ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

0

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಪುತ್ತೂರು ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.28ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್ ಮಾತನಾಡಿ, ನಲವತ್ತೇಳು ವರ್ಷಗಳ ಇತಿಹಾಸವಿರುವ ಸಂಘದ ಅಧ್ಯಕ್ಷನಾಗುವ ಅವಕಾಶ ನನಗೆ ದೊರೆತಿದೆ. ಸಂಘದ ಮುಖಾಂತರ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಹಬ್ಬಗಳ ಆಚರಣೆ, ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಭಾ ಭವನದ ಗ್ರಾನೈಟ್ ಅಳವಡಿಕೆ, ಶಾಸಕರ ಅಭಿನಂಧನೆ, ಸಂಘದ ಕಚೇರಿಯಲ್ಲಿ ಸಂವಿಧಾನ ಪೀಠಿಕೆ ಅವಡಿಕೆ, ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಂಘದ ಕಾರ್ಯಕ್ರಮದಲ್ಲಿ ಎಲ್ಲರ ಸಹಕಾರ ದೊರೆತಿದೆ. ಸಂಘಟನೆ ಬಲಿಷ್ಠಗೊಳಿಸಲು ಸಮಾಜ ಬಾಂಧವರ ಸಹಕಾರ ಅಗತ್ಯ. ಸಂಘದ ಅಭಿವೃದ್ಧಿಯ ದೃಷ್ಠಿಯಿಂದ ಇನ್ನಷ್ಟು ತೊಡಗಿಸಿಕೊಳ್ಳಬೇಕು. ಆಜೀವ ಸದಸ್ಯತ್ವವನ್ನು ಪಡೆಯಬೇಕು. ವಿದ್ಯಾನಿಧಿಗೆ ಸಹಕಾರ ನೀಡಬೇಕು ಎಂದ ಅವರು ಮೂಡಬಿದರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ವಿನಂತಿಸಿದರು.


ಠರಾವು ಮಂಡನೆ:
ಮರಾಟಿ ಸಮಾಜದ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದಂಶ ಏರಿಕೆ ಮಾಡಬೇಕು ಹಾಗೂ ವಿದ್ಯಾರ್ಥಿ ವೇತನವನ್ನು ಕ್ಲಪ್ತ ಸಮಯದಲ್ಲಿ ವಿತರಣೆಯಾಗಬೇಕು ಎಂದು ಸರಕಾರಕ್ಕೆ ಮನವಿ ಮಾಡುವುದಾಗಿ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನೂತನ ಕಾರ್ಯಕಾರಿ ಸಮಿತಿ ರಚನೆ:
ಸಂಘದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಗೆ ವಿವಿಧ ಗ್ರಾಮಗಳಿಂದ 20 ಮಂದಿ ನಗರದಿಂದ 16 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಂಘದ ಮಾಜಿ ಅಧ್ಯಕ್ಷ ಸುಂದರ ನಾಯ್ಕ, ಲ್ಯಾಂಪ್ಸ್ ಸಹಕಾರಿ ಸಂಘದ ನಿರ್ದೇಶಕ ಪೂವಪ್ಪ ನಾಯ್ಕ ಕುಂಞಕುಮೇರು ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ನವೀಕೃತ ವೇದಿಕೆ ಉದ್ಘಾಟನೆ:
ಮರಾಟಿ ಸಮಾಜ ಮಂದಿರದ ಸಭಾ ಭವನದ ಗ್ರಾನೈಟ್ ಅಳವಡಿಸಿ ನವೀಕೃತಗೊಳಿಸಿದ ವೇದಿಕೆಯನ್ನು ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಉದ್ಘಾಟಿಸಲಾಯಿತು. ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್ ನವೀಕೃತ ವೇದಿಕೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಅ.20 ಮೂಡಬಿದರೆಯಲ್ಲಿ ಸಮಾವೇಶ:
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಮರಾಟಿ ಸಮಾಜದ `ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶವು ಅ.20ರಂದು ಮೂಡಬಿದರೆ ಆಳ್ವಾಸ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಮಾವೇಶದ ಪ್ರಧಾನ ಕಾರ್ಯದರ್ಶಿ ಶಂಕರ್ ನಾಯ್ಕ ಸಭೆಗೆ ಮಾಹಿತಿ ನೀಡಿದರು.
ಅಧ್ಯಕ್ಷ ಮಂಜುನಾಥ ಎನ್.ಎಸ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕುಮಾರ್ ಬಲ್ನಾಡು ವರದಿ ವಾಚಿಸಿದರು. ಖಜಾಂಚಿ ಬಾಬು ನಾಯ್ಕ ತೆಂಕಿಲ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ ಮೂಡಬಿದರೆಯಲ್ಲಿ ನಡೆಯಲಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶದ ಸ್ಮರಣ ಸಂಚಿಕೆಯ ಬಗ್ಗೆ ಮಾಹಿತಿ ನೀಡಿದರು. 

LEAVE A REPLY

Please enter your comment!
Please enter your name here