ಗಣೇಶೋತ್ಸವ, ಈದ್‌ಮಿಲಾದ್ ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದತೆ ಕಾಪಾಡಿಕೊಳ್ಳಿ

0

ಧಾರ್ಮಿಕ ಮುಖಂಡರುಗಳಿಗೆ ನಗರಠಾಣಾ ಇನ್‌ಸ್ಪೆಕ್ಟರ್ ಸೂಚನೆ

ಪುತ್ತೂರು: ಮುಂಬರುವ ಗಣೇಶೋತ್ಸವ ಹಬ್ಬ ಹಾಗೂ ಈದ್‌ಮಿಲಾದ್ ಹಬ್ಬಗಳ ಆಚರಣೆಗೆ ಸಂಬಂಧಿಸಿ ಧಾರ್ಮಿಕ ಮುಖಂಡರ ಜತೆ ಪುತ್ತೂರು ನಗರ ಠಾಣೆಯಲ್ಲಿ ಶಾಂತಿ ಸಭೆ ಆ.29ರಂದು ನಡೆಯಿತು.

ನಗರಠಾಣಾ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ.ಮಾತನಾಡಿ ಇದುವರೆಗೆ ಪುತ್ತೂರಿನಲ್ಲಿ ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆದಿದೆ. ಅಹಿತಕರ ಘಟನೆಗಳು ನಡದಿಲ್ಲ. ಈ ಬಾರಿಯೂ ಪ್ರತೀವರ್ಷದಂತೆ ಹಬ್ಬಗಳ ಆಚರಣೆ ಮಾಡುತ್ತೀರಿ ಎಂಬ ನಂಬಿಕೆ ಇದೆ. ಹಬ್ಬಗಳ ಮೆರವಣಿಗೆ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕರು ಸ್ವಯಂಸೇವಕರ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾನೂನು ವ್ಯವಸ್ಥೆಗೆ ನಮ್ಮೊಂದಿಗೆ ಸಹಕರಿಸಬೇಕು ಎಂದು ಹೇಳಿದರು. ಗಣೇಶೋತ್ಸವ ಹಾಗೂ ಈದ್ ಮಿಲಾದ್ ಸಂದರ್ಭದಲ್ಲಿ ಮೆರವಣಿಗೆ ನಡೆಸುವಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿ ಸಮಯ ಪಾಲನೆ ಮಾಡಬೇಕು. ಮೆರವಣಿಗೆಗಳನ್ನು ಸಾಧ್ಯವಾದಷ್ಟು 10 ಗಂಟೆ ಒಳಗೆ ಮುಗಿಸಬೇಕು. ಡಿ.ಜೆ.ಗೆ ಅವಕಾಶ ಇರುವುದಿಲ್ಲ. ದೇವಾಲಯ, ಮಸೀದಿ ಮುಂಭಾಗ ಅಸಂಬದ್ಧ ಘೋಷಣೆ ಮಾಡುವುದು ಬೇಡ ಎಂದು ಸೂಚನೆ ನೀಡಿದರು. ಮೆರವಣಿಗೆ ಸಂದರ್ಭ ತ್ರಿಬಲ್ ರೃಡಿಂಗ್ ಬೇಡ. ಇದಕ್ಕೆ ಅವಕಾಶ ಮಾಡಿಕೊಡದಂತೆ ಸಂಘಟಕರಲ್ಲಿ ವಿನಂತಿಸಿದರು.

ಎಸ್‌ಐ ಆಂಜನೇಯ ರೆಡ್ಡಿ ಮಾತನಾಡಿ ಸಾರ್ವಜನಿಕ ಸೇವೆಗೆ, ಹಬ್ಬಕ್ಕೆ ಅನುಕೂಲ ಮಾಡಿಕೊಡುವುದು ನಮ್ಮ ಕರ್ತವ್ಯ. ಉತ್ಸವಗಳಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಬೇಕು. ಸಣ್ಣ ಪುಟ್ಟ ಘಟನೆ ಆದಾಗ ಅವಸರ ಮಾಡದೇ ಸರಿಪಡಿಸಿಕೊಳ್ಳಬೇಕು. ಅವರವರ ಧರ್ಮ ಅವರಿಗೆ ಮುಖ್ಯ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದು ಹೇಳಿದರು ದ.ಕ. ಜಿಲ್ಲೆಯ ಜನರು ಒಳ್ಳೆಯವರು. ದ.ಕ. ಜಿಲ್ಲೆ ಭೂಮಿಯ ಮೇಲಿನ ಸ್ವರ್ಗ ಎಂದು ಹೇಳಿದ ಅವರು ಶಾಂತಿ ಸೌಹಾರ್ದತೆ ಕಾಪಾಡಬೇಕು. ಧರ್ಮ ಸಮುದಾಯ ಜೋಡಿಸುವ ಕೆಲಸ ಮಾಡಬೇಕು ಎಂದರು.

ಸಂಚಾರ ಪೊಲೀಸ್ ಠಾಣಾ ಎಸ್‌ಐ ಉದಯರವಿ ಮಾತನಾಡಿ ಪುತ್ತೂರು ಪೇಟೆಯಲ್ಲಿ ಕಿರಿದಾದ ರಸ್ತೆಯ ಸಮಸ್ಯೆ ಇದೆ. ಅನಗತ್ಯ ಸಂಚಾರ ಸಮಸ್ಯೆ ಮಾಡಬೇಡಿ. ರಸ್ತೆಯ ಬದಿಯಲ್ಲೇ ವಾಹನಗಳ ಪಾರ್ಕಿಂಗ್ ಮಾಡಬೇಡಿ. ರಸ್ತೆಯಲ್ಲಿ ಜನರ ದಟ್ಟನೆ ಆಗದಂತೆ ನೋಡಿಕೊಳ್ಳಿ. ಜನರೇ ಜವಾಬ್ದಾರಿ ವಹಿಸಿ ಎಂದು ಹೇಳಿದರು.

ನೂರುದ್ದಿನ್ ಸಾಲ್ಮರ ಈದ್‌ಮಿಲಾದ್ ಬಗ್ಗೆ ಮಾಹಿತಿ ನೀಡಿ ಸೆ.15-16 ರಂದು ಈದ್‌ಮಿಲಾದ್ ಹಬ್ಬ ಇರುತ್ತದೆ. ದರ್ಬೆ ವೃತ್ತದಿಂದ ಕಿಲ್ಲೆ ಮೈದಾನ ತನಕ ಪಾದಯಾತ್ರೆ ಇರುತ್ತದೆ. ದಫ್ ಮೆರವಣಿಗೆ ಇರುತ್ತದೆ. ಕಿಲ್ಲೆ ಮೈದಾನದಲ್ಲಿ ಸಭೆ ಇರುತ್ತದೆ ಎಂದು ಹೇಳಿದರು. ಮೆರವಣಿಗೆ ಸಂದರ್ಭದಲ್ಲಿ ದರ್ಬೆಯಲ್ಲಿ ವಾಹನಗಳ ಡೈವರ್ಟ್ ಮಾಡಬೇಕು ಸಲಹೆ ಕೇಳಿಬಂತು. ಬಿಜೆಪಿ ಮುಖಂಡರುಗಳಾದ ಮುರಳಿಕೃಷ್ಣ ಹಸಂತಡ್ಕ, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ಬಜರಂಗದಳದ ಹರೀಶ್ ದೋಳ್ಪಾಡಿ, ಶ್ರೀಮಹಾಲಿಂಗೇಶ್ವರ ವಠಾರದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ದಯಾನಂದ, ದಿನೇಶ್ ಪಂಜಿಗ, ಕಿಲ್ಲೆ ಗಣೇಶೋತ್ಸವದ ಪದಾಧಿಕಾರಿಗಳಾದ ದಿನೇಶ್ ಪಿ.ವಿ., ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸುದೇಶ್ ಚಿಕ್ಕಪುತ್ತೂರು, ದರ್ಬೆ ಶ್ರೀಗಣೇಶೋತ್ವವದ ಪದಾಧಿಕಾರಿಗಳಾದ ಪ್ರಕಾಶ್ ದರ್ಬೆ, ಕಾವೇರಿಕಟ್ಟೆ ಗಣೇಶೋತ್ಸವದ ಗೋವರ್ಧನ್, ಪ್ರಗತಿ ಸ್ಟಡಿ ಸೆಂಟರ್‌ನ ಗೋಕುಲ್‌ನಾಥ್, ಕೋಡಿಂಬಾಡಿ ಗಣೇಶೋತ್ಸವದ ಕುಮಾರನಾಥ್ ಎಸ್., ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಮಾಜಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಬಪ್ಪಳಿಗೆ ಮಸೀದಿಯ ಲವ್ಲಿ ಅಬ್ದುಲ್ ಹಮೀದ್, ನ್ಯಾಯವಾದಿ ಶಾಕೀರ್ ಹಾಜಿ ಮಿತ್ತೂರು, ನೌಶಾದ್ ಹಾಜಿ ಮುಂತಾದವರು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here