‘ಕಾಳು ಮೆಣಸು ಕೃಷಿ ಋಷಿ’ ಸುರೇಶ್ ಬಲ್ನಾಡು ಅವರಿಗೆ ಅತ್ಯುತ್ತಮ ಸಾಂಬಾರು ಬೆಳೆ ಕೃಷಿಕ ಪ್ರಶಸ್ತಿ -ನಾಳೆ ಪ್ರದಾನ

0

ಪುತ್ತೂರು: ಕೇರಳದ ಕೋಝಿಕ್ಕೋಡ್ ನಲ್ಲಿರುವ ಭಾರತ ಸರಕಾರದ ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಮಟ್ಟದ ICAR-IISR ಸಂಸ್ಥೆಯ ಸ್ವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಅತ್ಯುತ್ತಮ ಸಾಂಬಾರು ಬೆಳೆ ಕೃಷಿಕ ಪ್ರಶಸ್ತಿಗೆ (ಬೆಸ್ಟ್ ಸ್ಪೈಸ್ -ಫಾರ್ಮರ್ ಅವಾರ್ಡ್) ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು (Suresh Balnadu) ಭಾಜನರಾಗಿದ್ದಾರೆ.


ಸುರೇಶ್ ಬಲ್ನಾಡು ಅವರಿಗೆ ಈ ಪ್ರಶಸ್ತಿಯನ್ನು ಸೆ.3ರಂದು ಕೋಝಿಕ್ಕೋಡ್ ನಲ್ಲಿರುವ (Kozhikode) ICAR-IISR ಸಂಸ್ಥೆಯ ಸ್ವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಕೊಡಮಾಡಲಾಗುವುದು ಎಂದು ಸಂಸ್ಥೆಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.


ಪುತ್ತೂರಿನ ಬಲ್ನಾಡಿನಲ್ಲಿದ್ದ (Balnadu) ತನ್ನ 14 ಎಕರೆ ಕೊರಕಲು ಭೂಮಿಯನ್ನು ತನ್ನ ನಿರಂತರ ಪರಿಶ್ರಮದ ಫಲವಾಗಿ ಸುರೇಶ್ ಬಲ್ನಾಡು ಅವರು ಕಳೆದ ಒಂದು ದಶಕದಲ್ಲಿ ವೈವಿಧ್ಯಮಯ ಕೃಷಿ ಭೂಮಿಯನ್ನಾಗಿ ಪರಿವರ್ತನೆ ಮಾಡುವ ಮೂಲಕ ತಾವೊಬ್ಬ ನಿಜವಾದ ’ಕೃಷಿ ಋಷಿ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ಸುರೇಶ್ ಬಲ್ನಾಡು ಅವರು ಕಾಳು ಮೆಣಸು ಕೃಷಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಹೊಸ ಪ್ರಯೋಗಗಳನ್ನು ಮಾಡುತ್ತಾ ಇದೀಗ ತಮ್ಮ ತೋಟವನ್ನು ’ಕಾಳು ಮೆಣಸಿನ ಕಾಡ’ನ್ನಾಗಿ ಪರಿವರ್ತಿಸಿದ್ದಾರೆ. ಏರು-ಇಳಿಜಾರಿನಿಂದ ಕೂಡಿರುವ ಮತ್ತು ಭೂಮಿಯಲ್ಲಿ ನೀರು ನಿಲ್ಲದ ಭೌಗೋಳಿಕ ಸ್ಥಿತಿಯಲ್ಲಿರುವ ಇವರ ಕೃಷಿ ಭೂಮಿಯನ್ನು ತಮ್ಮ ಪರಿಶ್ರಮ ಮತ್ತು ಸಾಹಸದ ಮೂಲಕ ಬೃಹತ್ ನೈಸರ್ಗಿಕ ತೊಟ್ಟಿಗಳನ್ನು ನಿರ್ಮಿಸುವ ಮೂಲಕ ಈ ಭಾಗದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಮತ್ತು ತನ್ನ ಕೃಷಿ ಭೂಮಿಗೆ ವರ್ಷಪೂರ್ತಿ ನೀರಿನ ಮೂಲ ಆಗುವಂತೆ ಮಾಡಿದ್ದಾರೆ. 64ರ ಹರೆಯದ ಸುರೇಶ್ ಬಲ್ನಾಡು ಅವರು ಪಣಿಯೂರು-1 ಕಾಳುಮೆಣಸು ತಳಿಯನ್ನು ತಮ್ಮ ತೋಟದ ತುಂಬಾ ಹಬ್ಬಿಸಿ ಬೆಳೆಸಿರುವ ರೀತಿ ಕೃಷಿಕರಿಗೆಲ್ಲಾ ಸ್ಪೂರ್ತಿಯ ರೀತಿಯಲ್ಲಿದೆ. ಇವರ ಈ ಮಾದರಿ ತೋಟಕ್ಕೆ ಕರಾವಳಿ ಭಾಗದಿಂದ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಕೃಷಿಕರ ತಂಡಗಳು ಅಧ್ಯಯನಕ್ಕಾಗಿ ಬರುತ್ತಿರುತ್ತಾರೆ.


ಇನ್ನು, ಸುರೇಶ್ ಅವರು ತಮ್ಮ ತೋಟದಲ್ಲಿ ನೀರು ಹಾಯಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಿದ್ದು ಇದಕ್ಕೆ ಸುಧಾರಿತ ಮೊಬೈಲ್ ಆಪ್ ಬಳಸುತ್ತಿದ್ದಾರೆ ಮಾತ್ರವಲ್ಲದೆ ಗುಡ್ಡದ ತುದಿಯಲ್ಲಿರುವ ಅಡಿಕೆ ಗಿಡಗಳಿಗೆ ಮದ್ದು ಬಿಡುವುದಕ್ಕಾಗಿ ತಮ್ಮ ಮನೆಯಿಂದಲೇ ಮದ್ದು ಹಾಯಿಸುವ ಪಂಪ್ ಇರಿಸಿ ಪೈಪ್ ಗಳ ಮೂಲಕ ’ಒತ್ತಡ ವಿಧಾನದಲ್ಲಿ’ ಮದ್ದು ಬಿಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಲೇ ಸುರೇಶ್ ಬಲ್ನಾಡು ಅವರ ಕೃಷಿ ಭೂಮಿಯಲ್ಲಿ ಅವರು ಕಳೆದ ನಾಲ್ಕು ದಶಕಗಳಿಂದ ಮಾಡಿರುವ ’ಕೃಷಿ ತಪಸ್ಸಿಗೆ’ ಸಿಕ್ಕಿರುವ ಮನ್ನಣೆ ಎಂಬಂತೆ ಈ ಪ್ರತಿಷ್ಠಿತ ಪ್ರಶಸ್ತಿ ಈ ಕೃಷಿ ಋಷಿಯನ್ನು ಅರಸಿ ಬಂದಿದೆ.

LEAVE A REPLY

Please enter your comment!
Please enter your name here