ಆಷಾಢ ಮಾಸದ ವಿಶೇಷ

0

ಆಷಾಢ ಮಾಸದ ವಿಶೇಷ ( ಆಟಿ ಅಮಾವಾಸ್ಯೆ )ವಿಭಿನ್ನ ಸಂಪ್ರದಾಯಗಳನ್ನು ಹೊಂದಿರುವ ತುಳುನಾಡು ಆಷಾಢ ಮಾಸಕ್ಕೆ ( ಆಟಿ ತಿಂಗಳಿಗೆ ) ವಿಶೇಷ ಮಾನ್ಯತೆಯನ್ನು ನೀಡುತ್ತಾ ಬಂದಿದೆ.
” ಆಷಾಢ ಮಾಸ ಬಂದಿತವ್ವ ಅಣ್ಣ ಬರಲಿಲ್ಲ ಕರಿಯಾಕ ” ಆಷಾಢ ಮಾಸ ಬಂತೆಂದರೆ ಸಾಕು ಜನರ ಮನಸ್ಸಲ್ಲಿ ಒಂದು ರೀತಿಯ ತಳಮಳ, ಆತಂಕ.ಯಾಕೆಂದರೆ ಈ ತಿಂಗಳು ನಿಧಾನವಾಗಿ ಸಾಗುತ್ತದೆ. ಒಮ್ಮೆ ಕಳೆದರೆ ಸಾಕು ಎನ್ನುವ ಹಾಗೆ ಒಂದು ಕಡೆಯಲ್ಲಿ ಧೋ ಧೋ ಎಂದು ಸುರಿಯುವ ಜೋರಾದ ಮಳೆ ಇನ್ನೊಂದು ಕಡೆಯಲ್ಲಿ ಮಳೆ ಬಾರದೆ ಹೆಚ್ಚಾದ ಬಿಸಿಲು. ಆಡು ಮಾತೊಂದಿದೆ ಆಟಿ ತಿಂಗಳ ಬಿಸಿಲಿಗೆ ಆನೆಯ ಬೆನ್ನು ಒಡೆಯಬಹುದು ( ಆಟಿ ತಿಂಗೊಲ್ದ ದೊಂಬುಗು ಆನೆದ ಬೆರಿಲಾ ಪುಡಾವು ) ಅಂದರೆ ಅಷ್ಟೊಂದು ಜೋರು ಬಿಸಿಲು ಹಾಗಾಗಿ ಈ ಮಾಸದಲ್ಲಿ ರೋಗ ರುಜಿನಗಳು ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲಿ ಹೆಚ್ಚು ಹೆಚ್ಚು ಸೊಪ್ಪು ತರಕಾರಿಗಳನ್ನು ತಿನ್ನಬೇಕು ಎಂದು ನಮ್ಮ ಹಿರಿಯರು ಮಾಡಿಕೊಂಡು ಬಂದ ಕಟ್ಟಿದೆ. ಅದೇ ಪ್ರಕಾರ ಹಳ್ಳಿಯ ಜನ ಈಗಲೂ ತಜಂಕ್, ನುಗ್ಗೆ ಸೊಪ್ಪು, ಮೆಂತೆ ಸೊಪ್ಪು, ಕಣಿಲೆ ಗಸಿ, ಹಲಸಿನ ಬೀಜ ಸುಕ್ಕ, ಸೊಪ್ಪಿನ ಪಲ್ಯ, ತಿಮರೆದ ಚಟ್ನಿ, ಚೇವುದಿರೆ, ಪತ್ರೊಡೆ ಹಲಸಿನ ಗಟ್ಟಿ, ಅರಶಿಣ ಎಲೆಯ ತಿಂಡಿ ಹೀಗೆ ತರತರದ ತಿಂಡಿಗಳನ್ನು ತಯಾರಿಸಿ, ಮನೆಯೊಳಗೇ ಕುಳಿತು ತಿನ್ನುವುದು. ಆಟಿ ತಿಂಗಳಲ್ಲಿ ವಿಶೇಷವಾಗಿ ಭೂತಗಳಿಗೆ ಬಡಿಸುವ ಸಂಪ್ರದಾಯವಿದೆ.


ಆಟಿ ಕಳಂಜ
ಭೂಮಿಗೆ ಬಂದ ರೋಗರುಜಿನಗಳನ್ನು ದೂರಮಾಡಲು ಆಟಿ ಕಲೆಂಜನು ಬರುವುದು. ಮನೆ ಮನೆಗೆ ಬಂದು ದವಸ ಧಾನ್ಯ ಪಡೆದುಕೊಳ್ಳುವುದು. ಆಟಿ ಕಲೆಂಜ ಊರಿಗೆ ಬಂದ ಮಾರಿಯನ್ನು ದೂರ ಮಾಡುತ್ತಾನೆ ಎಂಬ ನಂಬಿಕೆಯು ಜನರಲ್ಲಿದೆ.ಆಟಿ ಕುಲ್ಲುನೆ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ತವರು ಮನೆಗೆ ಹೋಗಿ ಕುಳಿತು ಬರುವುದು. ಹೆಣ್ಣು ಮಗಳೋರ್ವಳು ತನ್ನ ಗಂಡನ ಮನೆಯಲ್ಲೇ ಇದ್ದು ಆಟಿ ತಿಂಗಳ ಸಮಯದಲ್ಲಿ ವಿಶೇಷವಾಗಿ ಆಟಿ ಕುಲ್ಯೆರೆ ಎಂಬ ಹಾಗೆ ತಾಯಿ ಮನೆಗೆ ಹೋಗಿ ಒಂದಿಷ್ಟು ಸಮಯ ತನ್ನ ಕಷ್ಟ ನಷ್ಟ, ಇಷ್ಟಗಳನ್ನು ಅಣ್ಣ ತಂಗಿಯರ ಜೊತೆಗೆ ಹಂಚಿಕೊಳ್ಳುತ್ತಾಳೆ.ಇನ್ನೊಂದು ವಿಶೇಷ ದಿನವೇ ಆಟಿ ಅಮಾವಾಸ್ಯೆ ಈ ಅಮಾವಾಸ್ಯೆಯಂದು ಜನರು ಹಾಲೆ ಮರದ ಕಷಾಯ ಕುಡಿಯುವ ಪದ್ಧತಿಯನ್ನು ಬಹಳ ಹಿಂದಿನಿಂದಲೇ ಆಚರಿಸಿಕೊಂಡು ಬಂದಿದ್ದಾರೆ. ಮುಂಚಿನ ದಿನವೇ ಕಾಡಿನಲ್ಲಿರುವ ಹಾಲೆ ಮರವನ್ನು ಗುರುತಿಸಿ ಅದಕ್ಕೆ ಒಂದು ನೂಲನ್ನು ಕಟ್ಟಿ ಕಾಣಿಕೆಯನ್ನು ಕೊಟ್ಟು ನಾಳೆಗೆ ಒಳ್ಳೆಯ ಔಷಧಿಯನ್ನು ಕೊಡು ಎಂದು ಪ್ರಾರ್ಥಿಸಿ ಬರುವುದು. ಮರುದಿನ ಮುಂಜಾನೆ ಬೇಗನೆ ಎದ್ದು ಹಾಲೆ ಮರದ ಬಳಿಗೆ ಹೋಗಿ ಯಾವುದೇ ಆಯುಧಗಳನ್ನು ಬಳಸದೆ ಕಲ್ಲಿನಿಂದ ಜಜ್ಜಬೇಕು. ಅದರಲ್ಲಿ ಸಿಗುವ ಹಾಲೆ ಮರದ ಕೆತ್ತೆ ಯನ್ನು ತಂದು ಅದರ ಮೇಲಿನ ಸಿಪ್ಪೆಯನ್ನು ತೆಗೆದು ಅದಕ್ಕೆ ಒಳ್ಳೆ ಮೆಣಸು ಬೆಳ್ಳುಳ್ಳಿ ಇತ್ಯಾದಿಗಳನ್ನು ಸೇರಿಸಿ ಕಡೆಯುವ ಕಲ್ಲಿನಲ್ಲಿ ಚೆನ್ನಾಗಿ ಅರೆದು ರಸ ತೆಗೆಯುತ್ತಾರೆ. ನಂತರ ಮನೆಯ ಹತ್ತಿರದಲ್ಲಿ ಸಿಗಬಹುದಾದ ಬೊಲ್ಲು ಕಲ್ಲನ್ನು ತಂದು ಒಲೆಯಲ್ಲಿ ಹಾಕಿ ಚೆನ್ನಾಗಿ ಬಿಸಿ ಮಾಡುತ್ತಾರೆ. ಬಿಸಿಯಾದ ಬೊಲ್ಲು ಕಲ್ಲನ್ನು ರಸವನ್ನು ತುಂಬಿದ ಪಾತ್ರೆಗೆ ಹಾಕಿದಾಗ ಅದರೊಳಗೆ ಇರುವ ರಸವೂ ಉಗುರು ಬೆಚ್ಚನೆ ಬಿಸಿಯಾಗುತ್ತದೆ ಹೀಗೆ ಕಾಯಿಸಿದ ರಸವನ್ನು ಮನೆಮಂದಿಯೆಲ್ಲಾ ಕುಡಿಯುವ ಮತ್ತು ನೆರೆಮನೆಯವರಿಗೂ ಹಂಚುವ ಸಂಪ್ರದಾಯ ನಮ್ಮ ಹಿರಿಯರಿಂದ ಮುಂದುವರಿದುಕೊಂಡು ಬಂದಿದೆ. ಈ ಕಷಾಯವನ್ನು ಆಷಾಢ ಮಾಸದಲ್ಲಿ ಕುಡಿಯುವುದರಿಂದ ರೋಗ ರುಜಿನಗಳು ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ. ಇದು ವೈಜ್ಞಾನಿಕವಾಗಿಯೂ ಸತ್ಯವಾಗಿದೆ.ಹಾಗೆಯೇ ಕಷಾಯ ಕುಡಿದ ನಂತರದಲ್ಲಿ ದೇಹಕ್ಕೆ ತಂಪು ಮಾಡುವ ಕಾರಣದಿಂದ ಮೆಂತೆ ಗಂಜಿ ಮಾಡಿ ಉಣ್ಣುವುದನ್ನು ಮಾಡುತ್ತಾರೆ. ಒಟ್ಟಿನಲ್ಲಿ ಆಷಾಢ ಮಾಸವು ಪ್ರಮುಖಹಬ್ಬಗಳಿಗೆ, ಉಪವಾಸ ವ್ರತಗಳಿಗೆ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದಲೂ ಬಹಳ ವಿಶೇಷ ತಿಂಗಳು. ಯಾಕೆಂದರೆ ಈ ತಿಂಗಳಲ್ಲಿ ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಜಾರುವ ಸಮಯ. ಜೊತೆಯಲ್ಲಿ ಸನ್ಯಾಸವನ್ನು ಸ್ವೀಕರಿಸಿದ ಯತಿಗಳು ಚಾತುರ್ಮಾಸ್ಯ ಆಚರಿಸುವ ಪದ್ಧತಿಯು ಸಂಪ್ರದಾಯವಾಗಿ ಬೆಳೆದುಬಂದಿದೆ. ಈ ಮಾಸದಲ್ಲಿ ನಿಶ್ಚಿತಾರ್ಥ, ಮದುವೆ, ಗ್ರಹಪ್ರವೇಶ ಮುಂತಾದ ಶುಭಕಾರ್ಯಗಳಿಗೆ ನಿಶಿದ್ಧವಾಗಿದ್ದರೂ ದೇವತಾ ಆರಾಧನೆಗೆ ಮಹತ್ವ ನೀಡಲಾಗಿದೆ. ಹೀಗೆ ತುಳುನಾಡಿನ ಪ್ರತಿಯೊಂದು ಆಚರಣೆಯಲ್ಲೂ ಅದರದ್ದೇ ಆದ ಮಹತ್ವವನ್ನು ಕಾಣುತ್ತೆವೆ.ಆದುದರಿಂದ ಇಂತಹ ಆಚರಣೆಗಳ ಬಗ್ಗೆ ಮುಂದಿನ ಯುವ ಪೀಳಿಗೆಯ ಜನರಿಗೂ ಅರಿವನ್ನು ಮೂಡಿಸೋಣ…….
ಬರಹ: ಸತೀಶ್ ಇರ್ದೆ, ಕನ್ನಡ ಉಪನ್ಯಾಸಕರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ,ಪುತ್ತೂರು

LEAVE A REPLY

Please enter your comment!
Please enter your name here