ಪುತ್ತೂರಿನಲ್ಲೂ ವೈದ್ಯರ ಸುರಕ್ಷತೆಗಾಗಿ ಕ್ರಮ-ಎ.ಸಿ ಸೂಚನೆ

0

ಪುತ್ತೂರು: ದೇಶದಾದ್ಯಂತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆಯ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್ (Supreme Court Of India) ತೀವ್ರ ಕಳವಳ ವ್ಯಕ್ತಪಡಿಸಿದ್ದಲ್ಲದೆ ವೈದ್ಯರ ಸುರಕ್ಷತೆಗಾಗಿ ‘ರಾಷ್ಟ್ರೀಯ ಕಾರ್ಯಪಡೆ’ ರಚಿಸಿ ಆದೇಶ ನೀಡಿದ ಬೆನ್ನಲ್ಲೆ ಪುತ್ತೂರು ಉಪವಿಭಾಗ ಮಟ್ಟದಲ್ಲಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ (Jubin Mohapatra) ಸೂಚನೆ ನೀಡಿದ್ದಾರೆ.


ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿ ವೈದ್ಯರ ಸುರಕ್ಷತೆ ಬಹಳ ಗಂಭೀರ ವಿಚಾರ. ಸರಕಾರಿ ಆಸ್ಪತ್ರೆಗಳಲ್ಲಿ ಹೋಮ್ ಭದ್ರತಾ ಸಿಬ್ಬಂದಿಗಳ ಕೊರತೆಯನ್ನು ಗಂಭೀರವಾಗಿ ಚಿಂತಿಸಿ ಅವರ ನೇಮಕದ ಕುರಿತು ಯೋಚಿಸಲಾಗಿದೆ. ಮುಂದೆ ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಿಸುವ ಅಗತ್ಯವಿದೆ.

ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರ ಸುರಕ್ಷತೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲವನ್ನು ಕೈಗೊಳ್ಳಲು ಸೂಚಿಸಲಾಗಿದೆ. ಆಪತ್ಕಾಲದಲ್ಲಿ ಆರೋಗ್ಯ ಮತ್ತು ಜೀವ ಕಾಪಾಡುವ ವೈದ್ಯರ ಮೇಲೆ ಸಾರ್ವಜನಿಕರು ಹಲ್ಲೆ ಮಾಡುವ ಮನಸು ಮಾಡಬಾರದು. ವೈದ್ಯರ ಕಡೆಯಿಂದ ಯಾವುದಾದರೂ ತಪ್ಪುಗಳಾದಲ್ಲಿ ಪೊಲೀಸ್ ದೂರು ನೀಡಬಹುದು. ಅಥವಾ ನೇರವಾಗಿ ನನಗೆ ದೂರು ನೀಡಬಹುದು ಎಂದರು. ಇದೇ ಸಂದರ್ಭ ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಯನ್ನು ಸುಮಾರು ರೂ. 3 ಲಕ್ಷದಲ್ಲಿ ಶೀಘ್ರವೇ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.


ಸೂಕ್ಷ್ಮ ಪ್ರದೇಶಗಳಲ್ಲಿ ಸಿ ಸಿ ಕ್ಯಾಮರಾ ಕಡ್ಡಾಯ:
ತಾಲೂಕಿನಲ್ಲಿ ನಡೆಯುವ ಅಪರಾಧ ಮತ್ತು ಅಪಘಾತಗಳ ಕುರಿತು ಅಂಕಿ ಅಂಶ ವರದಿ ಬೇಕು. ಇದರ ಆಧಾರದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಪಟ್ಟಿಮಾಡಿ ಅಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕು ಎಂದು ಪೊಲೀಸ್ ಇಲಾಖೆಗೆ ಎ.ಸಿ ಸೂಚಿಸಿದರು.


ಕೌಟುಂಬಿಕ ಕಲಹದ ವಿರುದ್ಧ ಜಾಗೃತಿ ಮೂಡಿಸಬೇಕು:
ಸಮಾಜದಲ್ಲಿ ಅನೇಕ ಕಡೆ ಮಹಿಳಾ ದೌರ್ಜನ್ಯ, ಕೌಟುಂಬಿಕ ಸಮಸ್ಯೆಗಳು ಇದ್ದರೆ ಅದರ ಅಂಕಿ ಅಂಶ ಆಧಾರಿತ ವರದಿ ತಯಾರಿಸಬೇಕು. ಮುಂದಿನ ದಿನ ಇದರ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಗ್ರಾಮೀಣ ಮಟ್ಟದಲ್ಲಿ ಆಗಬೇಕು. ಸರಕಾರಿ ಆಸ್ಪತ್ರೆಯು ಸಾರಥ್ಯ ವಹಿಸಿಕೊಂಡು ಇತರ ಇಲಾಖೆಗಳ ಸಹಕಾರ ಪಡೆದುಕೊಳ್ಳಬೇಕು ಎಂದು ಎ.ಸಿ. ಸೂಚಿಸಿದರು. ಸಭೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೊತಿ ಪುತ್ತೂರಾಯ, ವೈದ್ಯರಾದ ಡಾ. ಜಯದೀಪ್, ನಗರ ಠಾಣೆ ಇನ್‌ಸ್ಪೆಕ್ಟರ್ ಜೆ.ಜಿ. ಸತೀಶ್, ಕಂದಾಯ, ಮೆಸ್ಕಾಂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾವು ಕಡಿತ ಪ್ರಕರಣ ಜಾಸ್ತಿ
ಆಗಸ್ಟ್‌ನಲ್ಲಿ ಹಾವು ಕಡಿತ ಪ್ರಕರಣಗಳು ಜಾಸ್ತಿಯಾಗಿದೆ. ಪ್ರತೀ ತಿಂಗಳು 15 ರಿಂದ 20 ಪ್ರಕರಣಗಳು ಸರಕಾರಿ ಆಸ್ಪತ್ರೆಗೆ ಬರುತ್ತವೆ ಎಂದು ಸಹಾಯಕ ಕಮೀಷನರ್ ಅವರ ಪ್ರಶ್ನೆಗೆ ವೈದ್ಯಾಧಿಕಾರಿ ಉತ್ತರಿಸಿದರು. ಸಹಾಯಕ ಕಮೀಷನರ್ ಅವರು ಹಾವು ಕಡಿತ ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಪ್ರಥಮ ಚಿಕಿತ್ಸೆ ಏನು ಮಾಡಬೇಕೆಂಬ ಬಗ್ಗೆ ಭಿತ್ತಿ ಪತ್ರದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು.

LEAVE A REPLY

Please enter your comment!
Please enter your name here