ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಬಾಂಗ್ಲಾದಲ್ಲಿನ ಹಿಂದೂ ದೌರ್ಜನ್ಯದ ವಿರುದ್ಧ ಪ್ರತಿಭಟನೆ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಹಾಗೂ ವಿರೋಧಿ ಶಕ್ತಿಗಳ ಪ್ರತಿಕೃತಿ ದಹನ ಶುಕ್ರವಾರ ನಡೆಯಿತು.

ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಈ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಉಪನ್ಯಾಸಕ ಆದರ್ಶ ಗೋಖಲೆ ಇಂದು ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂ ದೌರ್ಜನ್ಯ ನಾಳೆ ಭಾರತದಲ್ಲೂ ನಡೆದರೆ ಅಚ್ಚರಿಯಿಲ್ಲ. ಇದನ್ನು ತಡೆಯಬೇಕಾದರೆ ಹಿಂದೂಗಳೆಲ್ಲರೂ ಒಂದಾಗಿ ಜಾಗೃತಿ ಮೂಡಿಸಿಕೊಳ್ಳಬೇಕು. ಮತೀಯವಾದಿಗಳ ವಿರುದ್ಧ ನಿರ್ದಾಕ್ಷಿಣ್ಯ ಹೋರಾಟ ನಡೆಸಬೇಕು ಎಂದರು.


ಬಾಂಗ್ಲಾ ವಿಮೋಚನಾ ಸಂದರ್ಭದಲ್ಲಿ 22 ಶೇಕಡಾದಷ್ಟಿದ್ದ ಹಿಂದೂಗಳ ಸಂಖ್ಯೆ ಇಂದು ಇದೇ ಬಾಂಗ್ಲಾದಲ್ಲಿ 7 ಶೇಕಡಾಕ್ಕಿಳಿದಿದೆ. ಹಾಗಾದರೆ ಉಳಿದ ಹಿಂದೂಗಳು ಎಲ್ಲಿ ಹೋದರು ಎಂಬುದನ್ನು ಪ್ರಶ್ನೆ ಮಾಡಬೇಕಿದೆ. ಇಂದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಿಂದೂರಾಷ್ಟ್ರ ಭಾರತಕ್ಕೆ ಓಡಿ ಬಂದ ಬಾಂಗ್ಲಾದ ಮಾಜಿ ಪ್ರಧಾನಿ ಶೇಕ್ ಹಸೀನ ಆಡಳಿತ ಸಹಿತವಾಗಿ ಎಲ್ಲರ ಆಡಳಿತ ಕಾಲದಲ್ಲೂ ಬಾಂಗ್ಲಾದಲ್ಲಿ ಹಿಂದೂಗಳ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಟ್ಟ ಬಟ್ಟೆಯಲ್ಲಿ ಅವರ ಮನೆಯಿಂದ ಹೊರಗಟ್ಟಲಾಗಿದೆ. ಇದನ್ನು ಭಾರತದಲ್ಲಿನ ಹಿಂದೂಗಳು ಪಾಠವಾಗಿ ಪರಿಗಣಿಸಬೇಕು ಎಂದು ನುಡಿದರು.


ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಕ್ಷಿತಾ ಕಾರ್ಯಕ್ರಮ ನಿರ್ವಹಿಸಿ ಬಾಂಗ್ಲಾದ ನಮ್ಮ ಸೋದರರ ಮೇಲೆ ಘೋರ ಅಪಚಾರ ನಡೆಯುತ್ತಿದೆ. ಇದನ್ನು ಪ್ರತಿಭಟಿಸುವುದು ಯುವಸಮೂಹದ ಜವಾಬ್ದಾರಿ. ದುಷ್ಟ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ನಿಯೋಜಿತ ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ತರುವಾಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹಸ್ರಾರು ವಿದ್ಯಾರ್ಥಿಗಳೆಲ್ಲರೂ ಜತೆಗೂಡಿ ಹಿಂದೂ ವಿರೋಧಿ ಶಕ್ತಿಗಳ ಪ್ರತಿಕೃತಿಗೆ ಬೆಂಕಿಯಿಟ್ಟು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here