ಕಾವು: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸರಕಾರ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದು, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾವು ಪಂಚವಟಿನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳಿಂದ ಸಂಭ್ರಮಾಚರಣೆ ಮಾಡಲಾಯಿತು.
ಹಿಂದುತ್ವದ ಜಿಲ್ಲೆ ಎಂಬುದು ಮತ್ತೊಮ್ಮೆ ಸಾಬೀತು-ಪುತ್ತಿಲ
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ನವರು ಜಾತಿ ಮತ್ತು ಧರ್ಮದ ಮೂಲಕ ಮತ ವಿಭಜನೆಗೆ ಮುಂದಾಗಿ ಸೋಲನುಭವಿಸಿದ್ದಾರೆ, ಹಿಂದುತ್ವದ ಮತ್ತು ಬಿಜೆಪಿಯ ಭದ್ರಕೋಟೆಯನ್ನು ಮುರಿಯುತ್ತೇವೆಂದು ಪ್ರಚಾರ ಭಾಷಣ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರ ತಕ್ಕ ಪಾಠ ಕಲಿಸುವ ಮೂಲಕ ನಮ್ಮ ಜಿಲ್ಲೆ ಹಿಂದುತ್ವದ ಜಿಲ್ಲೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಪುತ್ತೂರಿನಲ್ಲಿಯೂ ಬಿಜೆಪಿ ಅಭೂತಪೂರ್ವ ಮುನ್ನಡೆಗಳಿಸಿದ್ದು, ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿಯ ಗತವೈಭವ ಮುಂದುವರಿಯಲಿದೆ ಎಂದು ಹೇಳಿದರು.
ಅಪಪ್ರಚಾರಕ್ಕೆ ಮತದಾರರಿಂದ ಉತ್ತರ-ಸಾಜ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಮೇಲೆ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು. ಮುಖ್ಯವಾಗಿ ಕಾವುನಲ್ಲಿ ನಡೆದಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ನ ನಾಯಕರೊಬ್ಬರು ಬ್ರಿಜೆಶ್ ಚೌಟರವರು ಭಾರತೀಯ ಸೇನೆಯಿಂದ ಓಡಿ ಬಂದವರು, ಅವರು ಸೈನಿಕರೇ ಅಲ್ಲ ಎಂಬುದಾಗಿ ಅಪಪ್ರಚಾರದ ಮೂಲಕ ಸೈನಿಕನಿಗೆ ಅವಮಾನ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಈ ಭಾಗದ ನಮ್ಮ ಕಾರ್ಯಕರ್ತರು ಮತ್ತು ಮತದಾರರು ಗ್ರಾಮದ 5 ಬೂತ್ಗಳ ಪೈಕಿ 3 ಬೂತ್ಗಳಲ್ಲಿ ಬಿಜೆಪಿಗೆ ಮುನ್ನಡೆಯನ್ನು ತಂದುಕೊಟ್ಟು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಚುನಾವಣಾ ಉಸ್ತುವಾರಿ ಪ್ರಸನ್ನ ಕುಮಾರ್ ಮಾರ್ತ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ಎಸ್ಟಿ ಮೋರ್ಛಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಲೋಕಸಭಾ ಚುನಾವಣೆಯ ತಾಲೂಕು ಸಹಸಂಚಾಲಕ ಉಮೇಶ್ ಗೌಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಅಮ್ಚಿನಡ್ಕ ಬೂತ್ ಅಧ್ಯಕ್ಷ ನಾರಾಯಣ ಆಚಾರ್ಯ ಮಳಿ ಸ್ವಾಗತಿಸಿ, ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ಲೋಕೇಶ್ ಚಾಕೋಟೆ ವಂದಿಸಿದರು. ಚಂದ್ರಕಿರಣ್ ಕಾವು ಕಾರ್ಯಕ್ರಮ ನಿರೂಪಿಸಿದರು.
ಪಟಾಕಿ ಸಿಡಿಸಿ, ಸಿಹಿ ತಿಂಡಿ-ಪಾಯಸ ಹಂಚಿ ಸಂಭ್ರಮ:
ಕಾವು ಪಂಚವಟಿ ನಗರದಲ್ಲಿರುವ ದೇವರ ಕಟ್ಟೆಯ ಬಳಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ, ಪಾಯಸ ವಿತರಣೆ ಮಾಡಲಾಯಿತು. ಬಿಜೆಪಿ ಹಿರಿಯ ಕಾರ್ಯಕರ್ತ ನಾರಾಯಣ ಆಚಾರ್ಯ ಮಳಿ, ಬಿಜೆಪಿ ಯುವ ಮುಂದಾಳು ಯೋಗೀಶ್ ಕಾವು ಯಶಸ್ವಿಯಾಗಿ ಕಾರ್ಯಕ್ರಮ ಸಂಯೋಜನೆ ಮಾಡಿದರು.