ಪುತ್ತೂರು ಉಪವಿಭಾಗದಲ್ಲಿ ಮೊದಲ ಪ್ರಯೋಗ-ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಿಜಿಟಲ್ ನೋಂದಣಿ ವ್ಯವಸ್ಥೆ ಜಾರಿ

0

ಪುತ್ತೂರು: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಜನ ಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಡಿಜಿಟಲ್ ನೋಂದಣಿ ವ್ಯವಸ್ಥೆ (Digital Registration) ಜಾರಿಗೊಳಿಸಲಾಗಿದೆ.
ಪ್ರತೀ ದಿನ ಸುಮಾರು 700 ರಿಂದ 800ರಷ್ಟು ಮಂದಿ ಚಿಕಿತ್ಸೆಗಾಗಿ ಭೇಟಿ ನೀಡುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ (Puttur Government Hospital) ಜನಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಈ ಡಿಜಿಟಲ್ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕ್ಯೂಆರ್ ಕೋಡ್ ಆಧಾರಿತ ಒಟಿಪಿ ನೋಂದಣಿ ಸೇವೆಯನ್ನು ರೋಗಿಗಳು ತಮ್ಮ ಮೊಬೈಲ್ ಫೋನ್‌ನೊಂದಿಗೆ ಆಸ್ಪತ್ರೆಯ ಅನನ್ಯ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ನೋಂದಣಿ ಮಾಡಬಹುದಾಗಿದೆ. ಫೋನ್ ಕ್ಯಾಮೆರಾ/ಸ್ಕ್ಯಾನರ್/ ಅಬಾ ಅಪ್ಲಿಕೇಶನ್/ಆರೋಗ್ಯ ಸೇತು ಅಪ್ಲಿಕೇಶನ್ (Aarogya Setu)/ಅಥವಾ ಯಾವುದೇ ಇತರ ಎಬಿಡಿಎಮ್ ಫ್ ಸಕ್ರಿಯಗೊಳಿಸಿದ ಅಪ್ಲಿಕೇಶನ್ ಬಳಸಿ ಸ್ಕ್ಯಾನ್ ಮಾಡಬಹುದಾಗಿದೆ.‌


ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಈ ವ್ಯವಸ್ಥೆ ಜಾರಿಯಾಗಿದ್ದು, ಉಪ ವಿಭಾಗ ಮಟ್ಟದ ಮೊದಲ ಪ್ರಯೋಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಾಗಿದೆ. ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ನಾಲ್ಕು ಕಡೆ ಡಿಜಿಟಲ್ ನೋಂದಣಿಯ ಫಲಕ ಅಳವಡಿಸಲಾಗಿದೆ. ಇದು ಸ್ಕ್ಯಾನ್ ಆಂಡ್ ಶೇರ್ ( ಸ್ಕ್ಯಾನ್ ಮಾಡಿ ಮತ್ತು ಹಂಚಿಕೊಳ್ಳಿ) ಎಂಬ ಹೆಸರಿನ ವ್ಯವಸ್ಥೆಯಾಗಿದೆ. ಜನ ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಇಲ್ಲಿ ಸ್ಕ್ಯಾನ್ ಮಾಡಿಕೊಂಡು ತಮ್ಮ ಸರತಿಯ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ. ತಮ್ಮ ಸರದಿ ಬರುವವರೆಗೆ ಆರಾಮವಾಗಿ ಕುಳಿತುಕೊಂಡು ಕಾಯಬಹುದಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೊತಿ ಪುತ್ತೂರಾಯ (Dr Asha Suresh Putturaya) ತಿಳಿಸಿದ್ದಾರೆ.


ಎ.ಸಿ. ಪರಿಶೀಲನೆ:
ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ (Jubin Mohapatra) ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಕ್ಯಾನ್ ಆಂಡ್ ಶೇರ್ ವ್ಯವಸ್ಥೆಯನ್ನು ಸ್ವತಃ ತಾವೇ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪರೀಕ್ಷಿಸಿದರು. ಇದೊಂದು ಉತ್ತಮ ಆಯ್ಕೆ. ಡಿಜಿಟಲ್ ಮಾಧ್ಯಮ ಬಳಸಿಕೊಂಡು ಜನರ ಸರತಿ ಸಾಲು ತಪ್ಪಿಸಲು ಸರಕಾರದ ಸೂಚನೆಯಂತೆ ಈ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.

ಸ್ಕ್ಯಾನ್ ಮಾಡುವಾಗ ಮೊಬೈಲ್ ನಂಬರ್ ಬದಲು ಆಧಾರ್ ನಂಬರ್ ಮೂಲಕ ಲಾಗಿನ್ ಆದಲ್ಲಿ ನಿರ್ದಿಷ್ಟ ಆಪ್‌ಗೆ ಪ್ರವೇಶ ಪಡೆಯಲು ಸಾಧ್ಯ. ಇಲ್ಲಿ ಆಧಾರ್ ಸಹಕಾರದಿಂದ ನಮ್ಮ ಪೂರ್ತಿ ವಿಳಾಸ ಮತ್ತಿತರ ಮಾಹಿತಿ ಆಸ್ಪತ್ರೆಯ ಕಂಪ್ಯೂಟರ್‌ನಲ್ಲಿ ಕಾಣಿಸುತ್ತದೆ. ಅದನ್ನು ನೇರ ಪ್ರಿಂಟ್ ತೆಗೆಯುವ ಮೂಲಕ ಮಾಹಿತಿಗಳನ್ನು ಬರೆಯುತ್ತಾ ಸಮಯ ಕಳೆಯುವ ಅನಿವಾರ್ಯತೆ ತಪ್ಪಿಸಬಹುದು. ಆಧಾರ್ ಲಿಂಕ್ ಮೂಲಕ ಅಭಾ ಕಾರ್ಡ್ (ಆಯುಷ್ಮಾನ್ ಭಾರತ್ ಹೆಲ್ತ್ ಎಕೌಂಟ್) ಐಡಿ ನಂಬರ್ ಪಡೆದುಕೊಳ್ಳಬಹುದು. ಈ ಚಾರ್ಟ್‌ನಲ್ಲಿ ರೋಗಿಗೆ ನೀಡಲಾದ ಔಷಧೀಯ ವಿವರಗಳನ್ನು ದಾಖಲಿಸಿದರೆ ಮುಂದೆ ದೇಶದ ಯಾವುದೇ ಮೂಲೆಯಲ್ಲಿ ಐಡಿ ಮೂಲಕ ವೈದ್ಯಕೀಯ ಚಿಕಿತ್ಸೆಯ ಕೇಸ್ ಹಿಸ್ಟರಿ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಡಾ.ಆಶಾ ಪುತ್ತೂರಾಯ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here