ಪುತ್ತೂರು: ಭಾರೀ ಮಳೆಗೆ ವಾಸದ ಮನೆಯೊಂದು ಬಿದ್ದು ಅಪಾರ ನಷ್ಟ ಉಂಟಾದ ಬಗ್ಗೆ ಕೆಯ್ಯೂರು ಗ್ರಾಮದ ದೇರ್ಲದಿಂದ ವರದಿಯಾಗಿದೆ. ಮೇ.20 ರಂದು ರಾತ್ರಿ ಸುರಿದ ಮಳೆಗೆ ಅಣ್ಣು ದೇರ್ಲ ಎಂಬವರ ವಾಸದ ಮನೆಯ ಮಾಡು ಸಂಪೂರ್ಣ ಮುರಿದು ಬಿದ್ದಿದೆ. ಮನೆಯಲ್ಲಿ ವಾಸವಿದ್ದ ಅಣ್ಣುರವರ ತಾಯಿ ಸರೋಜ ಹಾಗೂ ಇತರರಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮನೆಯ ಮಾಡಿನ ಪಕ್ಕಾಸು ಸಂಪೂರ್ಣ ಮುರಿದು ಬಿದ್ದಿದ್ದು ಹಂಚುಗಳು ಹುಡಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ. ವಾಸದ ಮನೆ ಮುರಿದು ಬಿದ್ದಿರುವುದರಿಂದ ಅಣ್ಣುರವರ ಕುಟುಂಬ ಪಕ್ಕದ ಅವರ ಸಂಬಂಧಿಕರ ಮನೆಯಲ್ಲಿ ವಾಸವಿದೆ. ಮನೆಗೆ ಕೆಯ್ಯೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯರುಗಳಾದ ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ, ಸಹಾಯಕ ನಾರಾಯಣ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.