





@ ಸಿಶೇ ಕಜೆಮಾರ್
ಪುತ್ತೂರು: ‘ನನಗೆ ಈ ಸೂತಕ, ಜಾತಕ ಆಚಾರ ವಿಚಾರ ಇದ್ಯಾವುದರ ಭಯವಿಲ್ಲ, ಅದನ್ನು ನಾನು ನಂಬುವುದೂ ಇಲ್ಲ ಒಬ್ಬ ಬಡವ ಅಥವಾ ನಿರ್ಗತಿಕ ನಿಧನರಾದರೆ ಅಲ್ಲಿಗೆ ಹೋಗುತ್ತೇನೆ. ಹೆಣದ ಅಂತ್ಯ ಸಂಸ್ಕಾರದ ಕಾರ್ಯದಲ್ಲಿ ಅತ್ಯಂತ ಶ್ರದ್ಧೆಯಿಂದ ಭಾಗವಹಿಸುತ್ತೇನೆ. ನನ್ನ ಕೈಯಲ್ಲಾದ ಸಹಾಯವನ್ನು ಮಾಡುತ್ತೇನೆ ಆ ಸೇವೆಯಲ್ಲಿಯೇ ದೇವರನ್ನು ನೋಡುತ್ತೇನೆ. ಗ್ರಾಮದಲ್ಲಿ ಏನೇ ಅವಘಡ, ಸಾವು ನೋವುಗಳಾದರೆ ಜನ ನನಗೇ ಮೊದಲು ಕರೆ ಮಾಡುತ್ತಾರೆ. ಬಹುಷಹ ದೇವರು ನನಗೆ ಆ ಒಂದು ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಅಂದುಕೊಂಡಿದ್ದೇನೆ.’ ಈ ರೀತಿ ಹೇಳುತ್ತಿರುವವರು ಬೇರೆ ಯಾರು ಅಲ್ಲ ಕೆಯ್ಯೂರು ಗ್ರಾಮ ಪಂಚಾಯತ್ನ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು.



ಹೌದು ರಾಜಕೀಯಕ್ಕೆ ಬರುವ ಮೊದಲೇ ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದ ಶರತ್ ಕುಮಾರ್ರವರು ಒಬ್ಬ ಸಮಾಜ ಸೇವಕರಾಗಿ ನೊಂದವರ ಪಾಲಿಗೆ ಆಪದ್ಭಾಂಭವರಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಗ್ರಾಮದಲ್ಲೊಬ್ಬರು ಬಡ ವ್ಯಕ್ತಿ ನಿಧನರಾದರೆ ಅಲ್ಲಿಗೆ ತೆರಳುವ ಇವರು ಹೆಣದ ಅಂತ್ಯ ಸಂಸ್ಕಾರದಲ್ಲಿ ಹೆಣಕ್ಕೆ ಹೆಗಲು ಕೊಟ್ಟ ನಿದರ್ಶನಗಳು ಕೂಡ ಇವೆ. ಶರತ್ ಕುಮಾರ್ರವರು ಮಾನವೀಯ ಕಾರ್ಯದ ಒಂದು ಝಲಕ್ ಇಲ್ಲಿದೆ.





ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆ
ಕಳೆದ 5 ವರ್ಷಗಳಿಂದ ಕೆಯ್ಯೂರು ಗ್ರಾಮ ಪಂಚಾಯತ್ನ ಸದಸ್ಯರಾಗಿರುವ ಇವರು ಎರಡೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಹಾಗೂ ಬಂದ ನಂತರ ಕೂಡ ಇವರು ಸಮಾಜ ಸೇವೆ ಮಾಡುವುದನ್ನು ನಿಲ್ಲಿಸಲಿಲ್ಲ, ರಾಜಕೀಯ ಕ್ಷೇತ್ರ ಅವರ ಸಮಾಜ ಸೇವೆಗೆ ಮತ್ತಷ್ಟು ಬಲವನ್ನು ತಂದುಕೊಟ್ಟಿತು ಎಂದೇ ಹೇಳಬಹುದು. ರಾಜಕೀಯವಾಗಿ ಗ್ರಾಮದಲ್ಲಿ ಏನೇನೂ ಅಭಿವೃದ್ಧಿಗಳಾಗಬೇಕೋ ಅದೆಲ್ಲವನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಪಡುವ ಜೊತೆಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ. ವಿಶೇಷವಾಗಿ ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಇವರು ಎಲ್ಲಿ ಕಸ ಕಂಡರೂ ಆ ಬಗ್ಗೆ ಜಾಗೃತರಾಗುತ್ತಾರೆ. ರಸ್ತೆ ಬದಿಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ದಂಡನೆ ವಿಧಿಸುವ ಕೆಲಸವನ್ನು ಕೂಡ ಮಾಡಿದ್ದಾರೆ. ಕಸ ಹಾಕಿದವರಿಗೆ ಕಾನೂನಿಕ ಪ್ರಕಾರ ದಂಡನೆ ವಿಧಿಸುವ ಕಾರ್ಯದಲ್ಲಿ ತಾಲೂಕಿನಲ್ಲೇ ನಂಬರ್ ವನ್ ಪಂಚಾಯತ್ ಎಂಬ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿದೆ.
ಅಂತ್ಯ ಸಂಸ್ಕಾರದಲ್ಲಿ ಹೆಣಕ್ಕೆ ಹೆಗಲು ಕೊಟ್ಟವರು…
ಶರತ್ ಕುಮಾರ್ರವರು ಮತ್ತೊಂದು ಮಾನವೀಯ ಕಾರ್ಯ ಎಂದರೆ ಗ್ರಾಮದಲ್ಲಿ ಯಾರೇ ಬಡ ವ್ಯಕ್ತಿಯೊಬ್ಬರು ನಿಧನರಾದರೆ ಅಲ್ಲಿಗೆ ತೆರಳಿ ಆ ಹೆಣದ ಅಂತ್ಯ ಸಂಸ್ಕಾರದಲ್ಲಿ ಅತ್ಯಂತ ಶ್ರದ್ಧೆಯಿಂದ ಭಾಗವಹಿಸುತ್ತಾರೆ ಇದಲ್ಲದೆ ಕೆಲವೊಮ್ಮೆ ಅಂತ್ಯ ಸಂಸ್ಕಾರಕ್ಕೆ ಕೊಂಡೋಗಲು ಹೆಣಕ್ಕೆ ಹೆಗಲು ಕೊಟ್ಟ ಉದಾಹರಣಗಳು ಇವೆ. ಕೆಲವೊಮ್ಮೆ ಹೆಣವನ್ನು ಕುಟುಂಬಿಕರ ಸಹಕಾರದೊಂದಿಗೆ ಪುತ್ತೂರಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಿಸಿದ್ದು ಇದೆ.ನನಗೆ ಈ ಸೂತಕದ ಭಯವಿಲ್ಲ, ಆಚಾರ ವಿಚಾರವನ್ನು ನಾನು ಅಲ್ಲಿ ಗಮನಿಸುವುದಿಲ್ಲ ಒಂದು ಹೆಣಕ್ಕೆ ಅಂತ್ಯ ಸಂಸ್ಕಾರದ ಮುಕ್ತಿ ಕೊಡುವುದೇ ನನಗೆ ಅಲ್ಲಿ ಮುಖ್ಯವಾಗಿರುತ್ತದೆ. ಕುಟುಂಬಿಕರಿಗೆ ಬೇಕಾದ ನನಗೆ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ಮಾಡುತ್ತೇನೆ ಎಂದೇಳುತ್ತಾರೆ ಶರತ್ ಕುಮಾರ್ರವರು.
ಗ್ರಾಮದಲ್ಲಿ ಏನೇ ಅವಘಡ ನಡೆದಾಗ ಮೊದಲ ಕರೆ ಇವರಿಗೆ…
ಕೆಯ್ಯೂರು ಗ್ರಾಮದಲ್ಲಿ ಏನೇ ಅವಘಡ ನಡೆದರೂ ಜನ ಮೊದಲು ನನಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ ಬಹುಷಹ ದೇವರು ನನಗೆ ಆ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಅನ್ಸುತ್ತೆ ಎನ್ನುವ ಶರತ್ ಕುಮಾರ್ರವರು, ಒಂದೊಮ್ಮೆ ವ್ಯಕ್ತಿಯೊಬ್ಬರಿಗೆ ಆಸಿಡ್ ದಾಳಿಯಾದಾಗ ಆ ವ್ಯಕ್ತಿಯನ್ನು ಯಾರೂ ಮುಟ್ಟಿಲ್ಲ ನಾನೇ ನನ್ನ ಗೆಳೆಯರ ಸಹಕಾರ ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದೇನೆ. ಆಕ್ಸಿಡೆಂಟ್ ಸಂಭವಿಸಿದಾಗ ಹಾವು ಕಚ್ಚಿದಾಗ ಅವರನ್ನು ಮೊದಲು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಿದ್ದೇನೆ. ಇಂತಹ ಅನೇಕ ಘಟನೆಗಳಲ್ಲಿ ನನ್ನದೇ ಕಾರಿನಲ್ಲಿ ಹಾಕಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ ಘಟನೆಯೂ ಇದೆ. ಬೆಂಕಿ ಬಿದ್ದಾಗ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿಯೂ ಬೆಂಕಿಯನ್ನು ಪ್ರಥಮ ಹಂತದಲ್ಲಿ ನಂದಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ.
ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ
ಕಳೆದೆರಡು ದಿನಗಳ ಹಿಂದೆ ಕೆಯ್ಯೂರು ಗ್ರಾಮದ ಪೊಯ್ಯೊಳೆ ಎಂಬಲ್ಲಿ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲೂ ಶರತ್ ಕುಮಾರ್ ಮಾಡಾವುರವರಿಗೆ ಕರೆ ಬಂದಿತ್ತು. ತಕ್ಷಣ ಸ್ಪಂದಿಸುವ ಇವರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಅಲ್ಲದೆ ಮೃತದೇಹದ ಮಹಜರು ಸಹಿತ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ್ದು ಅಲ್ಲದೆ ಪುತ್ತೂರಿನಲ್ಲಿ ಮೃತದೇಹದ ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಬರಹಗಳು ವೈರಲ್ ಆಗಿದ್ದು ಶರತ್ ಕುಮಾರ್ ರೈ ಮತ್ತು ಅವರ ಸಂಗಡಿಗರ ಮಾನವೀಯ ಕಾರ್ಯಕ್ಕೆ ದೂರದ ಬಾಂಬೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಇದೀಗ ಆ ಮನೆಗೆ ರಸ್ತೆಯನ್ನು ಮಾಡಿಕೊಡುವ ಕೆಲಸವನ್ನು ಕೂಡ ಶರತ್ ಕುಮಾರ್ರವರು ಮಾಡುತ್ತಿದ್ದಾರೆ.
‘ ಶರತ್ ಕುಮಾರ್ರವರು ಓರ್ವ ಪ್ರಾಮಾಣಿಕ ಸಮಾಜ ಸೇವಕರಾಗಿದ್ದಾರೆ. ಆಪತ್ಕಾಲದಲ್ಲಿ ಆಪದ್ಭಾಂಧವನಾಗಿ ಬಂದು ಸೇವೆ ಮಾಡುತ್ತಿದ್ದಾರೆ. ಇವರು ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಇವರನ್ನು ಗ್ರಾಪಂ ಅಧ್ಯಕ್ಷರನ್ನಾಗಿ ಪಡೆದಿರುವುದು ಗ್ರಾಮಕ್ಕೆ ಹೆಮ್ಮೆ ತಂದಿದೆ. ಮುಂದೆಯೂ ಇವರಿಂದ ಸಮಾಜ ಸೇವೆಗಳು ನಡೆಯಲಿ ಭಗವಂತ ಆ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ.’
ರಮೇಶ್ ರೈ ಬೋಳೋಡಿ,
ನಿವೃತ್ತ ಸೈನಿಕರು,
ಅಧ್ಯಕ್ಷರು ಬಂಟರ ಸಂಘ ಕೆಯ್ಯೂರು ಗ್ರಾಮ
‘ ಗ್ರಾಮದಲ್ಲಿ ಏನೇ ಅವಘಡ ಸಂಭವಿಸಿದರು ಜನರು ನನಗೆ ಕರೆ ಮಾಡುತ್ತಾರೆ.ನನ್ನಿಂದ ಸಾಧ್ಯವಾಗುವ ಎಲ್ಲಾ ಸಹಾಯವನ್ನು ಮಾಡುತ್ತಿದ್ದೇನೆ. ಇದು ನನಗೆ ದೇವರು ಕೊಟ್ಟ ಅವಕಾಶ ಎಂದು ಕೊಂಡಿದ್ದೇನೆ. ಕೆಲವೊಮ್ಮೆ ಮನಸ್ಸಿಗೆ ಬೇಸರ ತರುವ ಮಾತುಗಳು ಕೂಡ ಕೇಳಿಬರುತ್ತವೆ. ಅದನ್ನೆಲ್ಲಾ ಸವಾಲು ಎಂದು ಸ್ವೀಕರಿಸಿಕೊಂಡು ನನ್ನ ಗೆಳೆಯರ ಸಹಕಾರ ಪಡೆದುಕೊಂಡು ಸಮಾಜ ಸೇವೆ ಮಾಡುತ್ತಿದ್ದೇನೆ.’
-ಶರತ್ ಕುಮಾರ್ ಮಾಡಾವು,
ಅಧ್ಯಕ್ಷರು ಕೆಯ್ಯೂರು ಗ್ರಾಪಂ









