ಪುತ್ತೂರು: ಪುತ್ತೂರು ತಾಲೂಕು ಉಪ್ಪಿನಂಗಡಿ ಹೋಬಳಿಯ ಪಡ್ನೂರು ಗ್ರಾಮದ ಬೇರಿಕೆ ಎಂಬಲ್ಲಿ ಬೃಹತ್ ಗುಡ್ಡವೊಂದು ಭಾರೀ ಮಳೆಯಿಂದಾಗಿ ಕುಸಿದಿದೆ. ಗುಡ್ಡ ಕುಸಿದ ಪರಿಣಾಮ ಸ್ಥಳೀಯ 3 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಕುಸಿದ ಗುಡ್ಡದ ಮಣ್ಣಿನ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು ಸೇಡಿಯಾಪು-ಬೇರಿಕೆ-ಪಡ್ನೂರು ಸಂಪರ್ಕ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಕುಸಿದ ಗುಡ್ಡದ ಇನ್ನೊಂದು ಬದಿಯ ಬಂಟ್ವಾಳ ತಾಲೂಕಿನ ಪೆರ್ನೆ ಸಂಪರ್ಕ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ರಸ್ತೆಯ ಬಳಕೆದಾರರು ಪರ್ಯಾಯವಾಗಿ ಉಪ್ಪಿನಂಗಡಿಯಿಂದ ಪುತ್ತೂರು ಸಂಪರ್ಕ ರಸ್ತೆಯನ್ನು ಬಳಸುವಂತೆ ಪುತ್ತೂರು ಉಪ ವಿಭಾಗೀಯ ದಂಡಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತ ಜುಬಿನ್ ಮೋಹಪಾತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.