ರಾಮಕುಂಜ: ಮಹಮ್ಮದ್ ಅಸ್ಲಾಂ ಸಹಾಯದೊಂದಿಗೆ ಖಾಸಗಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿಶೇಷ ಚೇತನ ಬಾಲಕ ಸಚಿನ್ 357 ಅಂಕ ಪಡೆದುಕೊಂಡು ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಪೆರಾಬೆ ಗ್ರಾಮದ ಪೂಂಜ ನಿವಾಸಿ ಬಾಬು ರೈ ಹಾಗೂ ಸಾವಿತ್ರಿ ರೈ ದಂಪತಿ ಪುತ್ರ, ಸೇವಾ ಭಾರತಿ ಮಂಗಳೂರು ಇದರ ಅಂಗಸಂಸ್ಥೆಯಾದ ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆ ರಾಮಕುಂಜ ಇಲ್ಲಿನ ವಿದ್ಯಾರ್ಥಿ ಸಚಿನ್ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು. ಈತನಿಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ, ಕುದ್ಲೂರು ನಿವಾಸಿ ಇಬ್ರಾಹಿಂ ಹಾಗೂ ಸೈನಾಝ್ ದಂಪತಿ ಪುತ್ರ ಮಹಮ್ಮದ್ ಅಸ್ಲಾಂ ಸಹಾಯಕನಾಗಿ ಪರೀಕ್ಷೆಗೆ ಹಾಜರಾಗಿದ್ದ. ಇದೀಗ ಸಚಿನ್ 357 ಅಂಕ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ. ಸಚಿನ್ಗೆ ಸಹಾಯಕನಾಗಿ ಪರೀಕ್ಷೆ ಬರೆದಿದ್ದ ಸಂದರ್ಭದಲ್ಲಿ ಮಹಮ್ಮದ್ ಅಸ್ಲಾಂ ರಂಜಾನ್ ಉಪವಾಸವನ್ನೂ ಆಚರಿಸುತ್ತಿದ್ದರು. ಅಲ್ಲದೇ ಕೋರ್ಟ್ ಆದೇಶದಂತೆ 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭದಲ್ಲೇ ನಡೆದಿತ್ತು. ಮಹಮ್ಮದ್ ಅಸ್ಲಾಂ ಬೆಳಿಗ್ಗೆ ಸಚಿನ್ಗೆ ಸಹಾಯಕನಾಗಿ ಪರೀಕ್ಷೆ ಬರೆದು ಮಧ್ಯಾಹ್ನದ ಬಳಿಕ ೯ನೇ ತರಗತಿಯ ತನ್ನ ಪಬ್ಲಿಕ್ ಪರೀಕ್ಷೆಗೂ ಹಾಜರಾಗಿದ್ದ. ಇಬ್ಬರೂ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.