ವಿದ್ಯಾರ್ಥಿಗಳ ಪಾಲಿಗೆ ನೀಟ್ ಹಗರಣ ಬಹು ದೊಡ್ಡ ದುರಂತವಾಗಿದೆ: ಅಶೋಕ್ ರೈ
ಪುತ್ತೂರು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹೆಜ್ಜೆ ಇಡುವಲ್ಲಿ ನಡೆಯುವ ನೀಟ್ ಪರೀಕ್ಷೆಯಲ್ಲೇ ಹಗರಣ ನಡೆದಿದೆ ಎಂದಾದರೆ ಇದು ವಿದ್ಯಾರ್ಥಿ ಹಾಗೂ ಪೋಷಕರ ಪಾಲಿಗೆ ಬಹು ದೊಡ್ಡ ದುರಂತವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ನೀಟ್, ಕೆಸಿಇಟಿ ಮತ್ತು ಜೆಇಇ ಯಲ್ಲಿ ಅತ್ಯಧಿಕ ಅಂಪಡೆದ ವಿದ್ಯಾರ್ಥಿಗಳಿಗೆ ತಮ್ಮ ಕಚೇರಿಯಲ್ಲಿ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಗೌರವಿಸಿ ಸನ್ಮಾನ ಮಾಡಿದರು.
ನಮ್ಮ ಕ್ಷೇತ್ರದಲ್ಲಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವು ಖಂಡಿತವಾಗಿಯೂ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ನಮ್ಮ ಅನೇಕ ವಿದ್ಯಾರ್ಥಿಗಳು ನೀಟ್ ನಲ್ಲಿಯೂ ಉತ್ತಮ ಪಲಿತಾಂಶವನ್ನು ಪಡೆದಿದ್ದಾರೆ. ನೀಟ್ ನಲ್ಲಿ ದೇಶದಲ್ಲಿ ದೊಡ್ಡ ಹಗರಣವೇ ನಡೆದಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೆಂದರೆ ನಮ್ಮ ದೇಶದ ಒಂದು ಭ್ರಷ್ಟತೆಗೆ ಸಾಕ್ಷಿಯಾಗಿದೆ. ಕಷ್ಟಪಟ್ಟು ಓದಿದ ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಿದ್ದು , ಕಲಿಕೆಯಲ್ಲಿ ಏನೂ ಇಲ್ಲದ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವ ಮೂಲಕ ನೀಟ್ ವ್ಯವಸ್ಥೆ ಬಡಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಪ್ರಹಾರ ನಡೆಸಿದೆ ಎಂದು ಹೇಳಿದರು. ನಮ್ಮ ಕ್ಷೇತ್ರದ ಪ್ರತೀಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನನ್ನ ಬೆಂಬಲ ಸದಾ ಇದ್ದು ಏನೇ ಸಹಾಯ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಟ್ರಸ್ಟ್ನ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು ಮಾತನಾಡಿ ಕಣ್ಣಿಗೆ ಕಾಣುವ ಅಭಿವೃದ್ದಿಗಳು ಬೇರೆಯೇ ಇರುತ್ತದೆ, ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಕಣ್ಣಿಗೆ ಕಾಣಿಸಿದ ಅನೇಕ ಅಭಿವೃದ್ದಿ ಕೆಲಸಗಳನ್ನು ಶಾಸಕರು ಸದಾ ಮಾಡುತ್ತಿದ್ದಾರೆ. ರಸ್ತೆ, ನೀರು, ಮೋರಿ ಮಾಡುವುದು ಮಾತ್ರ ಅಭಿವೃದ್ದಿ ಕೆಲಸವಲ್ಲ. ಬಡವರ ಕಣ್ಣೀರೊರೆಸುವುದು ಕೂಡಾ ಅಭಿವೃದ್ದಿಯ ಒಂದು ಭಾಗವಾಗಿದೆ. ಜನರಿಂದ ಆಶೀರ್ವಾದ ಪಡೆಯುತ್ತಿರುವ ಶಾಸಕರು ಪುತ್ತೂರಿನಲ್ಲಿ ಅನೇಕ ಅವಧಿಗೆ ಶಾಸಕರಾಗಿ ಮೆರೆಯಲಿ ಎಂದು ಶುಭ ಹಾರೈಸಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಟ್ರಸ್ಟ್ನ ಪ್ರಮುಖರಾದ ನಿಹಾಲ್ ಪಿ ಶೆಟ್ಟಿ ಮಾತನಾಡಿ ಯುವಕರನ್ನು ವಿಷ ಬೀಜ ಬಿತ್ತುವ ಕೆಲಸಕ್ಕೆ ಬಳಕೆ ಮಾಡುವ ಬದಲು ಅವರಿಗೆ ವಿದ್ಯೆ ಮತ್ತು ಉದ್ಯೋಗವನ್ನು ಕೊಡಿಸುವ ಕೆಲಸವನ್ನು ನಾವು ಪ್ರತೀಯೊಬ್ಬರೂ ಮಾಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಬೇಕು ಅವರು ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಉದ್ದೇಶದಿಂದ ಶಾಸಕರು ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದ್ದಾರೆ, ಅನೇಕ ಉದ್ಯಮವನ್ನು ಪುತ್ತೂರಿಗೆ ತರುತ್ತಿದ್ದಾರೆ ಎಂದು ಹೇಳಿದರು.
15 ವರ್ಷದಲ್ಲಿ ಆಗದ್ದು ನಾಲ್ಕು ತಿಂಗಳಲ್ಲಿ ಆಯ್ತು
ಸಾಮೆತ್ತಡ್ಕ ಸರಕಾರಿ ಹಿ ಪ್ರಾ ಶಾಲೆಯಲ್ಲಿ ಆಂಗ್ಲ ಮಾದ್ಯಮ ಎಲ್ಕೆಜಿ ಯುಕೆಜಿ ತರಗತಿ ಪ್ರಾರಂಭ ಮಾಡಲು ಶಾಲೆಯ ಟ್ರಸ್ಟಿಯವರು ಕಳೆದ 15 ವರ್ಷಗಳಿಂದ ಕಚೇರಿ ಅಲೆದಾಟ ಮಾಡುತ್ತಿದ್ದಾರೆ. ಅನೇಕ ಜನಪ್ರತಿನಿಧಿಗಳ ಬಳಿಯೂ ತೆರಳಿದ್ದರು ಆದರೆ ಯಾರಿಂದಲೂ ಆ ಕೆಲಸ ಆಗಿರಲಿಲ್ಲ. ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ರು ಅವರು ಶಾಸಕ ಅಶೋಕ್ ರೈಯವರಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿದ ನಾಲ್ಕೇ ತಿಂಗಳಲ್ಲಿ ಸಾಮೆತ್ತಡ್ಕ ಶಾಲೆಗೆ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸರಕಾರದಿಂದ ಮಾನ್ಯತೆ ಸಿಕ್ಕಿದೆ ಎಂದು ನಿಹಾಲ್ ಪಿ ಶೆಟ್ಟಿಯವರು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಮುರಳೀಧರ್ ರೈ ಮಟಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಪಂಜಿಗುಡ್ಡೆ ಈಶ್ವರಭಟ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಟ್ರಸ್ಟ್ ಪ್ರಮುಖರಾದ ಯೋಗಿಶ್ ಸಾಮಾನಿ ವಂದಿಸಿದರು. ಸಿಬಂದಿಗಳಾದ ಲಿಂಗಪ್ಪ ಮತ್ತು ರಚನಾ ಕಾರ್ಯಕ್ರಮ ನಿರೂಪಿಸಿದರು.