ಪುತ್ತೂರು: ಒಂದೊಮ್ಮೆ ಕುಂಬ್ರ ಪೇಟೆಗೆ ಬಂದು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಸಿಟಿ ಬಸ್ಸು ಬರದೇ ಕೆಲವು ವರ್ಷಗಳು ಕಳೆದು ಹೋಗಿವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಕೇಳಿಕೊಂಡರೂ ನಾನಾ ಕಾರಣಗಳಿಂದ ಬಸ್ಸು ಬರಲೇ ಇಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಸಿಟಿ ಬಸ್ಸಿನ ಅವಶ್ಯಕತೆ ತುಂಬಾ ಇದೆ. ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಭಾಗಕ್ಕೆ ಸಿಟಿ ಬಸ್ಸಿನ ಅವಶ್ಯಕತೆ ತುಂಬಾ ಇದೆ. ಮುಖ್ಯವಾಗಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಬೆಳ್ಳಾರೆ ಹಾಗೂ ಸುಳ್ಯ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಬಸ್ಸುಗಳಲ್ಲಿ ಜನ ತುಂಬಿಕೊಂಡಿರುವುದರಿಂದ ಕುಂಬ್ರದಿಂದ ಪುತ್ತೂರಿಗೆ ಹೋಗುವ ಬಹಳಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿಯಾದರೂ ಬೆಳಗ್ಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡುವಂತೆ ಕುಂಬ್ರ ವರ್ತಕರ ಸಂಘದ ವತಿಯಿಂದ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಬಡ ವಿದ್ಯಾರ್ಥಿಗಳಿಗೆ ತೊಂದರೆ…!
ಮುಖ್ಯವಾಗಿ ಶಾಲೆಕಾಲೇಜು ತೆರಳುವ ಬಡ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಬೆಳ್ಳಾರೆ, ಸುಳ್ಯ ಮಾರ್ಗದಿಂದ ಬರುವ ಬಸ್ಸುಗಳಲ್ಲಿ ಆವಾಗಲೇ ತುಂಬಾ ರಷ್ ಇರುವುದರಿಂದ ಕುಂಬ್ರ, ಕೊೖಲತ್ತಡ್ಕ, ಪರ್ಪುಂಜ, ಸಂಟ್ಯಾರ್ ಈ ಜಂಕ್ಷನ್‌ಗಳಲ್ಲಿ ಬಸ್ಸಿಗಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳು ತುಂಬಾ ತೊಂದರೆಗೆ ಸಿಲುಕುತ್ತಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಈ ಬಡ ವಿದ್ಯಾರ್ಥಿಗಳ ಮೇಲೆ ಕರುಣೆ ತೋರಿಸಿ ಶೀಘ್ರವೇ ಕುಂಬ್ರಕ್ಕೆ ಸಿಟಿ ಬಸ್ಸಿನ ವ್ಯವಸ್ಥೆ ಮಾಡಿಕೊಡುವಂತೆ ವರ್ತಕ ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಯವರು ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಬಸ್ಸಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯ, ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ ಉಪಸ್ಥಿತರಿದ್ದರು.
ದರ್ಬೆತ್ತಡ್ಕಕ್ಕೆ ಸರಿಯಾಗಿ ಬರುತ್ತಿಲ್ಲ ಬಸ್ಸು…!
ಪುತ್ತೂರಿನಿಂದ ಕುಂಬ್ರ- ಶೇಖಮಲೆ ಮೂಲಕ ಮುಡಾಲ ದರ್ಬೆತ್ತಡ್ಕ ಶಾಲಾ ಬಳಿಗೆ ಬಂದು ಅಲ್ಲಿಂದ ತಿರುಗಿ ಶೇಖಮಲೆ ಮೂಲಕ ಮತ್ತೆ ಪುತ್ತೂರಿಗೆ ಹಾಗೇ ಸಂಟ್ಯಾರು ಉಪ್ಪಳಿಗೆ ರಸ್ತೆ ಮೂಲಕ ದರ್ಬೆತ್ತಡ್ಕ ಶಾಲಾ ಬಳಿಗೆ ಬಂದು ಅಲ್ಲಿಂದ ತಿರುಗಿ ಉಪ್ಪಳಿಗೆ ಮಾರ್ಗವಾಗಿ ಮತ್ತೆ ಪುತ್ತೂರಿಗೆ ತೆರಳುವಂತೆ ಕೆಎಸ್‌ಆರ್‌ಟಿಸಿ ಬಸ್ಸು ಬರುತ್ತಿದೆ. ಇದರಿಂದ ತೀರಾ ಗ್ರಾಮೀಣವಾದ ಈ ಭಾಗದ ಜನರಿಗೆ ಅದರಲ್ಲೂ ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗುತ್ತಿದೆ. ಆದರೆ ಈ ಬಸ್ಸು ಕೆಲವೊಂದು ದಿನಗಳಲ್ಲಿ ಬರದೇ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಬಸ್ಸು ಬರುತ್ತದೆ ಎಂದು ಕಾದು ಕುಳಿತ ವಿದ್ಯಾರ್ಥಿಗಳು ಬಸ್ಸು ಬರದೇ ಇದ್ದಾಗ ತುಂಬಾ ಸಮಸ್ಯೆಯಾಗುತ್ತಿದೆ. ವಾರದ ಕೆಲವೊಂದು ದಿನಗಳಲ್ಲಿ ಏಕಾಏಕಿ ಈ ಬಸ್ಸಿನ ಪತ್ತೆಯೇ ಇರುವುದಿಲ್ಲ ಆದ್ದರಿಂದ ವಾರದ ಎಲ್ಲಾ ದಿನಗಳಲ್ಲೂ ಬಸ್ಸು ದರ್ಬೆತ್ತಡ್ಕಕ್ಕೆ ಬಂದು ಹೋಗುವಾಗೇ ಇರಬೇಕು ಎಂದು ಈ ಭಾಗದ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ
‘ಕುಂಬ್ರ ವರ್ತಕರ ಸಂಘದವರು ಸಿಟಿ ಬಸ್ಸು ಬೇಕು ಎಂಬ ಬೇಡಿಕೆಯ ಮನವಿಯನ್ನು ಕೊಟ್ಟಿದ್ದಾರೆ. ಪ್ರಸ್ತುತ ಚಾಲಕ, ನಿರ್ವಾಹಕ ಕೊರತೆ ಇದ್ದು ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಬಸ್ಸು ಇದ್ದರೂ ಚಾಲಕ, ನಿರ್ವಾಹಕರು ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಕುಂಬ್ರಕ್ಕೆ ಸಿಟಿ ಬಸ್ಸು ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಲಾಗುವುದು.’
- ಜಯಕರ ಶೆಟ್ಟಿ,
ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ಪುತ್ತೂರು