ಉಪ್ಪಿನಂಗಡಿ: ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಹಲೇಜಿ ಎಂಬಲ್ಲಿ ಶನಿವಾರ ಸಂಭವಿಸಿದೆ.
ತುರ್ಕಳಿಕೆ ಕರೆಂಕಿತೋಡಿ ನಿವಾಸಿ ಮಹಮ್ಮದ್ ತಂಝೀರ್ (16) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ. ಮುಹಮ್ಮದ್ ಮುಸ್ತಾಫ ಎಂಬವರ ಮಗನಾದ ಈತ ಪುತ್ತಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದು, ತನ್ನ ಶಾಲಾ ಶಿಕ್ಷಕರ ತಾಯಿಯ ಪುಣ್ಯ ತಿಥಿಯಲ್ಲಿ ಭಾಗವಹಿಸಲೆಂದು ಕರಾಯ ಗ್ರಾಮದ ಹಲೇಜಿಗೆ ಬಂದಿದ್ದ. ಮಧ್ಯಾಹ್ನದ ಊಟವನ್ನು ಮಾಡಿ ಹಿಂದಿರುಗುವ ವೇಳೆ, ಸನಿಹದಲ್ಲೇ ಹರಿಯುವ ತೋಡಿನ ನೀರಿಗೆ ಸ್ನಾನ ಮಾಡಲೆಂದು ಇಳಿದಾತ ಕಣ್ಮರೆಯಾಗಿದ್ದ. ಜೊತೆಗಿದ್ದ ಸಹಪಾಠಿಗಳು ಹುಡುಕಾಟ ನಡೆಸಿ ವಿಫಲರಾದಾಗ, ಶಿಕ್ಷಕರ ಮನೆಗೆ ಮಾಹಿತಿ ನೀಡಿದ್ದು, ಆ ಬಳಿಕ ನೀರಿನಾಳದಿಂದ ಆತನನ್ನು ಹೊರ ತೆಗೆದರಾದರೂ, ಆ ವೇಳೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕಳೆದ ಒಂದು ತಿಂಗಳ ಅಂತರದಲ್ಲಿ ಮಹಮ್ಮದ್ ಮುಸ್ತಾಫರವರ ತಾಯಿ, ತಮ್ಮನ ಪತ್ನಿ ಸಾವನ್ನಪ್ಪಿದ್ದು, ಇದೀಗ ತನ್ನ ಮಗನೇ ಸಾವಿಗೀಡಾಗುವುದರೊಂದಿಗೆ ಸತತ ಮೂರು ದುರ್ಮರಣಗಳನ್ನು ಇವರ ಕುಟುಂಬ ಕಾಣುವಂತಾಗಿದೆ.
ಘಟನೆಯಿಂದಾಗಿ ವಿದ್ಯಾರ್ಥಿಗಳ ಮೇಲಿನ ಪ್ರೀತಿ ಮತ್ತು ಗೌರವದಿಂದ ಅವರನ್ನು ತನ್ನ ಮನೆಯ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಮಂತ್ರಿಸಿ ಆಧರಾತಿಥ್ಯ ನೀಡಿದ ಬೆನ್ನಿಗೆಯೇ ತನ್ನ ಪ್ರೀತಿಯ ವಿದ್ಯಾರ್ಥಿ ನೀರಿಗಿಳಿದು ಸಾವನ್ನಪ್ಪಿದ ಘಟನೆಯಿಂದ ಶಿಕ್ಷಕರು ಆಘಾತಕ್ಕೀಡಾಗಿದ್ದಾರೆ. ಘಟನೆಗೆ ಸಂಬಂಧಿಸಿ ಮೃತ ಬಾಲಕನ ತಂದೆ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.