ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ- ಪ್ರಸಾದ ರೂಪದಲ್ಲಿ ಸೀರೆ ವಿತರಣೆ

0

ನಿರೀಕ್ಷಗೂ ಮೀರಿ ಆಗಮಿಸಿದ ಭಕ್ತರಿಂದಾಗಿ ಸೇವಾ ರಶೀದಿ ಮುಗಿದರೂ ಪ್ರಸಾದ ವಿತರಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ, ವರಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸಕೇಂದ್ರ ಪುತ್ತೂರು ಘಟಕದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಆ.16ರಂದು ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಗೆ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಸೇವಾ ರಶೀದಿಯೇ ಖಾಲಿಯಾದ ಹಿನ್ನಲೆಯಲ್ಲಿ ಆಗಮಿಸಿದ ಎಲ್ಲಾ ಭಕ್ತರಿಗೂ ಪ್ರಸಾದ ವಿತರಣೆ ಮಾಡಲಾಯಿತು.
ವೇ ಮೂ ಹರಿಪ್ರಸಾದ ವೈಲಾಯ ಅವರ ನೇತೃತ್ವದಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು.


ಧಾರ್ಮಿಕ ಕಾರ್ಯಕ್ಕೆ ದೇವಳದಿಂದ ಪೂರ್ಣ ಸಹಕಾರ :
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಎಚ್ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧಾರ್ಮಿಕ ವಿಚಾರದಲ್ಲಿ ದೇವಸ್ಥಾನ ಪೂರ್ಣ ಸಹಕಾರ ನೀಡುತ್ತದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಕಳೆದ 17 ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವರಮಹಾಲಕ್ಷ್ಮೀಯಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ಭಕ್ತಿಯ ಪ್ರಧಾನವಾಗಿದೆ ಎಂದರು.


ಗೌರವದ ಬದುಕಿನ ಜೊತೆ ಮೋಕ್ಷ ಪ್ರಾಪ್ತಿಗೆ ಒಳ್ಳೆಯ ಕೆಲಸ:
ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣ ವಿನಯಚಂದ್ರ ಧಾರ್ಮಿಕ ಉಪನ್ಯಾಸ ನೀಡಿದರು. ಮನುಷ್ಯ ಜನ್ಮ ಇನ್ನಷ್ಟು ಉನ್ನತಿಗೆ ಹೋಗಲು ಭಕ್ತಿಯ ಪರಾಕಾಷ್ಟೆ ಇರಬೇಕು. ಇದರೊಂದಿಗೆ ನಾನು, ನನ್ನದು ಸೇರಿದಂತೆ ಬರೇ ಗೌರವದ ಬದುಕಿನ ಜೊತೆ ಬದುಕುವುದು ಮಾತ್ರವಲ್ಲ ಮೋಕ್ಷ ಪ್ರಾಪ್ತಿಗಾಗಿ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ದ್ವೇಷ ಬಿಟ್ಟು ಸಮಾಜ ಮುಖಿ ಚಿಂತನೆ ಮಾಡುವ ಪ್ರೇರಣೆ ಮಹಾಲಕ್ಷ್ಮೀ ಅನುಗ್ರಹಿಸಲಿ ಎಂದರು.


ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ದೇವರ ಅನುಗ್ರಹವಿರಲಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡ್ಯಾಶ್ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕಿ ನಳಿನಿ ಪಿ ಶೆಟ್ಟಿ ಅವರು ಮಾತನಾಡಿ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮದ ಆಯೋಜನೆ ಮಾಡಿರುವುದು ಸುಲಭವಲ್ಲ. ಅಂತಹ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ದೇವರ ಅನುಗ್ರಹ ಸದಾ ಇರಲಿ ಎಂದರು.


ಪೂಜಾ ಸೇವಾ ರಶೀದಿ ಮಾಡಿಸಿದವರಿಗೆ ಸೀರೆ ವಿತರಣೆ :
ಮಾಜಿ ಶಾಸಕಿ ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷೆ ಶಕುಂತಳಾ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳಾ ಸಂಘಟನೆ ಮಾಡುವ ಉದ್ದೇಶದಿಂದ ಸ್ವಾಭಿಮಾನಿಯ ಮೂಲಕ 2008ರಲ್ಲಿ ಇಲ್ಲಿ ವರಮಹಾಲಕ್ಷ್ಮೀ ಪೂಜೆ ಆರಂಭಿಸಿದ್ದೆವು. ಅದರ ಮೊದಲು ಎರಡು ವರ್ಷ ಅರುಣ್ ಕುಮಾರ್ ಪುತ್ತಿಲ ಪೂಜೆ ಮಾಡಿಸುತ್ತಿದ್ದರು. ಅವರು ಇದನ್ನು ನಮಗೆ ಮುಂದುವರಿಸಲು ಸಮರ್ಪಣೆಗೆ ಸಮರ್ಪಿಸಿದರು. ಅವತ್ತಿನಿಂದ ಇವತ್ತಿನ ತನಕ ನಾವು ಪೂಜೆ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಪೂಜೆಗೆ ಅವತ್ತಿನಿಂದ ಇವತ್ತಿನ ತನಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ಣ ಸಹಕಾರವಿದೆ. ಪ್ರತಿ ವರ್ಷ ಏಳುನೂರರಿಂದ ಎಂಟುನೂರರ ತನಕ ಸೇವಾ ರಶೀದಿ ಖಾಲಿ ಆಗುತ್ತಿತ್ತು. ಈ ವರ್ಷ ಅದು ನಿರೀಕ್ಷೆಗೂ ಮೀರಿ ಹೋಗಿದೆ. ಪೂಜಾ ಸೇವೆ ಮಾಡಿಸಿದವರಿಗೆ ಹಿಂದೆ ರವಿಕೆ ಕಣವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿತ್ತು. 5 ನೇ ವರ್ಷಕ್ಕೆ ಸೀರೆ ವಿತರಣೆ ಮಾಡಿದ್ದೇವು. ಅದಾದ ಬಳಿಕ ಮತ್ತೆ ರವಿಕೆಕಣ ವಿತರಣೆ ಮಾಡಲಾಗುತ್ತಿತ್ತು. ಇದೀಗ 17 ನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ಸೀರೆ ವಿತರಣೆ ಮಾಡುತ್ತಿದ್ದೇವೆ ಎಂದರು.


ಮುಖ್ಯ ಅತಿಥಿ ಜಯಶ್ರೀ ಈಶ್ವರ ಭಟ್ ಪಂಜಿಗುಡ್ಡೆ, ಅನ್ನಪೂರ್ಣಿಮ ಆರ್ ರೈ ಕುತ್ಯಾಡಿ ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ ನಡೆಯಿತು. ಪೂಜೆ ಮಾಡಿಸಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ಸೀರೆ ವಿತರಣೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಮಾಡಿದರು. ಸಮಿತಿ ಕಾರ್ಯದರ್ಶಿ ಸುಜಯಾ, ಸದಸ್ಯೆ ಶಾರದಾ ಅರಸ್, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಸೇವಾ ಕೇಂದ್ರ ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ, ಸ್ವರ್ಣಲತಾ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ ಸ್ವಾಗತಿಸಿದರು. ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ವಿ ರೈ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಿರೀಕ್ಷಗೂ ಮೀರಿ ಬಂದ ಭಕ್ತರು ಪೂಜಾ ರಶೀದಿಯೇ ಖಾಲಿ
ಶ್ರೀ ವರಮಹಾಲಕ್ಷ್ಮೀ ಪೂಜೆಯಲ್ಲಿ ಸೇವಾ ರಶೀದಿ ಮಾಡಿದ ಭಕ್ತರಿಗೆ ಪೂಜಾ ಪ್ರಸಾದ ರೂಪದಲ್ಲಿ ನಿತ್ಯ ಪ್ರಸಾದದ ಜೊತೆಗೆ ಸೀರೆಯನ್ನು ನೀಡುವ ಕಾರ್ಯಕ್ರಮದ ಅಂಗವಾಗಿ ಭಕ್ತರು ನಿರೀಕ್ಷೆಗೂ ಮೀರಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಸೇವಾ ರಶೀದಿಯು ಮುಗಿದಿದ್ದು, ಕೊನೆಗೆ ರಶೀದಿ ಇಲ್ಲದವರಿಗೆ ಪ್ರಸಾದ ರೂಪದಲ್ಲಿ ನಿತ್ಯ ಪ್ರಸಾದ ಬಳೆ, ರವಿಕೆ ಕಣ ನೀಡುವ ವ್ಯವಸ್ಥೆ ಕಲ್ಪಿಸಲಾಯಿತು.

LEAVE A REPLY

Please enter your comment!
Please enter your name here