ಪುತ್ತೂರು: ಮೊಟ್ಟೆಗೆ ಕೃತಕವಾಗಿ ಕಾವನ್ನು ಕೊಟ್ಟು ಮರಿ ಮಾಡುವುದು ಹೇಳಿದಷ್ಟು ಸುಲಭವಲ್ಲ. ಕೃತಕವಾಗಿ ಕಾವನ್ನು ಕೊಡುವಾಗ ಹೆಚ್ಚು ವೈಜ್ಞಾನಿಕ ಜ್ಞಾನವೂ ಕೂಡ ಅಷ್ಟೇ ಅಗತ್ಯವಿರುತ್ತದೆ. ಇನ್ನು ಹಾವಿನ ಮೊಟ್ಟೆಗಳಿಗೆ ಕೃತಕ ಕಾವನ್ನು ಕೊಡುವುದು ಯೋಚಿಸುವಷ್ಟು ಸುಲಭದ ಮಾತಲ್ಲ.
ಆದರೆ ಪುತ್ತೂರಿನ ಉರುಗ ಸಂರಕ್ಷಕರೊಬ್ಬರು ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ ಅದಕ್ಕೆ ಕೃತಕ ಕಾವು ಕೊಟ್ಟು ಮರಿ ಬಂದ ಬಳಿಕ ರಕ್ಷಿತಾರಣ್ಯಕ್ಕೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿಡುತ್ತಿದ್ದಾರೆ. ಇತ್ತೀಚೆಗೆ ಸುಮಾರು 25 ಹೆಬ್ಬಾವಿನ ಮೊಟ್ಟೆಗೆ ಕೃತಕ ಕಾವು ನೀಡಿ ಮರಿ ಹೊರ ಬಂದ ಬಳಿಕ ಜೂ.12ರಂದು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಪುತ್ತೂರು ಬನ್ನೂರು ಕರ್ಮಲದ ಕುಮೇರಡ್ಕ ನಿವಾಸಿ ತೇಜಸ್ ಅವರು ಉರುಗ ಸಂರಕ್ಷಕರಾಗಿದ್ದು, ಅವರು ಇತ್ತೀಚೆಗೆ ಕನ್ಯಾನದಲ್ಲಿ 12 ಮತ್ತು ಅನಂತಾಡಿಯಲ್ಲಿ ಸಿಕ್ಕಿದ 13 ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಸಂರಕ್ಷಣೆ ಮಾಡಿದ್ದರು. ಇದೀಗ 25 ಹೆಬ್ಬಾವಿನ ಮರಿಗಳು ಜನಿಸಿದ್ದು, ಅಷ್ಟು ಹಾವಿನ ಮರಿಗಳಿಗೆ ಪ್ರಾಥಮಿಕ ಆರೈಕೆ ನೀಡಿ. ಜೂ.12ರಂದು ಅದನ್ನು ಉಪ ವಲಯ ಅರಣ್ಯ ಅಧಿಕಾರಿ ಉಲ್ಲಾಸ್ ಮತ್ತು ಸೀತಾರಾಮ್ ಅವರ ಉಪಸ್ಥಿತಿಯಲ್ಲಿ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಕೃತಕ ಕಾವಿನಿಂದ ಹೆಬ್ಬಾವಿನ ಮರಿಗಳು ಹೊರ ಬರುವ ದೃಶ್ಯ ಕ್ಯಾಮರ ಕಣ್ಣಿನಲ್ಲಿ ಸೆರೆಯಾಗಿದೆ.