ಎಸ್.ಆರ್.ಕೆ.ಲ್ಯಾಡರ‍್ಸ್ ರಜತ ಮಹೋತ್ಸವ ಸಾಧನಾ ಸಮಾವೇಶವಲ್ಲ – ಕೃಷಿಕರಿಗೆ, ಊರಿನವರಿಗೆ, ಸಮಾಜಕ್ಕೆ ಸಲ್ಲಿಸುವ ಕೃತಜ್ಞತಾ ಸಂಭ್ರಮ – ಕೇಶವ ಅಮೈ

0

ಪುತ್ತೂರು: ಮರದಿಂದ ಅಡಿಕೆ ಕೀಳಲು ನುರಿತ ಕಾರ್ಮಿಕರ ಅಭಾವದಿಂದ ಸಮಸ್ಯೆಗಳ ಸಮಯದಲ್ಲಿ ಒಬ್ಬರು ಹಿರಿಯರ ಪ್ರೇರಣೆಯಿಂದ ಆರಂಭವಾದ ಚಿಕ್ಕ ಸಂಸ್ಥೆ ಇವತ್ತು ಉತ್ತಮ ರೀತಿಯಲ್ಲಿ ಬೆಳೆದಿದೆ. 25 ವರ್ಷಗಳಿಂದ ಕೃಷಿಕರು ನನ್ನನ್ನು ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ರಜತ ಸಂಭ್ರಮ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ನಿರಂತರ ಸರಣಿ ಕಾರ್ಯಕ್ರಮ ಮಾಡಿದ್ದೇವೆ. ಕೊನೆಯದಾಗಿ ಮೇ.25ಕ್ಕೆ ಸಮಾರೋಪ ಸಮಾರಂಭ ನನ್ನ ಮನೆ ಕಲಾಯಿಗುತ್ತುವಿನಲ್ಲಿ ನಡೆಯಲಿದೆ. ಇದು ನನ್ನ ಸಾಧನೆಯ ಸಮಾವೇಶ ಅಲ್ಲ. ನನ್ನನ್ನು ಬೆಳೆಸಿದ ಕೃಷಿಕರಿಗೆ ನಾನು ಸಲ್ಲಿಸುವ ಕೃತಜ್ಞತೆ ಎಂದು ಎಸ್‌ಆರ್‌ಕೆ ಲ್ಯಾಡರ‍್ಸ್ ನ ಮಾಲಕ ಕೇಶವ ಅಮೈ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ನಾನು ಬಹಳ ಬಡತನದಿಂದ ಬಂದವನು. ಈ ಮಟ್ಟಕ್ಕೆ ಬೆಳೆಯಲು ಕಾರಣ ನನ್ನ ಕೃಷಿಕರು, ಸಮಾಜ ಮತ್ತು ಊರಿನವರು. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಲು ಈ ರಜತ ಸಂಭ್ರಮ ಎಂದ ಅವರು ಆರಂಭದ ಕಾಲದಲ್ಲಿ ಮರ ಏರಲು ಮಳೆಗಾದಲ್ಲಿ ಪಾಚಿ, ಹಿಡಿದ ಸಂದರ್ಭ, ಬಿದಿರು ಅಲಭ್ಯತೆ ಇರುವ ಸಂದರ್ಭ, ಇತರ ಕಬ್ಬಿಣದ ಏಣಿಗಳು ಬಹು ಭಾರ ಮತ್ತು ತುಕ್ಕು ಹಿಡಿಯುವ ಸಲಕರಣೆಯಾದ್ದರಿಂದ ಅಲ್ಯೂಮಿನಿಯಂ ಏಣಿ ಮಾಡಿ ಅದನ್ನು ಅಡಿಕೆ ಮರಕ್ಕೆ ಒಪ್ಪುವಂತೆ ಮಾಡಿ ಅದರಿಂದ ಮರ ಏರಿ ಮದ್ದು ಸಿಂಪಡಿಸುವುದು, ಅಡಿಕೆ ಕೀಳಲು ವ್ಯವಸ್ಥೆ ಆಗುವಂತೆ ಅದರ ವಿನ್ಯಾಸ ರಚನೆ ಮಾಡಿ ಕೇವಲ ಎರಡು ಮೂರು ಮಂದಿ ಕಾರ್ಮಿಕರ ಜೊತೆಗೂಡಿ ಆರಂಭಿಸಿದ್ದೆವು. ನಂತರದ ದಿನದಲ್ಲಿ ಅಡಿಕೆಗೆ ಮೌಲ್ಯ ಕುಸಿತ ಕಂಡಿತು. ಆದರೆ 2006ರಲ್ಲಿ ಧರ್ಮಸ್ಥಳದ ನಡಾವಳಿಯಿಂದ ನಂತರದ ದಿನಗಳಲ್ಲಿ ಇತರ ಜಿಲ್ಲೆಗೆ ಪಸರಿಸಿಕೊಂಡು ತನ್ನ ವ್ಯಾಪ್ತಿ ಹೆಚ್ಚಿಸಿತು. 2008ರಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಾಯಧನ ಏಣಿಗಳಿಗೆ ದೊರಕಿದಾಗ ನಮ್ಮ ರಾಜ್ಯದ 13 ಜಿಲ್ಲೆ, ಕೇರಳದ 6 ಜಿಲ್ಲೆ ಸಹಿತ ಕಾಲು ಮೆಣಸು ಕೀಳಲೆಂದು ಆಂಧ್ರಪ್ರದೇಶ, ತೆಳಂಗಾಣ, ತಮಿಳುನಾಡು, ಇತ್ತೀಚೆಗೆ ಒರಿಸ್ಸಾ ಕ್ಕೂ ನಮ್ಮ ಏಣಿ ಹೋಗಿದೆ. ಇವೆಲ್ಲದರ ಜೊತೆಗೆ ನಮ್ಮ ಸಂಸ್ಥೆ ಅನೇಕರಿಗೆ ಉದ್ಯೋಗ ನೀಡಿದೆ. ಇಲ್ಲಿಂದ ಹೊರ ಹೋದವರು ಸ್ವಂತ ಉದ್ಯಮ ಆರಂಭಿಸುವ ಮೂಲಕ ಅಲ್ಲಿಯೂ ಹಲವರಿಗೆ ಉದ್ಯೋಗ ಸೃಷ್ಟಿಯಾಗುವ ಮೂಲಕ ನಮ್ಮಿಂದ ಇನ್‌ಡೈರೆಕ್ಟ್ ಆಗಿ ಉದ್ಯೋಗ ಸೃಷ್ಟಿಯಾಗಿದೆ ಎಂದರು. ಇವತ್ತು ರಾಜ್ಯದ 13 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ಇದೆ. ಕೇರಳದಲ್ಲೂ ಇದೆ. ಇದಕ್ಕೆಲ್ಲ ಮಾರುಕಟ್ಟೆ ಮಾತ್ರ ಪುತ್ತೂರು. ಅಡಿಕೆ ಮತ್ತು ತೆಂಗು ಬೆಳೆಗೆ ಪ್ರೋತ್ಸಾಹದಾಯಕ ಪುತ್ತೂರು. ಹಾಗಾಗಿ 25ಕ್ಕಿಂತ ಮಿಕ್ಕಿ ಏಣಿ ಮಾಡುವವರು ಪುತ್ತೂರಿನಲ್ಲಿ ಇದ್ದಾರೆ ಎಂದರು.

10 ಸರಣಿ ಕಾರ್ಯಕ್ರಮ:
2023 ನ.23ಕ್ಕೆ ನಮ್ಮ ಸಂಸ್ಥೆ 25 ವರ್ಷಕ್ಕೆ ಕಾಲಿಟ್ಟಿದೆ. ಹಾಗಾಗಿ ರಜತ ಮಹೋತ್ಸವ ಮಾಡುವ ನಿಟ್ಟಿನಲ್ಲಿ ನಿರಂತರ 10 ಸರಣಿ ಕಾರ್ಯಕ್ರಮ ಮಾಡಿದ್ದೇವೆ. ಆರಂಭದಲ್ಲಿ ರಕ್ತದಾನ ಶಿಬಿರದ ಮೂಲಕ ಚಾಲನೆ ನೀಡಿದ್ದು, ಬಳಿಕ ಸುಳ್ಯ ಸಾಂದೀಪ ವಿಶೇಷ ಮಕ್ಕಳ ಶಾಲೆಗೆ ಸಹಾಯಧನ, ಅಲ್ಲಿನ ಮಕ್ಕಳ ಪಾಲನೆ ಪೋಷಣೆ ಮಾಡುವವರಿಗೆ ನಮ್ಮ ಸಂಸ್ಥೆಯಲ್ಲಿ ಸನ್ಮಾನ ಗೌರವ. ಆ ಮಕ್ಕಳಿಂದ ನಮ್ಮ ಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. ಶತಮಾನದ ಅಂಚಿನದಲ್ಲಿರುವ ಬನ್ನೂರು ಹಿ.ಪ್ರಾ.ಶಾಲೆಯಲ್ಲಿ ನಮ್ಮ 50 ಮಂದಿ ಸದಸ್ಯರಿಂದ ಶ್ರಮದಾನ ಮೂಲಕ ಎರಡು ಕೊಠಡಿಯನ್ನು ಸುವ್ಯವಸ್ಥೆಗೊಳಿಸಿದ್ದು, ನೆಲ್ಲಿಕಟ್ಟೆ ಡಾ. ಶಿವರಾಮ ಕಾರಂತ ಶಾಲೆಯಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಮಾಹಿತಿ ಕಾರ್ಯಗಾರ ಮತ್ತು ಆರೋಗ್ಯ ಮಾಹಿತಿ ಹಾಗೂ ಸೈಬರ್ ಕ್ರೈಂ ಗಳ ಮಾಹಿತಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಆರೋಗ್ಯ ವಿಚಾರಣೆ, ಎಸ್‌ಆರ್‌ಕೆ ಲ್ಯಾಡರ‍್ಸ್ ಸಂಸ್ಥೆಯ ಸಿಬ್ಬಂದಿಗಳಿಗೆ ಕ್ರೀಡಾ ಸಂಭ್ರಮ, ಕಾರ್ಮಿಕ ದಿನದಂದು ಕೊಯಿಲು ಜಾನುಪಶು ಸಂವರ್ಧನದ ಹೈನುಗಾರಿಕಾ ಕಾರ್ಮಿಕರಿಗೆ ಗೌರವ, ಬೆಳ್ಳಾರೆಯ ವಿದ್ಯಾಬೋಧಿನಿ ಶಾಲೆಯಲ್ಲಿ ಕೃಷಿ ವಿಚಾರ ಸಂಕಿರಣ, ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಕಾರ್ಯಕ್ರಮ ಮಾಡಲಾಗಿದೆ ಎಂದು ಕೇಶವ ಅಮೈ ಹೇಳಿದರು.

5ಸಾವಿರ ಜನರ ನಿರೀಕ್ಷೆ:
ತನ್ನ ಕಾರ್ಯಕ್ಷೇತ್ರ ಪುತ್ತೂರು ಆದರೂ ವಾಸ್ತವ್ಯ ಇರುವುದು ಕೊಯಿಲದ ಕಲಾಯಿಗುತ್ತುವಿನಲ್ಲಿ ಹಾಗಾಗಿ ರಜತ ಸಂಭ್ರಮವನ್ನು ಊರವರ ಮತ್ತು ಕೃಷಿ ಸಂಬಂಧಿತ ಪರಿಕರಗಳ ಉಪಕರಣಗಳ ಉತ್ಪನ್ನ ಆದ್ದರಿಂದ ಕೃಷಿಯ ತೋಟದಲ್ಲಿ ಕಾರ್ಯಕ್ರಮ ಮಾಡುವ ಅವಕಾಶ ಲಭಿಸಿದೆ. ಇಂಡಸ್ಟ್ರಿಯಲ್ಲಿ ಸ್ಥಳಾವಕಾಶ ಕಡಿಮೆ. ಪೇಟೆಯಲ್ಲಿ ಮಾಡುವುದಕ್ಕಿಂತ ಹಳ್ಳಿಯ ಜನರು ಹಳ್ಳಿಯ ವಾತಾವರಣದಲ್ಲಿ ಮಾಡುವುದು ಉತ್ತಮ. ಹಳ್ಳಿಯ ಜನತೆಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಸಿಗುತ್ತದೆ. ಸುಮಾರು 5 ಸಾವಿರ ಮಂದಿಯ ನಿರೀಕ್ಷೆಯಲ್ಲಿ 1 ಎಕ್ರೆ ಜಾಗದಲ್ಲಿ ಪೆಂಡಾಲ್ ಅಳವಡಿಸಲಾಗಿದ್ದು, 1500 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೇಶವ ಅಮೈ ಹೇಳಿದರು.
ರಜತ ಸಂಭ್ರಮದ ಸಂಯೋಜಕರಾದ ಸತೀಶ್ ಭಟ್ ಅವರು ಮಾತನಾಡಿ ಎಸ್‌ಆರ್‌ಕೆಯಿಂದ ಇವತ್ತು ಹಲವು ಉದ್ಯೋಗ ಸೃಷ್ಟಿಯಾಗಿದೆ ಎಂದರು. ಇನ್ನೋವ ಸಂಯೋಜಕ ಅಬ್ರಹಾಂ ಅವರು ಮಾತನಾಡಿ ಎಸ್‌ಆರ್‌ಕೆ ಸಂಸ್ಥೆ ಹಲವಾರು ಸಾಮಾಜಿಕ, ಶೈಕ್ಷಣಿಕವಾಗಿ ಸೇವೆ ಮಾಡಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಲೋಕೇಶ್ ಬನ್ನೂರು ಉಪಸ್ಥಿತರಿದ್ದರು.

ಬೆಟ್ಟ ಮರಿಯಪ್ಪ ಭಟ್ ಅವರು ಸ್ಪೂರ್ತಿ:
ನಾನು ಮಂಗಳೂರಿನ ಏಣಿಯ ಸಂಸ್ಥೆ ವಿನು ಲ್ಯಾಡರ‍್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ನಮ್ಮಲ್ಲಿ ವಾಣಿಜ್ಯ, ಮನೆಗೆ ಉಪಕರಣ ಡೊಮೆಸ್ಟಿಕ್ ಉಪಕರಣ ಇತ್ತೆ ಹೊರತು ಕೃಷಿಗೆ ಸಂಬಂಧಿತ ಏಣಿ ಇರಲಿಲ್ಲ. ಮಡಿಕೇರಿ ಕಡೆ ವ್ಯಾಪಾರಕ್ಕೆ ಹೋದಾಗ ಬೆಟ್ಟ ಮರಿಯಪ್ಪ ಭಟ್ ಇದರ ಕುರಿತು ವಿಷಯ ಪ್ರಸ್ತಾಪಿಸಿದರು. ಅಡಿಕೆ ಕೀಳಲು, ಮದ್ದು ಸಿಂಪಡಿಸಲು ಕಾರ್ಮಿಕರ ಸಮಸ್ಯೆಯ ಕುರಿತು ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು. ಆಗ ನನಗೆ 23 ವರ್ಷ ವಯಸ್ಸು, ಸಮಸ್ಯೆಯನ್ನು ನಾನು ಕೆಲಸ ಮಾಡುವ ಸಂಸ್ಥೆಯ ಗಮನಕ್ಕೆ ತಂದಿದ್ದೆ. ಅವರು ಅದಕ್ಕೆ ಪ್ರಯತ್ನ ಪಟ್ಟರೂ ಅದು ವಿಫಲವಾಗಿತ್ತು. ಕೊನೆಗೆ ನಾನು ಸ್ವಂತ ಉದ್ಯಮ ಆರಂಭಿಸಿ ಅದೆ ಏಣಿಯ ಅವಿಷ್ಕಾರದಲ್ಲಿ ನಿರತನಾದೆ. ತೆಂಕಿಲದಲ್ಲಿ ನನ್ನ ಸೋದರ ಮಾವನ ಮನೆಯಂಗಳದಲ್ಲಿ ಕೃಷಿಗೆ ಉಪಯೋಗ ಆಗುವ ಏಣಿ ಮಾಡಲು ಪ್ರಯತ್ನ ಪಟ್ಟೆ. ಅಲ್ಲಿ ಅದು ಯಶಸ್ವಿಯಾಯಿತು.
ಕೇಶವ ಅಮೈ ,
ಮಾಲಕರು ಎಸ್ ಆರ್ ಕೆ ಲ್ಯಾಡರ‍್ಸ್

LEAVE A REPLY

Please enter your comment!
Please enter your name here