ನೆಲ್ಯಾಡಿ: ಇಚ್ಲಂಪಾಡಿ ನೇರ್ಲ ನಿವಾಸಿ ರವಿ ಗೌಡ ಎಂಬವರ ಮನೆಯಿಂದ ಔಷಧಿ ಸಿಂಪಡಿಸುವ ಹಾಗೂ ಕಳೆ ತೆಗೆಯುವ ಯಂತ್ರ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳಿಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಜು.24ರಂದು ನಡೆದಿದೆ.
ರವಿ ಗೌಡ ಅವರ ಮನೆಗೆ ಸ್ಕೂಟಿಯಲ್ಲಿ ಬಂದ ಪೇರಡ್ಕ ಹಾಗೂ ನಿಂತಿಕಲ್ ನಿವಾಸಿಗಳಿಬ್ಬರು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ರವಿ ಗೌಡ ಅವರ ಮನೆಯಲ್ಲಿದ್ದ ಔಷಧಿ ಸಿಂಪಡಿಸುವ ಹಾಗೂ ಕಳೆ ತೆಗೆಯುವ ಯಂತ್ರವನ್ನು ಸ್ಕೂಟಿಯಲ್ಲಿರಿಸಿಕೊಂಡು ಹೊರಡಲು ಮುಂದಾಗಿದ್ದರು. ಆದರೆ ಈ ವೇಳೆ ರವಿ ಗೌಡ ಅವರು ಮನೆಗೆ ಬಂದಿದ್ದು ಇಬ್ಬರನ್ನು ಪ್ರಶ್ನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಪಕ್ಕದ ಹೋಟೆಲ್‌ನಲ್ಲಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಹಾಗೂ ಇತರೇ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಠಾಣೆಗೆ ಕರೆದೊಯ್ಯಿದ್ದಾರೆ ಎಂದು ವರದಿಯಾಗಿದೆ. ರವಿ ಗೌಡ ಅವರ ತೋಟ ಲೀಸಿಗೆ ಇದೆ ಎಂದು ನಂಬಿಸಿ ಪೇರಡ್ಕ ನಿವಾಸಿ ನಿಂತಿಕಲ್ ನಿವಾಸಿಯನ್ನು ಕರೆದುಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ರವಿ ಗೌಡ ಅವರು ತೋಟ ಲೀಸಿಗೆ ಕೊಡುವುದಾಗಿ ಎಲ್ಲಿಯೂ ಹೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವರ ಕೃತ್ಯದ ಬಗ್ಗೆ ಅನುಮಾನವಿದ್ದು ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.