊತೆಗೆ ಅವರಿಗೆ ಬೆಲೆ ನೀಡಿದಂತಾಗುತ್ತದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಹಾಗೂ ದರ್ಬೆ ಪ್ರಿಶಿಶನ್ ಕಾರ್ ಸೆಂಟರ್ ಮಾಲಕ ಸುಜಿತ್ ಡಿ.ಆರ್ ಮಾತನಾಡಿ, ಸಂಸ್ಥೆಯ ಮಾಲಕ ರಫೀಕ್ ರವರು ತಮ್ಮ ಸಂಸ್ಥೆಯಲ್ಲಿ ಯಾವುದಾದರೂ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಹಳೆಯ ಚಪ್ಪಲ್ ಕೊಟ್ಟು ಹೊಸ ಚಪ್ಪಲ್ ಪಡೆದುಕೊಳ್ಳಿ ಎಂಬ ಯೋಜನೆಯನ್ನು ಹಾಕಿ ಯಶಸ್ವಿಯಾಗಿದ್ದರು. ಇದೀಗ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಕೂಡ ವಿನೂತನ ಕಾರ್ಯಕ್ರಮವಾಗಿದ್ದು, ಸನ್ಮಾನಿತಗೊಂಡ ಕಾರ್ಮಿಕರು ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಲಿ ಎಂದರು.
ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ, ಬುಶ್ರಾ ಟವರ್ಸ್ ಮೆಡಿಕಲ್ ಮಾಲಕ ಜಯಕೃಷ್ಣ ಭಟ್, ಅಮರ್ ಅಕ್ಬರ್ ಅಂತೋನಿ ಕ್ರೀಡಾಕೂಟದ ಸಂಯೋಜಕ ರಝಾಕ್ ಬಿ.ಎಚ್, ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಸಹಿತ ಅನೇಕರು ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ಸಿಬ್ಬಂದಿ ಸುಶ್ಮಾ ವಂದಿಸಿದರು. ಹಿರಿಯ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
‘ಅಮರ್ ಅಕ್ಬರ್ ಅಂತೋನಿ’ ಸನ್ಮಾನ..
ಬಾಲಿವುಡ್ ಯಶಸ್ವಿ ಹಿಂದಿ ಚಿತ್ರ ‘ಅಮರ್ ಅಕ್ಬರ್ ಅಂತೋನಿ’ ಶೀರ್ಷಿಕೆಯಂತೆ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಮೂವರು ಹಿರಿಯ ಕಾರ್ಮಿಕರಾದ ಕಳೆದ 26 ವರ್ಷಗಳಿಂದ ಪೋಸ್ಟ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿರುವ ದರ್ಬೆ ಅಂಚೆ ಕಛೇರಿ ಉದ್ಯೋಗಿ ಅಚ್ಯುತ ನಾಯಕ್ ಬೆಳ್ಳಾರೆ, ಕಳೆದ 40 ವರ್ಷಗಳಿಂದ ಕಾರು, ರಿಕ್ಷಾ, ಜೀಪ್ ಚಾಲಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನೆಹರುನಗರದ ಗ್ರೀನ್ ಪ್ಲೈವುಡ್ ಶೋರೂಂನಲ್ಲಿ ಸೋಫಾ ತಯಾರಿ ಹಾಗೂ ರಿಪೇರಿ ಕರ್ತವ್ಯ ನಿರ್ವಹಿಸುತ್ತಿರುವ ಲಿಗೋರಿ ಡಿ’ಸೋಜ ಕೆರೆಮೂಲೆ, ಕಳೆದ 30 ವರ್ಷಗಳಿಂದ ಪುತ್ತೂರಿನಲ್ಲಿ ತುಂಬಿದ ಗೋಣಿಚೀಲ ಹೊರುವಂತಹ ಕಾಯಕದಲ್ಲಿ ತೊಡಗಿಸಿಕೊಂಡಿರುವ ಎ.ಕೆ ಮುಜೀಬ್ ರೆಹಮಾನ್ ಬಪ್ಪಳಿಗೆರವರುಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಜಾತಿ-ಧರ್ಮ ಮರೆತು ಗೌರವಿಸಬೇಕು..
ಕಾರ್ಮಿಕ ದಿನಾಚರಣೆ ದಿನದಂದು ಮೂವರು ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡಿರುವುದು ಖುಶಿ ತಂದಿದೆ. ಜಾತಿ-ಧರ್ಮ ಮರೆತು ಕಷ್ಟಪಟ್ಟು ಪ್ರಾಮಾಣಿಕತೆಯಿಂದ ದುಡಿಯುವವರನ್ನು ನಾವು ಎಂದಿಗೂ ಗೌರವಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಆಚರಣೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ಧೇಶವನ್ನು ಸಂಸ್ಥೆಯು ಹೊಂದಿದೆ.
-ರಫೀಕ್ ಎಂ.ಜಿ, ಮಾಲಕರು, ನಯಾ ಚಪ್ಪಲ್ ಬಜಾರ್, ದರ್ಬೆ