ಪುತ್ತೂರು: ಕಳೆದ ಎರಡು ದಶಕಗಳಿಂದ ಮಹಿಳೆಯರ ವಿದ್ಯಾಭ್ಯಾಸದಲ್ಲಿ ಕ್ರಾಂತಿ ಸೃಷ್ಟಿಸಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಅಮೂಲ್ಯ 23 ವರ್ಷಗಳ ಶಿಕ್ಷಣ ನಾಗಾಲೋಟದೊಂದಿಗೆ ಇದೀಗ ಬೆಳ್ಳಿಹಬ್ಬ ಆಚರಣೆ ಉದ್ಘಾಟನೆಯ ಸಂಭ್ರಮದಲ್ಲಿದೆ. ಸಂಸ್ಥೆಯ ಪ್ರಮುಖ ವಿಭಾಗವಾದ ಶರೀಅತ್ ಪೂರ್ತಿಗೊಳಿಸಿದ 240 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಕಾರ್ಯಕ್ರಮ ಇಲ್ಲಿ ನಡೆಯಲಿದೆ.
240 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ:
ಮೇ.16ರಂದು ಬೆಳಿಗ್ಗೆ 10 ಗಂಟೆಗೆ ಕುಂಬ್ರ ಮರ್ಕಝುಲ್ ಹುದಾದಲ್ಲಿ ಮಹಿಳಾ ಸಮಾವೇಶ ನಡೆಯಲಿದ್ದು ಸಂಸ್ಥೆಯಲ್ಲಿ ಮೂರು ವರ್ಷ ಶರೀಅತ್ ಕೋರ್ಸ್ ಪೂರ್ತಿಗೊಳಿಸಿದ 240 ವಿದ್ಯಾರ್ಥಿನಿಯರಿಗೆ ‘ಅಲ್ ಮಾಹಿರಾ’ ಪದವಿ ಪ್ರದಾನ ಮಾಡುವ ಘಟಿಕೋತ್ಸವ ನಡೆಯಲಿದೆ. ಅಹ್ಲ್ ಬೈತ್‌ನ ಸಯ್ಯಿದತ್ ಖುಬ್ರಾ ಬೀವಿ ಬಾಅಲವಿ ಉಜಿರೆ, ಸಯ್ಯಿದತ್ ಮೈಮೂನಾ ಬೀವಿ ಅಲ್ ಮಶ್ಹೂರ್ ಆದೂರು, ಸಯ್ಯಿದತ್ ತಾಹಿರಾ ಬೀವಿ ಅಲ್ ಬುಖಾರಿ ಸುಳ್ಯ, ಸಯ್ಯಿದತ್ ಫಾತಿಮಾ ಬೀವಿ ಅಲ್ ಬುಖಾರಿ ಕಾಟುಕುಕ್ಕೆ, ಸಯ್ಯಿದತ್ ಉಮ್ಮುಹಾನಿ ಬೀವಿ ಸಾಫಿಯಾ ಅಸ್ಸಖಾಫ್ ಮಂಚಿ ಇವರ ದಿವ್ಯ ಹಸ್ತದಿಂದ 240 ‘ಮಾಹಿರಾ’ಗಳಿಗೆ ಪದವಿ ಪ್ರದಾನ ನಡೆಯಲಿದೆ.
ಅತಿಥಿಯಾಗಿ ಡಾ.ಮರಿಯಂ ಅಂಜುಂ ಇಫ್ತಿಕಾರ್ ಭಾಗವಹಿಸಲಿದ್ದು 5 ಸಾವಿರ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಪರಿಣಿತೆಯರಾದ ಮಹಿಳಾ ಪ್ರಮುಖರು, ಶೈಕ್ಷಣಿಕ ಚಿಂತಕಿಯರು ಭಾಗವಹಿಸಲಿದ್ದಾರೆ.
ಸಂಜೆ ಗಂಟೆ 4ರಿಂದ 6ರ ವರೆಗೆ ಕೇರಳದ ಪ್ರಖ್ಯಾತ ಬುರ್ದಾ, ಖವಾಲಿ, ನಾತೇ ಹಾಡಗಾರ, ಕೇರಳ ಸರಕಾರದ ಜಾನಪದ ಅಕಾಡೆಮಿಯ ಉಪಾಧ್ಯಕ್ಷ ಉಸ್ತಾದ್ ಡಾ.ಕೋಯಾ ಕಾಪಾಡ್ ಬಳಗದಿಂದ ‘ಖವಾಲಿ ಸಂಜೆ’ ಕಾರ್ಯಕ್ರಮ ನಡೆಯಲಿದೆ.
ಪೇರೋಡ್ ಉಸ್ತಾದರಿಂದ ಮುಖ್ಯ ಭಾಷಣ:
ಮಗ್ರಿಬ್ ನಮಾಜ್ ನಂತರ ಸಮಾರೋಪ ಸಮಾರಂಭ ನಡೆಯಲಿದ್ದು ಸಮಾಜದ ವಿವಿಧ ಕ್ಷೇತ್ರಗಳ ನಾಯಕರು, ಶೈಕ್ಷಣಿಕ ಚಿಂತಕರು, ಸಾದಾತ್‌ಗಳು, ವಿಧ್ವಾಂಸರು ಭಾಗವಹಿಸಲಿದ್ದಾರೆ. ಖ್ಯಾತ ಪ್ರಭಾಷಣಗಾರ ಮೌಲಾನಾ ಪೇರೋಡ್ ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ.
ಮಹಿಳೆಯರಿಗೆ ಪದವಿ ನೀಡಿದ ಪ್ರಥಮ ಸಂಸ್ಥೆ..!
ರಾಜ್ಯದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಧಾರ್ಮಿಕ ಪದವಿ ನೀಡಿದ ಕಾಲೇಜು ಎಂಬ ಹೆಗ್ಗಳಿಕೆಗೆ ಕುಂಬ್ರ ಮರ್ಕಝುಲ್ ಹುದಾ ಪಾತ್ರವಾಗಿದೆ. ನೆರೆ ರಾಜ್ಯ ಕೇರಳದಲ್ಲಿ ಸಾವಿರಾರು ವಿದ್ಯಾಕೇಂದ್ರಗಳಿದ್ದರೂ ಅಕ್ಷರ ರಂಗದಲ್ಲಿ ಖ್ಯಾತವಾದ ಸಾಂಸ್ಕ್ರತಿಕ ಕೇಂದ್ರಗಳಿದ್ದರೂ ಮುಸ್ಲಿಂ ಮಹಿಳೆಯರಿಗೆ ಧಾರ್ಮಿಕ ಶಿಕ್ಷಣದಲ್ಲಿ ಪದವಿ ನೀಡುವ ಪರಿಕಲ್ಪನೆ ಪ್ರಾರಂಭಿಸಿದ ಕೀರ್ತಿ ಕುಂಬ್ರ ಮರ್ಕಝುಲ್ ಹುದಾಗೆ ಸಲ್ಲುತ್ತದೆ.
ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿನಿಯರು ತಮ್ಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ನೂರಾರು ಅರೇಬಿಕ್ ಕಾಲೇಜುಗಳಲ್ಲಿ ಅಧ್ಯಾಪಿಕೆಯರಾಗಿ, ಪ್ರಾಂಶುಪಾಲರಾಗಿ ಇನ್ನಿತರ ಪ್ರಮುಖ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳದಲ್ಲೂ, ವಿದೇಶದಲ್ಲೂ ಉನ್ನತ ಹುದ್ದೆಯಲ್ಲಿದ್ದಾರೆ. ಪ್ರವಾದಿ ಪರಂಪರೆಯ ‘ಅಹ್ಲ್‌ಬೈತ್’ ಕುಟುಂಬದ ಮಹಿಳೆಯರೂ ಇಲ್ಲಿ ಪದವಿ ಪಡೆದಿದ್ದು ಅವರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಮಟ್ಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬೆಳ್ಳಿ ಹಬ್ಬ-ಸಿಲ್ವರಿಯಂ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ
25 ವರ್ಷಗಳ ಸಾರ್ಥಕ ಸೇವೆಗೆ ಹೆಜ್ಜೆ ಇಡುತ್ತಿರುವ ಸಂಸ್ಥೆ ಸಿಲ್ವರಿಯಂ ಎಂಬ ಹೆಸರಲ್ಲಿ ಎರಡು ವರ್ಷಗಳ ತನಕ ವಿವಿಧ ಕಾರ್ಯಕ್ರಮಗಳನ್ನು ಆಚರಿಸುವ ಪದ್ದತಿಯನ್ನು ಹಾಕಿಕೊಂಡಿದೆ. ವಿದ್ಯಾಭ್ಯಾಸ ಕೇಂದ್ರಗಳ ಸ್ಥಾಪನೆ, ಹೊಸ ವಿದ್ಯಾಭ್ಯಾಸ ಪದ್ದತಿಗಳ ಅನುಷ್ಠಾನ, ವಿದ್ಯಾಭ್ಯಾಸ ಸಿಸ್ಟಮ್‌ನಲ್ಲಿ ನೂತನ ಐಡಿಯಾಲಜಿ ಅನುಷ್ಠಾನ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗುತ್ತಿದೆ.
ಮಾಹಿರಾ ಕೋರ್ಸ್‌ನಲ್ಲಿ ಏನೇನಿದೆ..?
ಇಸ್ಲಾಮಿಕ್ ಕರ್ಮಶಾಸ್ತ್ರವಾದ ಫಿಕ್ಹ್, ಪ್ರವಾದಿ ಜೀವನ ಪಾಠವಾದ ಹದೀಸ್, ಕುರಾನ್ ಪಾಠವಾದ ತಫ್ಸೀರ್, ಅರೇಬಿಕ್ ಗ್ರಾಮರ್ ನಹ್ವ್, ಆಧ್ಯಾತ್ಮಿಕ ಪಾಠವಾದ ತಸವುಫ್, ಸ್ಫೋಕನ್ ಇಂಗ್ಲೀಷ್, ಜನರಲ್ ನಾಲೇಜ್ ಹಬ್, ಹಲವು ಸಬ್ಜೆಕ್ಟ್ ಡಿಪೆಂಡ್ ಸ್ಪೆಷಲ್ ತರಗತಿಗಳು ಮಾತ್ರವಲ್ಲದೆ ಮಹಿಳೆಯರ ಮಯ್ಯಿತ್ ಪರಿಪಾಲನಾ ನಿಯಮಗಳು, ಬುರ್ದಾ, ಮೌಲೀದ್, ಮಾಲೆ ಬೈತ್‌ಗಳು, ಹೋಂ ಸೈನ್ಸ್ ವಿಭಾಗದ ಅಮೂಲ್ಯ ನಾಲೇಜ್‌ಗಳು, ಪ್ರತಿಭೆಗಳಿಗೆ ಆಸರೆಯಾದ ಸ್ಕಿಲ್ ಡೆವಲಪ್ಮೆಂಟ್ ವಿಭಾಗಗಳು ಇದರಲ್ಲಿ ಕಾರ್ಯಾಚರಿಸುತ್ತಿದೆ.
ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ:
ಸುಮಾರು 150 ಮಂದಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯವಿದ್ದು ಕೇರಳ ಸಹಿತ ಹಲವು ಭಾಗಗಳಿಂದ ಇಲ್ಲಿ ವಿದ್ಯಾರ್ಥಿನಿಯರಿದ್ದಾರೆ. ರಾಜ್ಯದ ಹೆಚ್ಚಿನ ಎಲ್ಲಾ ಜಿಲ್ಲೆಗಳಿಂದಲೂ ವಿದ್ಯಾರ್ಥಿನಿಯರು ಬಂದು ಕಲಿಯುತ್ತಿದ್ದಾರೆ.
ಟೀಚರ್ಸ್ ಟ್ರೈನಿಂಗ್ ಕೋರ್ಸ್:
ಸಿಲ್ವರಿಯಂ ಭಾಗವಾಗಿ ಈ ಶೈಕ್ಷಣಿಕ ವರ್ಷದಿಂದ ಟಿ.ಟಿ.ಐ ಎಂಬ ವಿಭಾಗವನ್ನು ಆರಂಭಿಸಲಾಗಿದ್ದು ಅಲ್ ಮಾಹಿರಾ ಪದವಿ ಗಳಿಸಿದವರಿಗೆ ಮತ್ತಷ್ಟು ವಿದ್ಯೆ ನೀಡಿ ಅವರನ್ನು ಉತ್ತಮ ಟೀಚರ್ಸ್‌ಗಳನ್ನಾಗಿ ತಯಾರುಗೊಳಿಸಲಾಗುತ್ತದೆ. ಆ ಮೂಲಕ ಮತ್ತಷ್ಟು ಮಾಹಿರಾಗಳಿಗೆ ಉದ್ಯೋಗ ಲಭಿಸುವ ಹಾಗೆ ಮಾಡುವುದು ಸಂಸ್ಥೆಯ ಉದ್ದೇಶ.
ಮರ್ಕಝ್ ಅಕಾಡೆಮಿ ಆಫ್ ಥಿಯೋಲಜಿ:
ಗಂಡು ಮಕ್ಕಳಿಗೂ ಕಲಿಸುವ ನಿಟ್ಟಿನಲ್ಲಿ ಬೆಳಿಯೂರುಕಟ್ಟೆ ಮಂಜ ಎಂಬಲ್ಲಿ ಮರ್ಕಝ್ ಅಕಾಡೆಮಿ ಆಫ್ ಥಿಯೋಲಜಿ ಎಂಬ ಸಂಸ್ಥೆಯನ್ನು ಆರಂಭಿಸಲಾಗಿದೆ. ಹಲವು ವಿದ್ಯಾರ್ಥಿಗಳು ಇಲ್ಲಿ ಉಚಿತವಾಗಿ ವಸತಿ ಸೌಲಭ್ಯದೊಂದಿಗೆ ಕಲಿಕೆಯಲ್ಲಿದ್ದಾರೆ.