ಪುತ್ತೂರು: 2023ರ ಆ.11ರಂದು ಕರಾವಳಿಯಾದ್ಯಂತ ಬಿಡುಗಡೆಗೊಂಡು ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿ ಉತ್ತಮ ಪ್ರದರ್ಶನ ನೀಡಿದ ಶಿವಧ್ವಜ್ ಶೆಟ್ಟಿ ನಿರ್ದೇಶನದ ಕಲಾತ್ಮಕ ತುಳು ಚಲನಚಿತ್ರ “ಕೊರಮ್ಮ” ಉತ್ತಮ ಚಲನಚಿತ್ರ, ಉತ್ತಮ ನಟ ಹಾಗೂ ಉತ್ತಮ ನಿರ್ದೇಶಕ ಪ್ರಶಸಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಜೂ.16ರಂದು ಮುಲ್ಕಿ ಸುಂದರರಾಮ್ ಶೆಟ್ಟಿ ಕನ್‌ವೆನ್‌ಷನಲ್ ಸೆಂಟರ್‌ನಲ್ಲಿ ಹಲವಾರು ಗಣ್ಯರು, ತುಳು ಚಲನಚಿತ್ರರಂಗದ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು, ಗಾಯಕರು, ತಾಂತ್ರಿಕ ವರ್ಗದವರೆಲ್ಲರ ಉಪಸ್ಥಿತಿಯಲ್ಲಿ ನೃತ್ಯ, ಮನೋರಂಜನೆ, ಸಂಗೀತ ಮುಂತಾದ ಸಾಂಸ್ಕ್ರತಿಕ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ನಡೆದ “ಕೋಸ್ಟಲ್ ಫಿಲ್ಮ್ ಅವಾರ್ಡ್-2024” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಶಿವಧ್ವಜ್ ಶೆಟ್ಟಿ, ಉತ್ತಮ ಚಲನಚಿತ್ರ ಪ್ರಶಸ್ತಿಯನ್ನು ನಿರ್ಮಾಪಕರಾದ ಈಶ್ವರಿದಾಸ್ ಶೆಟ್ಟಿ ಮತ್ತು ಅಡ್ಯಾರ್ ಮಾಧವ ನಾಯಕ್ ಹಾಗೂ ಉತ್ತಮ ನಟ ಪ್ರಶಸ್ತಿಯನ್ನು ಮೋಹನ್ ಶೆಣೈ ಸ್ವೀಕರಿಸಿದರು.
ಕೆನಡ, ಆಸ್ಟ್ರೇಲಿಯದಲ್ಲಿ ಪ್ರದರ್ಶನ ಕಂಡ ಚಿತ್ರ ಸದ್ಯದಲ್ಲೆ ಮುಂಬೈ ಹಾಗೂ ದುಬಾನಲ್ಲಿ ಪ್ರದರ್ಶನಗೊಳ್ಳಲಿದೆ ಪ್ರದರ್ಶನ ಕಂಡಲ್ಲೆಲ್ಲ ತನ್ನದೆ ಹವಾ ನಿರ್ಮಿಸಿಕೊಂಡು ಕಮರ್ಷಿಯಲ್ ಚಿತ್ರಗಳಿಗೆ ಪೈಪೋಟಿಯನ್ನು ನೀಡಿ ಬೆಂಗಳೂರು, ಅಸ್ಸಾಮ್, ಜೌರಂಗಬಾದ್ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಎಲ್ಲರಿಂದ ಪ್ರಶಂಸೆ ಹಾಗೂ ಪ್ರಶಸ್ತಿಯನ್ನು ಪಡೆದುಕೊಂಡು ತುಳುನಾಡ ಸಂಸ್ಕ್ರತಿಯನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯವನ್ನು ಈ ಚಿತ್ರ ಸದ್ದಿಲ್ಲದೆ ಮಾಡಿದೆ.
ಇಂತಹ ಪ್ರಶಸ್ತಿಗಳು ದೊರೆತಾಗ, ಪ್ರೇಕ್ಷಕರಿಂದ ಮೆಚ್ಚುಗೆಯ ನುಡಿಯನ್ನು ಕೇಳಿದಾಗ ಇನ್ನೂ ಚೆನ್ನಾಗಿರುವ ಚಿತ್ರಗಳನ್ನು ನಿರ್ಮಿಸಿ ನಮ್ಮ ಸಂಸ್ಕ್ರತಿ, ಭಾಷೆ, ಅಭಿರುಚಿ, ಜೀವನ ಶೈಲಿಯನ್ನು ಹೇಗೆ ಜಗತ್ತಿನಾದ್ಯಂತ ಪರಿಚಯಿಸಬಹುದೆಂಬ ನನ್ನ ಆಸೆಗೆ ಇನ್ನು ಹೆಚ್ಚಿನ ಜೀವ ತುಂಬಿದಂತಾಗುತ್ತದೆ. ಈ ಯಶಸ್ಸಿಗೆ ನನ್ನ ತಂಡದ ಶ್ರಮವೇ ಕಾರಣ, ನನ್ನ ತಂಡದ ಬಗ್ಗೆ ಹೆಮ್ಮೆ ಎನಿಸುತ್ತದೆ. ನನ್ನದು ನೇತೃತ್ವ ಮಾತ್ರ
ಶಿವಧ್ವಜ್ ಶೆಟ್ಟಿ
ಚಿತ್ರ ನಿರ್ದೇಶಕ